Bengaluru: ಬೆಂಗಳೂರಿನಲ್ಲಿ ನಿರ್ಮಾಣವಾಗಲಿದೆ ದಕ್ಷಿಣ ಭಾರತದ ಅತಿ ದೊಡ್ಡ ಲಾಜಿಸ್ಟಿಕ್ ಪಾರ್ಕ್ : ಮಾಹಿತಿ, ವಿವರ
ದಕ್ಷಿಣ ಭಾರತದ ಅತಿದೊಡ್ಡ ಮಲ್ಟಿಮೋಡಲ್ ಲಾಜಿಸ್ಟಿಕ್ಸ್ ಪಾರ್ಕ್ (MMLP) ಬೆಂಗಳೂರಿನಲ್ಲಿ ನಿರ್ಮಾಣವಾಗಲಿದೆ. ಬೆಂಗಳೂರು ಉತ್ತರ ಭಾಗದ ಹೊರವಲಯದಲ್ಲಿರುವ ಓಬಳಾಪುರದಲ್ಲಿ ಈ ಲಾಜಿಸ್ಟಿಕ್ ಪಾರ್ಕ್ ನಿರ್ಮಾಣವಾಗಲಿದೆ. ಈಗಾಗಲೇ ಅಡಿಪಾಯ ಹಾಕುವ ಕೆಲಸ ಆರಂಭವಾಗಿದ್ದು, ಮಾರ್ಚ್‌ನಿಂದ ನಿರ್ಮಾಣ ಕೆಲಸ ಶುರುವಾಗಲಿದೆ.
400 ಎಕರೆ ವ್ಯಾಪ್ತಿಯಲ್ಲಿ ಈ ಲಾಜಿಸ್ಟಿಕ್ ಪಾರ್ಕ್ ತಲೆ ಎತ್ತಲಿದ್ದು, ಲಾಜಿಸ್ಟಿಕ್ಸ್, ವೇರ್ಹೌಸಿಂಗ್ ಮತ್ತು ಕೋಲ್ಡ್ ಸ್ಟೋರೇಜ್ ಸೌಲಭ್ಯಗಳನ್ನು ನೀಡಲಿದೆ. ಒಟ್ಟಾರೆ ಲಾಜಿಸ್ಟಿಕ್ಸ್ ವೆಚ್ಚವನ್ನು 13% ರಿಂದ 9% ಕ್ಕೆ ತಗ್ಗಿಸುವ ಮತ್ತು ರಫ್ತುಗಳನ್ನು ಸ್ಪರ್ಧಾತ್ಮಕವಾಗಿಸುವ ಗುರಿಯನ್ನು ಹೊಂದಿದೆ. 2070 ರ ವೇಳೆಗೆ ಸುಮಾರು 30 ಮಿಲಿಯನ್ ಮೆಟ್ರಿಕ್ ಟನ್ ಸರಕುಗಳ ಸಂಗ್ರಹಿಸುವ ಸಾಮರ್ಥ್ಯ ಹೊಂದಲಿದೆ.

ಕೈಗಾರಿಕಾ ಪ್ರದೇಶ ಅಭಿವೃದ್ಧಿ
ಈ ಲಾಜಿಸ್ಟಿಕ್ ಪಾರ್ಕ್ ನಿರ್ಮಾಣವು ಬೆಂಗಳೂರು, ತುಮಕೂರು ಮತ್ತು ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಕೈಗಾರಿಕಾ ಪ್ರದೇಶಗಳನ್ನು ಉತ್ತೇಜಿಸುವ ನಿರೀಕ್ಷೆಯಿದೆ. ಜೊತೆಗೆ, ಸರಕುಗಳನ್ನು ತಲುಪಿಸಲು ನಗರಕ್ಕೆ ಬರುವ ಟ್ರಕ್‌ಗಳ ಸಂಖ್ಯೆಯನ್ನು ಕಡಿಮೆ ಮಾಡಲಿದ್ದು, ಸಂಚಾರ ದಟ್ಟಣೆ ಕೂಡ ಸುಧಾರಿಸಲಿದೆ ಎಂದು ನಿರೀಕ್ಷೆ ಮಾಡಲಾಗಿದೆ.
₹1,770 ಕೋಟಿ ವೆಚ್ಚದಲ್ಲಿ ಈ ಪಾರ್ಕ್ ನಿರ್ಮಾಣವಾಗಲಿದೆ. ಬೆಂಗಳೂರು ಎಂಎಂಎಲ್‌ಪಿ ಪ್ರೈವೇಟ್ ಲಿಮಿಟೆಡ್ ನಿರ್ಮಾಣ ಮಾಡುತ್ತಿದ್ದು, ಮೂವರು ಪಾಲುದಾರರನ್ನು ಹೊಂದಿದೆ. ಎನ್‌ಹೆಚ್‌ಎಐ (NHAI)ನ ರಾಷ್ಟ್ರೀಯ ಹೆದ್ದಾರಿಗಳ ಲಾಜಿಸ್ಟಿಕ್ಸ್ ಮ್ಯಾನೇಜ್ಮೆಂಟ್ ಲಿಮಿಟೆಡ್ (NHLML) ಬಹುಪಾಲು ಪಾಲನ್ನು (51.29%) ಹೊಂದಿದೆ, ನಂತರ ಕರ್ನಾಟಕ ಕೈಗಾರಿಕಾ ಪ್ರದೇಶಗಳ ಅಭಿವೃದ್ಧಿ ಮಂಡಳಿ (32.38%) ಮತ್ತು ರೈಲ್ ವಿಕಾಸ್ ನಿಗಮ್ ಲಿಮಿಟೆಡ್ (16.33%) ಬಂಡವಾಳ ಹೂಡಲಿವೆ.
2023ರ ಆಗಸ್ಟ್‌ನಲ್ಲಿ ಎಸ್‌ಪಿವಿ ಖಾಸಗಿ ಸಂಸ್ಥೆ ಪಾಥ್ (PATH) ಬೆಂಗಳೂರು ಲಾಜಿಸ್ಟಿಕ್ಸ್ ಪಾರ್ಕ್ ಪ್ರೈವೇಟ್ ಲಿಮಿಟೆಡ್‌ನೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿತು, ಇದು ವಿನ್ಯಾಸ, ನಿರ್ಮಾಣ, ಹಣಕಾಸು, ಆಪರೇಟ್ ಮತ್ತು ಟ್ರಾನ್ಸ್‌ಫರ್ (DBFOT) ಆಧಾರದ ಮೇಲೆ ಕೆಲಸ ಮಾಡಲಿದೆ.
ಲಾಜಿಸ್ಟಿಕ್ ಪಾರ್ಕ್ ವಿವಿಧ ಸಾರಿಗೆ ವಿಧಾನಗಳ ಮೂಲಕ ಸಂಪರ್ಕವನ್ನು ಸುಗಮಗೊಳಿಸುತ್ತದೆ. ಲಾಜಿಸ್ಟಿಕ್ ಪಾರ್ಕ್ ನಿರ್ಮಾಣವಾಗುತ್ತಿರುವ ಪೂರ್ವ ಪಾರ್ಶ್ವದಲ್ಲಿ, ಕೆಐಎಡಿಬಿ ಕೈಗಾರಿಕಾ ಪಾರ್ಕ್ ಅನ್ನು ನಿರ್ಮಿಸುತ್ತಿದೆ. ದಕ್ಷಿಣದಲ್ಲಿ ಬೆಂಗಳೂರು-ಹುಬ್ಬಳ್ಳಿ-ಮುಂಬೈ ರೈಲು ಮಾರ್ಗವು ಸಾಗುತ್ತದೆ. ಉತ್ತರ ಭಾಗದಲ್ಲಿ ಸ್ಯಾಟಲೈಟ್ ಟೌನ್ ರಿಂಗ್ ರೋಡ್‌ನ ಡಾಬಸ್‌ಪೇಟೆ-ದೊಡ್ಡಬಳ್ಳಾಪುರ-ಹೊಸಕೋಟೆ ಸ್ಟ್ರೆಚ್‌ನಿಂದ (NH 648) ಸುತ್ತುವರೆದಿದೆ. ಸ್ಯಾಟಲೈಟ್ ರಿಂಗ್ ರಸ್ತೆ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ (55 ಕಿಮೀ ದೂರ) ಮತ್ತು ಚೆನ್ನೈ ಬಂದರನ್ನು ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ವೇ ಮೂಲಕ ಸಂಪರ್ಕಿಸಲು ಸಹಾಯ ಮಾಡುತ್ತದೆ. ಮೆಕ್ಯಾನಿಕಲ್, ಆಟೋಮೊಬೈಲ್ ಮತ್ತು ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ಉದ್ಯಮಗಳಿಗೆ ಹೆಸರುವಾಸಿಯಾದ ಡಾಬಸ್‌ಪೇಟೆ ಸುಮಾರು 12 ಕಿ.ಮೀ ದೂರದಲ್ಲಿದೆ.
ಲಾಜಿಸ್ಟಿಕ್ ಪಾರ್ಕ್‌ನ ಮೊದಲ ಹಂತವು 2026 ರಲ್ಲಿ ಪೂರ್ಣಗೊಳ್ಳುತ್ತದೆ, ಎರಡನೆಯದು 2034 ರಲ್ಲಿ ಮತ್ತು ಮೂರನೆಯದು 2039 ರಲ್ಲಿ ಮುಗಿಯಲಿದೆ. ಮೊದಲ ಹಂತವು ಅತ್ಯಂತ ಮಹತ್ವದ್ದಾಗಿದೆ ಮತ್ತು ಎರಡು ವರ್ಷಗಳಲ್ಲಿ ಸಿದ್ಧವಾಗಲಿದೆ ಎಂದು ಅಧಿಕಾರಿಯೊಬ್ಬರು ಹೇಳಿರುವುದಾಗಿ ಡಿಹೆಚ್ ವರದಿ ಮಾಡಿದೆ.












Click it and Unblock the Notifications