Deepavali: ಪಟಾಕಿ ಸಿಡಿಸುವಾಗ ಜೋಪಾನ! ಗಾಯಗಳಾದ್ರೆ ಕೂಡಲೇ ಈ ಕೆಲಸ ಮಾಡಿ
ದೀಪಾವಳಿ ಬೆಳಕಿನ ಹಬ್ಬವಾದರೆ, ಪ್ರತಿ ವರ್ಷ ಹಲವರ ಬದುಕಲ್ಲಿ ಕತ್ತಲನ್ನು ಸಹ ಆವರಿಸುತ್ತದೆ. ಹಬ್ಬದ ಸಂಭ್ರಮದಲ್ಲ ಸಿಡಿಸೋ ಪಟಾಕಿಯಿಂದ ಸಣ್ಣ ಮಕ್ಕಳು ಗಾಯಗೊಳ್ಳುವುದು ಸೇರಿದಂತೆ ಹಲವು ದುರ್ಘಟನೆಗಳು ಸಂಭವಿಸುತ್ತಲೇ ಇವೆ. ಈ ಬಾರಿ ಹಬ್ಬಕ್ಕೂ ಮುನ್ನವೇ ಬೆಂಗಳೂರಿನ ಮಿಂಟೋ ಕಣ್ಣಿನ ಆಸ್ಪತ್ರೆ ಸಜ್ಜಾಗಿದೆ. ಪಟಾಕಿ ಸಿಡಿತದಿಂದ ಬರುವವರಿಗೆ ಚಿಕಿತ್ಸೆ ನೀಡಲು ಪ್ರತ್ಯೇಕ ವಾರ್ಡ್ ಕೂಡ ಮೀಸಲಿಟ್ಟಿದೆ. ಇನ್ನು ದಿನದ 24 ಗಂಟೆಗಳು ಸಹ ಇಲ್ಲಿ ಚಿಕಿತ್ಸೆಗೆ ವ್ಯವಸ್ಥೆ ಇರಲಿದೆ.
ದೀಪಾವಳಿ ಸಂದರ್ಭದಲ್ಲಿ ಪಟಾಕಿ ಸಿಡಿತದಿಂದ ಕಣ್ಣಿನ ಸಮಸ್ಯೆಯ ಪ್ರಕರಣಗಳು ಹೆಚ್ಚಾಗಿ ವರದಿಯಾಗುತ್ತವೆ. ಈ ಹಿನ್ನೆಲೆಯಲ್ಲಿ ಕಣ್ಣಿನ ಚಿಕಿತ್ಸೆ ನೀಡಲೆಂದೇ ಮಿಂಟೋ ಆಸ್ಪತ್ರೆ ಪ್ರತಿ ವರ್ಷ ವಿಶೇಷ ಸೇವೆ ಒದಗಿಸುತ್ತದೆ. ಅದರಂತೆ ಈ ಬಾರಿಯ ದೀಪಾವಳಿಗೂ ಮಿಂಟೋ ಸಜ್ಜಾಗಿದೆ. ಕಣ್ಣಿಗೆ ಸಂಬಂಧಿಸಿದ ಸಮಸ್ಯೆಗಳಿಗೆ ಚಿಕಿತ್ಸೆ ನೀಡಲು ಪ್ರತ್ಯೇಕ ವಾರ್ಡ್ ಮೀಸಲಿಟ್ಟಿದೆ. ಒಂದು ವೇಳೆ ಪಟಾಕಿ ಸಿಡಿತದಿಂದ ಏನಾದರೂ ಅವಘಡಗಳು ಸಂಭವಿಸಿದರೆ, ಕೂಡಲೇ ಮಿಂಟೋಗೆ ಧಾವಿಸುವಂತೆ ತಿಳಿಸಿದೆ.

ಮೊದಲು ದೀಪಾವಳಿ ವೇಳೆ ಎಂದಿನಂತೆ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಈ ಬಾರಿ ಪ್ರತ್ಯೇಕ ವಾರ್ಡ್ ಅನ್ನೇ ದೀಪಾವಳಿ ಸಂದರ್ಭದಲ್ಲಿ ಮಿಂಟೋ ತೆರೆದಿದೆ. ಪಟಾಕಿ ಸಿಡಿತದಿಂದ ಕೇವಲ ಕಣ್ಣಿಗೆ ಮಾತ್ರ ಗಾಯಗಳಾಗುವುದಿಲ್ಲ. ದೇಹದ ಬೇರೆ ಭಾಗಗಳಿಗೂ ಅಪಾಯ ಎದುರಾಗುತ್ತವೆ.
ಹಾಗಾಗಿ ಒಂದು ವೇಳೆ ಕಣ್ಣಿನ ಸಮಸ್ಯೆ ಜೊತೆಗೆ ಸುಟ್ಟಗಾಯಗಳಿಂದ ಬರುವವರಿಗೆ ತಕ್ಷಣವೇ ಅವರನ್ನು ಸಮೀಪದ ವಿಕ್ಟೋರಿಯಾ ಬರ್ನಿಂಗ್ ವಾರ್ಡ್‌ಗೆ ಕಳುಹಿಸಿಕೊಡುವ ವ್ಯವಸ್ಥೆ ಮಾಡಿಕೊಂಡಿದೆ. ಇನ್ನು ವಿಕ್ಟೋರಿಯಾ ಆಸ್ಪತ್ರೆಯಲ್ಲೂ ಸುಟ್ಟಗಾಯಗಳ ಚಿಕಿತ್ಸೆಗಾಗಿ ಪ್ರತ್ಯೇಕ ವಾರ್ಡ್ ತೆರೆಯಲಾಗಿದೆ.

ಈಗಾಗಲೇ ಕೇಸ್ ವರದಿ!
ಪ್ರತಿ ವರ್ಷ ದೀಪಾವಳಿ ಹಬ್ಬದಂದು ಪಟಾಕಿ ಸಿಡಿಸಿಕೊಂಡು ಕಣ್ಣಿಗೆ ಗಾಯ ಮಾಡಿಕೊಳ್ಳುವವರ ಸಂಖ್ಯೆ ಹೆಚ್ಚಾಗಿರುತ್ತಿತ್ತು. ಈ ಬಾರಿ ಹಬ್ಬಕ್ಕೂ ಮುನ್ನವೇ ಬೆಂಗಳೂರಿನಲ್ಲಿ ಪಟಾಕಿ ದುರಂತ ನಡೆದುಹೋಗಿದೆ. ಮಿಂಟೋದಲ್ಲಿ ಪಟಾಕಿ ಸಿಡಿತದ ಮೊದಲ ಪ್ರಕರಣ ಕೂಡ ವರದಿಯಾಗಿದೆ. ಬೆಂಗಳೂರಿನ 18 ವರ್ಷದ ಬಾಲಕನೊಬ್ಬ ಪಟಾಕಿಯಿಂದ ಕಣ್ಣಿಗೆ ಹಾನಿ ಮಾಡಿಕೊಂಡಿದ್ದಾನೆ. ಆತನನ್ನು ಮಿಂಟೋ ಆಸ್ಪತ್ರೆಗೆ ದಾಖಲಿಸಿ, ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ. ಮಕ್ಕಳು, ಯುವಕರು ಹಾಗೂ ಮಹಿಳೆಯರಿಗೆ ಪ್ರತ್ಯೇಕವಾಗಿ ಚಿಕಿತ್ಸೆ ನೀಡಲು ಮಿಂಟೋ ಅಲರ್ಟ್ ಆಗಿದೆ.
ಇನ್ನು ಈ ಬಾರಿ ಸರ್ಕಾರ ಕೂಡ ಪರಿಸರ ಸ್ನೇಹಿ ಹಸಿರು ಪಟಾಕಿಗಳನ್ನು ಮಾತ್ರವೇ ಸಿಡಿಸುವಂತೆ ಖಡಕ್ ಸೂಚನೆ ನೀಡಿದೆ. ಇದಕ್ಕಾಗಿ ಪಟಾಕಿ ಮೇಲಿರುವ ಕ್ಯೂ ಆರ್ ಕೋಡ್ ಸ್ಕ್ಯಾನ್ ಮಾಡಿ ಹಸಿರು ಪಟಾಕಿ ಹೌದಾ, ಅಲ್ಲವಾ ಎಂಬುದನ್ನು ಖಚಿತ ಪಡಿಸಿಕೊಳ್ಳುವುದು ಉತ್ತಮ. ಇನ್ನು ಪರವಾನಗಿ ಹೊಂದಿರುವ ಅಂಗಡಿಗಳಿಂದಲೇ ಪಟಾಕಿಗಳನ್ನು ಖರೀದಿಸಬೇಕು. ಸಾಧ್ಯವಾದಷ್ಟು ಚಿಕ್ಕಮಕ್ಕಳು ಪಟಾಕಿ ಹಚ್ಚದಂತೆ ನೋಡಿಕೊಳ್ಳಿ ಎಂದು ಪೋಷಕರಿಗೆ ಸಲಹೆ ನೀಡಿದೆ.

ಜನರ ಓಡಾಟ ಕಡಿಮೆ ಇರುವ ಹಾಗೂ ಮೈದಾನಗಳಲ್ಲಿ ಪಟಾಕಿ ಸಿಡಿಸಿ. ಹೆಚ್ಚಾಗಿ ವಾಹನಗಳನ್ನು ನಿಲ್ಲಿಸಿರುವ ಪ್ರದೇಶಗಳಲ್ಲಿ ಪಟಾಕಿ ಸಿಡಿಸಬಾರದು. ರಾತ್ರಿ 8 ಗಂಟೆಯಿಂದ 10 ಗಂಟೆಯೊಳಗೆ ಮಾತ್ರ ಪಟಾಕಿ ಸಿಡಿಸುವಂತೆ ಖಡಕ್ ಆದೇಶ ಮಾಡಲಾಗಿದೆ. ಒಂದು ವೇಳೆ ಈ ನಿಯಮ ಉಲ್ಲಂಘಿಸಿದ್ರೆ ಸುಪ್ರೀಂಕೋರ್ಟ್ ಆದೇಶದಂತೆ ಕ್ರಮ ತೆಗೆದುಕೊಳ್ಳುವುದಾಗಿ ಎಚ್ಚರಿಕೆ ನೀಡಿದೆ. ಪಟಾಕಿ ಸಿಡಿಸುವಾಗ ಯಾವುದೇ ಅವಫಡಗಳು ಸಂಭವಿಸಿದರೆ, ಕೂಡಲೇ 112 ಹಾಗೂ 108ಕ್ಕೆ ಕರೆ ಮಾಡಬೇಕು. ಪೆಟ್ರೋಲ್ ಬಂಕ್, ಧಾರ್ಮಿಕ ಸ್ಥಳಗಳು, ವೃದ್ಧಾಶ್ರಮಗಳ ಬಳಿ ಪಟಾಕಿ ಸಿಡಿಸಬೇಡಿ ಎಂದು ಸಲಹೆ ನೀಡಿದೆ.












Click it and Unblock the Notifications