ಸಂಸದ ತೇಜಸ್ವಿ ಸೂರ್ಯ ಜೊತೆ ಮೆಟ್ರೋ ಪ್ರಯಾಣ; ಅಲ್ಲೇ ಯುವ ಉದ್ಯಮಿಯ ಸ್ಟಾರ್ಟ್‌ಅಪ್‌ ಪಿಚ್‌!

ಮೆಟ್ರೋ ರೈಲಿನಲ್ಲಿ ಪ್ರಯಾಣಿಸುವವರು ಮೊಬೈಲ್‌ನಲ್ಲಿ ಮುಳುಗಿರುವುದು ಅಥವಾ ತಮ್ಮ ಕೆಲಸದಲ್ಲಿ ನಿರತರಾಗಿರುವುದು ಸಾಮಾನ್ಯ. ಆದರೆ ಬೆಂಗಳೂರಿನಲ್ಲಿ ನಡೆದ ಒಂದು ಅಚ್ಚರಿಯ ಘಟನೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಕಾರಣವಾಗಿದೆ. ನಗರದ ಯುವ ಉದ್ಯಮಿ ಮತ್ತು ಎಐ (AI) ಎಂಜಿನಿಯರ್‌ ಅನಿಲ್ ಪೈ ಅವರು ಮೆಟ್ರೋ ಪ್ರಯಾಣದ ವೇಳೆ ತಮ್ಮ ಪಕ್ಕದಲ್ಲೇ ಕುಳಿತಿದ್ದ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಅವರಿಗೆ ತಮ್ಮ ಸ್ಟಾರ್ಟ್‌ಅಪ್‌ ಕಲ್ಪನೆಯನ್ನು ವಿವರಿಸಿದ್ದಾಗಿ ಹೇಳಿಕೊಂಡಿದ್ದು, ಈ ಘಟನೆ ಈಗ ವೈರಲ್‌ ಆಗಿದೆ.

ಮೆಟ್ರೋದಲ್ಲಿ ಆರಂಭವಾದ ಸ್ಟಾರ್ಟ್‌ಅಪ್‌ ಚರ್ಚೆ

ಅನಿಲ್ ಪೈ ಅವರು ತಮ್ಮ ಎಕ್ಸ್‌ (X) ಖಾತೆಯಲ್ಲಿ ತೇಜಸ್ವಿ ಸೂರ್ಯ ಅವರೊಂದಿಗೆ ತೆಗೆದಿರುವ ಸೆಲ್ಫಿಯನ್ನು ಹಂಚಿಕೊಂಡಿದ್ದಾರೆ. ಅದರೊಂದಿಗೆ, "ಬೆಂಗಳೂರಿನಲ್ಲಷ್ಟೇ ಮೆಟ್ರೋದಲ್ಲಿ ಸಂಸದರ ಪಕ್ಕದಲ್ಲಿ ಕುಳಿತು ಸ್ಟಾರ್ಟ್‌ಅಪ್‌ ಐಡಿಯಾವನ್ನು ಪಿಚ್‌ ಮಾಡುವ ಅವಕಾಶ ಸಿಗುತ್ತದೆ" ಎಂದು ಬರೆದುಕೊಂಡಿದ್ದಾರೆ.

Tejasvi Surya

ಈ ಪೋಸ್ಟ್‌ ಕೆಲವೇ ಗಂಟೆಗಳಲ್ಲಿ ಸಾವಿರಾರು ಮಂದಿಯ ಗಮನ ಸೆಳೆದಿದ್ದು, ವಿವಿಧ ರೀತಿಯ ಪ್ರತಿಕ್ರಿಯೆಗಳು ಹರಿದು ಬಂದಿವೆ.

ಅನೇಕರು ಈ ಘಟನೆಯನ್ನು ಬೆಂಗಳೂರಿನ ವಿಶಿಷ್ಟ ಸ್ಟಾರ್ಟ್‌ಅಪ್‌ ಸಂಸ್ಕೃತಿಯ ಪ್ರತೀಕ ಎಂದು ಬಣ್ಣಿಸಿದ್ದಾರೆ. "ಇನ್ನಾವ ನಗರದಲ್ಲೂ ಇಂತಹ ಘಟನೆ ನಡೆಯುವುದಿಲ್ಲ. ಬೆಂಗಳೂರು ಎಂದರೆ ಐಡಿಯಾಗಳಿಗೆ ಜೀವ ಕೊಡುವ ನಗರ," ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ.

ಮತ್ತೊಬ್ಬರು, "ಈ ಕಾರಣಕ್ಕೇ ಒಮ್ಮೆ ಬೆಂಗಳೂರಿಗೆ ಬರಬೇಕು ಎನ್ನಿಸುತ್ತದೆ. ಇಲ್ಲಿ ಎಲ್ಲೆಡೆ ಹೊಸ ಆಲೋಚನೆಗಳ ಬಗ್ಗೆ ಚರ್ಚೆಯಾಗುತ್ತದೆ," ಎಂದು ಕಾಮೆಂಟ್‌ ಮಾಡಿದ್ದಾರೆ.

ಬನಶಂಕರಿ ಮೆಟ್ರೋ ನಿಲ್ದಾಣ ಬಳಿ ಸ್ಕೈವಾಕ್ ಇಲ್ಲದೇ ದುರ್ಘಟನೆ; ವಿಡಿಯೋ ಮೂಲಕ ಯೋಜನೆ ಪುನಾರಂಭಕ್ಕೆ ಸಂಸದ ಒತ್ತಾಯ
ಬನಶಂಕರಿ ಮೆಟ್ರೋ ನಿಲ್ದಾಣ ಬಳಿ ಸ್ಕೈವಾಕ್ ಇಲ್ಲದೇ ದುರ್ಘಟನೆ; ವಿಡಿಯೋ ಮೂಲಕ ಯೋಜನೆ ಪುನಾರಂಭಕ್ಕೆ ಸಂಸದ ಒತ್ತಾಯ

ಫಂಡಿಂಗ್‌ ಸಿಕ್ಕಿತಾ?

ಪೋಸ್ಟ್‌ ವೈರಲ್‌ ಆದ ಬಳಿಕ ಹಲವರು, "ಹಾಗಾದರೆ ನಿಮ್ಮ ಸ್ಟಾರ್ಟ್‌ಅಪ್‌ಗೆ ಹೂಡಿಕೆ (Funding) ಸಿಕ್ಕಿತೇ?" ಎಂದು ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಅನಿಲ್ ಪೈ, "ಪಿಚ್‌ ಮಾಡುವುದು ಎಂದರೆ ಕೇವಲ ತಮ್ಮ ಆಲೋಚನೆಯನ್ನು ಹಂಚಿಕೊಳ್ಳುವುದು ಮತ್ತು ಅದರ ಬಗ್ಗೆ ಅಭಿಪ್ರಾಯ ಪಡೆಯುವುದು. ಹೂಡಿಕೆ ಸಂಗ್ರಹಿಸುವುದು (Fundraising) ಸಂಪೂರ್ಣವಾಗಿ ಬೇರೆ ಪ್ರಕ್ರಿಯೆ," ಎಂದು ಸ್ಪಷ್ಟಪಡಿಸಿದರು.

ಆದರೆ ಈ ಘಟನೆಯನ್ನು ಎಲ್ಲರೂ ಮೆಚ್ಚಿಲ್ಲ. ಕೆಲ ಸಾಮಾಜಿಕ ಜಾಲತಾಣ ಬಳಕೆದಾರರು, "ಸ್ಟಾರ್ಟ್‌ಅಪ್‌ ಐಡಿಯಾವನ್ನು ಹೂಡಿಕೆದಾರರು ಅಥವಾ ಉದ್ಯಮ ಪರಿಣಿತರ ಮುಂದೆ ಮಂಡಿಸುವ ಬದಲು ರಾಜಕಾರಣಿಯ ಮುಂದೆ ಮಂಡಿಸುವ ಅಗತ್ಯವೇನು?" ಎಂದು ಪ್ರಶ್ನಿಸಿದ್ದಾರೆ.

ಇನ್ನೂ ಕೆಲವರು, "ಜನಪ್ರತಿನಿಧಿಗಳನ್ನು ಸಾರ್ವಜನಿಕ ಸಮಸ್ಯೆಗಳು, ಆಡಳಿತ ಮತ್ತು ನೀತಿ ವಿಚಾರಗಳ ಬಗ್ಗೆ ಸಂಪರ್ಕಿಸುವುದು ಮುಖ್ಯ. ಉದ್ಯಮದ ಐಡಿಯಾಗಳಿಗಾಗಿ ಅವರನ್ನು ಸಂಪರ್ಕಿಸುವುದು ಸರಿಯಲ್ಲ," ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

''Bengaluru Short Tunnel: 1139 ಕೋಟಿ ರೂ ಸುರಂಗ ಮಾರ್ಗ ಟ್ರಾಫಿಕ್‌ಗೆ ಪರಿಹಾರವಲ್ಲ, ಹೆಚ್ಚಲಿದೆ ಟ್ರಾಫಿಕ್‌ ಕಿರಿಕಿರಿ''
''Bengaluru Short Tunnel: 1139 ಕೋಟಿ ರೂ ಸುರಂಗ ಮಾರ್ಗ ಟ್ರಾಫಿಕ್‌ಗೆ ಪರಿಹಾರವಲ್ಲ, ಹೆಚ್ಚಲಿದೆ ಟ್ರಾಫಿಕ್‌ ಕಿರಿಕಿರಿ''

ಒಂದು ಮೆಟ್ರೋ ಪ್ರಯಾಣ, ಸೆಲ್ಫಿಯಿಂದ ಶುರುವಾದ ಈ ಘಟನೆ ಸಾರ್ವಜನಿಕ ಜೀವನದಲ್ಲಿ ನೆಟ್‌ವರ್ಕಿಂಗ್‌, ಹೊಸ ಆಲೋಚನೆಗಳಿಗೆ ಪ್ರೋತ್ಸಾಹ ಹಾಗೂ ಜನಪ್ರತಿನಿಧಿಗಳ ಪಾತ್ರದ ಬಗ್ಗೆ ಒಂದು ಚರ್ಚೆಯನ್ನೇ ಹುಟ್ಟುಹಾಕಿತು. ಒಂದು ವರ್ಗದವರು ಇದನ್ನು "ಬೆಂಗಳೂರು ಸ್ಟಾರ್ಟ್‌ಅಪ್‌ ಎಕೋಸಿಸ್ಟಮ್‌ನ ಶಕ್ತಿ" ಎಂದು ಹೊಗಳಿದರೆ, ಮತ್ತೊಂದು ವರ್ಗದವರು "ರಾಜಕಾರಣಿಗಳು ಉದ್ಯಮ ಸಲಹೆಗಾರರಲ್ಲ" ಎಂದು ವಾದಿಸಿದರು.

ಸ್ಟಾರ್ಟ್‌ಅಪ್‌ಗಳ ರಾಜಧಾನಿ ಬೆಂಗಳೂರು

ಭಾರತದ ಸ್ಟಾರ್ಟ್‌ಅಪ್‌ ರಾಜಧಾನಿ ಬೆಂಗಳೂರು ಎಂಬುದರಲ್ಲಿ ಸಂಶಯವಿಲ್ಲ. ಬೆಂಗಳೂರಿನಲ್ಲಿ ಸಾವಿರಾರು ಹೊಸ ಉದ್ಯಮಗಳು ಹುಟ್ಟಿಕೊಳ್ಳುತ್ತಿವೆ. ಹೂಡಿಕೆದಾರರು, ಉದ್ಯಮಿಗಳು, ತಂತ್ರಜ್ಞಾನ ಪರಿಣಿತರು ಮತ್ತು ಯುವ ನವೋದ್ಯಮಿಗಳು ಒಂದೇ ನಗರದಲ್ಲಿ ಕಾರ್ಯನಿರ್ವಹಿಸುತ್ತಿರುವುದರಿಂದ, ಕಾಫಿ ಶಾಪ್‌, ಕೋ-ವರ್ಕಿಂಗ್‌ ಸ್ಪೇಸ್‌, ವಿಮಾನ ನಿಲ್ದಾಣ, ಮೆಟ್ರೋ ಅಥವಾ ಸಾರ್ವಜನಿಕ ಸ್ಥಳಗಳಲ್ಲಿಯೂ ಹೊಸ ವ್ಯವಹಾರಗಳ ಕುರಿತು ಚರ್ಚೆಗಳು ನಡೆಯುವುದು ಅಪರೂಪವೇನಲ್ಲ.

ಅನಿಲ್ ಪೈ ಮತ್ತು ತೇಜಸ್ವಿ ಸೂರ್ಯ ಅವರ ಮೆಟ್ರೋ ಭೇಟಿ ಅನಿರೀಕ್ಷಿತ. ಆದರೆ ಅದು ಈಗ ಸಾಮಾಜಿಕ ಜಾಲತಾಣಗಳಲ್ಲಿ ಉದ್ಯಮಶೀಲತೆ, ನೆಟ್‌ವರ್ಕಿಂಗ್‌ ಹಾಗೂ ಜನಪ್ರತಿನಿಧಿಗಳ ಪಾತ್ರದ ಕುರಿತು ಹೊಸ ಚರ್ಚೆಗೆ ಕಾರಣವಾಗಿದೆ. ಜೊತೆಗೆ ಬೆಂಗಳೂರಿನ ಸ್ಟಾರ್ಟ್‌ಅಪ್‌ ಸಂಸ್ಕೃತಿಯ ಕುತೂಹಲಕಾರಿ ಮುಖವನ್ನೂ ಜನರ ಮುಂದೆ ತೆರೆದಿಟ್ಟಿದೆ.

(ಬರಹ: ಭವಾನಿ ಭಟ್)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+