E Khata: ಆಸ್ತಿ ದಾಖಲೆಗಳಿಗಾಗಿ ಕಚೇರಿ ಅಲೆದಾಟಕ್ಕೆ ಬ್ರೇಕ್: ಮನೆಬಾಗಿಲಿಗೆ ಇ-ಖಾತಾ, ಬಿ-ಖಾತಾ ಸೇವೆ
ಬೆಂಗಳೂರು: ಕರ್ನಾಟಕ ಸರ್ಕಾರ ಆಸ್ತಿಗಳ ದಾಖಲಾತಿ ಸೇವೆಗೆ (ಇ-ಖಾತಾ, ಬಿ-ಖಾತಾ) ಆರಂಭಿಸಿದ್ದು, ಬೆಂಗಳೂರು ಮಾತ್ರವಲ್ಲದೇ ರಾಜ್ಯದ ಗ್ರಾಮೀಣ ಭಾಗಕ್ಕೂ ವಿಸ್ತರಿಸಿದೆ. ಮುಂದುವರಿದು ಮಹತ್ವಾಕಾಂಕ್ಷಿ 'ಭೂ ಗ್ಯಾರಂಟಿ' ಯೋಜನೆಯಡಿ ಬೆಂಗಳೂರಿನಲ್ಲಿ ಆರಂಭಿಸಿದ "ನನ್ನ ಇ-ಖಾತಾ, ನನ್ನ ಹಕ್ಕು" ಅಭಿಯಾನದಡಿ ಆಸ್ತಿ ಮಾಲೀಕರಿಗೆ ತ್ವರಿ ಖಾತಾ ಸೇವೆಗಳನ್ನು ಒದಗಿಸಲಾಗುತ್ತಿದೆ. ಈವರೆಗೆ 11,000ಕ್ಕೂ ಅಧಿಕ ಆಸ್ತಿ ಮಾಲೀಕರು ಸೇವೆ ಪಡೆದಿದ್ದಾರೆ, ಸಾವಿರಾರು ಅರ್ಜಿಗಳು ವಿಲೇವಾರಿ ಆಗಿವೆ ಎಂದು ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ತಿಳಿಸಿದೆ.
ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ವ್ಯಾಪ್ತಿಯ 5 ನಗರ ಪಾಲಿಕೆಗಳಲ್ಲಿ 50 ಸ್ಥಳಗಳಲ್ಲಿ ಆಯೋಜಿಸಲಾಗಿದ್ದ ವಿಶೇಷ ಅಭಿಯಾನಕ್ಕೆ ಸಾರ್ವಜನಿಕರು ಭೇಟಿ ನೀಡಿದ್ದಾರೆ. ಈ ಶನಿವಾರಕ್ಕೆ (ಜೂನ್ 6) ಅಭಿಯಾನ ಆರಂಭವಾಗಿ ನಾಲ್ಕು ವಾರ ಕಳೆದಿದ್ದು, ಇ-ಖಾತಾ ಸಂಬಂಧಿತ ಸೇವೆಗಳ ಪ್ರಯೋಜನ ಪಡೆಯುತ್ತಿದ್ದಾರೆ.

ಈ ಅಭಿಯಾನದ ಮೂಲಕ ನಾಗರಿಕರಿಗೆ ಇ-ಖಾತಾ ಪಡೆಯುವ ಪ್ರಕ್ರಿಯೆಯನ್ನು ಸರಳ ಮತ್ತು ಸುಲಭಗೊಳಿಸಲಾಗಿದೆ. ಖಾತಾ ಸಂಬಂಧಿತ ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಪರಿಹಾರ ಒದಗಿಸಲಾಗುತ್ತಿದೆ. ಶಿಬಿರಗಳಲ್ಲಿ ಅರ್ಜಿಗಳ ಪರಿಶೀಲನೆ, ದಾಖಲೆಗಳ ತಪಾಸಣೆ, ತಾಂತ್ರಿಕ ದೋಷಗಳ ನಿವಾರಣೆ, ಮಾಹಿತಿ ತಿದ್ದುಪಡಿ ಹಾಗೂ ಇತರೆ ಸಮಸ್ಯೆಗಳಿಗೆ ಅಧಿಕಾರಿಗಳು ಸ್ಥಳದಲ್ಲಿಯೇ ಪರಿಹಾರ ನೀಡುತ್ತಿದ್ದಾರೆ.
ಒಂದೇ ಸ್ಥಳದಲ್ಲಿ ವಿವಿಧ ಖಾತಾ ಸೇವೆಗಳು ಲಭ್ಯ
ಇ-ಖಾತಾ ಕುರಿತು ನಾಗರಿಕರಲ್ಲಿ ಅರಿವು ಮೂಡಿಸುವ ಜೊತೆಗೆ ಅರ್ಜಿಗಳ ತ್ವರಿತ ವಿಲೇವಾರಿಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ನಾಗರಿಕರು ವಿವಿಧ ಕಚೇರಿಗಳಿಗೆ ಭೇಟಿ ನೀಡದೇ ಒಂದೇ ಸ್ಥಳದಲ್ಲಿ ಅಗತ್ಯ ಸೇವೆಗಳನ್ನು ಪಡೆಯುತ್ತಿರುವುದು ಅಭಿಯಾನದ ಪ್ರಮುಖ ವಿಶೇಷತೆಯಾಗಿದೆ. "ನನ್ನ ಇ-ಖಾತಾ, ನನ್ನ ಹಕ್ಕು" ಅಭಿಯಾನವು ನಾಗರಿಕರ ಆಸ್ತಿ ದಾಖಲೆಗಳ ಡಿಜಿಟಲೀಕರಣಕ್ಕೆ ಉತ್ತೇಜನ ನೀಡುವುದರೊಂದಿಗೆ, ಪಾರದರ್ಶಕ ಮತ್ತು ಜನಸ್ನೇಹಿ ಆಡಳಿತದತ್ತ ಮಹತ್ವದ ಹೆಜ್ಜೆಯಾಗಿದೆ.
11,230 ಮಂದಿ ಭಾಗಿ, 4,447 ಅರ್ಜಿ ವಿಲೇವಾರಿ
ಗ್ರೇಟರ್ ಬೆಂಗಳೂರು ಪ್ರಾಧಿಕಾರದ 5 ನಗರ ಪಾಲಿಕೆಗಳಲ್ಲಿ ರಾಜ್ಯ ಸರ್ಕಾರದ 6ನೇ ಗ್ಯಾರಂಟಿ "ಭೂ ಗ್ಯಾರಂಟಿ' ಯೋಜನೆಯಡಿ ಆರಂಭಿಸಿರುವ "ನನ್ನ ಇ-ಖಾತಾ ನನ್ನ ಹಕ್ಕು' ಅಭಿಯಾನದಲ್ಲಿ 4 ವಾರಗಳಲ್ಲಿ 11,230 ಮಂದಿ ಭೇಟಿ ನೀಡಿದ್ದಾರೆ. ಈ 4,447 ಅರ್ಜಿಗಳ ವಿಲೇವಾರಿ ಮಾಡಲಾಗಿದೆ.
ಇಂದಿನ ಅಭಿಯಾನದಲ್ಲಿ ನನ್ನ ಇ-ಖಾತಾ ನನ್ನ ಹಕ್ಕು ಅಭಿಯಾನಕ್ಕೆ ಇ-ಖಾತಾ, ಮ್ಯುಟೆಷನ್, ತಿದ್ದುಪಡಿ, ಹೊಸ ಇ-ಖಾತಾ, ಬಿ ಟು ಎ ಖಾತಾ ಹಾಗೂ ದೂರುಗಳ ಅರ್ಜಿಗಳು ಸೇರಿದಂತೆ ಇತರೆ ವಿಷಯಗಳಿಗಾಗಿ 1,773 ಮಂದಿ ಭೇಟಿ ನೀಡಿದ್ದು, ಈ ಪೈಕಿ ಸ್ಥಳದಲ್ಲಿಯೇ 1,068 ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ ಎಂದು ಜಿಬಿಎ ಅಧಿಕಾರಿಗಳು ತಿಳಿಸಿದ್ದಾರೆ.
ಆಸ್ತಿ ಮಾಲೀಕರಿಗೆ ಕೂಡಲೇ ಅರ್ಜಿ ಸಲ್ಲಿಸಿ
ಬಿ-ಖಾತಾ ದಿಂದ ಎ-ಖಾತಾ ಪರಿವರ್ತನೆ ಮಾಡಿಕೊಳ್ಳುವ ಕುರಿತು ಕನ್ನಡ ಹಾಗೂ ಇಂಗ್ಲೀಷ್ ನಲ್ಲಿರುವ ವೀಡಿಯೋವನ್ನು ಯುಟ್ಯೂಬ್ (https://youtube.com/@revenuebmp?si=tc1soT4EJ4sYhO5j ) ನಲ್ಲಿ ಅಪ್ಲೋಡ್ ಮಾಡಲಾಗಿದ್ದು, ಅದನ್ನು ವೀಕ್ಷಿಸುವ ಮೂಲಕ ಖಾತಾಗೆ ಅರ್ಜಿಸಲ್ಲಿಸುವ ತಾಣಕ್ಕೆ https://bbmpeaasthi.karnataka.gov.in/ ಭೇಟಿ ನೀಡುವ ಮೂಲಕ ತಾವೇ ಸುಲಭವಾಗಿ ಅರ್ಜಿ ಸಲ್ಲಿಸಲು ಅವಕಾಶ ಇದೆ.
ನಿಮ್ಮ ಮನೆ ಬಾಗಿಲಿಗೆ ಖಾತಾ ಸೇವೆ
ಜಿಬಿಎ ವ್ಯಾಪ್ತಿಯಲ್ಲಿ ಇ-ಖಾತಾ, ಹೊಸ ಖಾತಾ, ಬಿ ಟು ಎ ಖಾತಾ ಮಾಡಿಕೊಳ್ಳಲು ಸಮಸ್ಯೆ ಆಗುತ್ತಿದೆಯೇ, ಹಾಗಾದಲ್ಲಿ ನೀವು ಜನಸೇವರನ್ನು ಸಂಪರ್ಕಿಸಿದರೆ, ಅವರು ನಿಮ್ಮ ಮನೆ ಬಾಗಿಲಿಗೆ ಬಂದು ಅರ್ಜಿಯನ್ನು ಸಲ್ಲಿಸಲ್ಲಿದ್ದಾರೆ. ವೆಬ್‌ಸೈಟ್ https://www.janasevaka.karnataka.gov.in/SlotBooking ಅಥವಾ ದೂರವಾಣಿ ಸಂಖ್ಯೆ 080-4920388 ಗೆ ಕರೆ ಮಾಡಿ ಸ್ಲಾಟ್ ಅನ್ನು ಬುಕ್ ಮಾಡಿಕೊಳ್ಳಬಹುದು. ಜನಸೇವಕರು ನಿಮ್ಮ ಬಾಗಿಲಿಗೆ ಬಂದು ಅರ್ಜಿ ಸಲ್ಲಿಸಲು 160 ರೂ. ಪಾವತಿಸಬೇಕಾಗುತ್ತದೆ.
ಬೆಂಗಳೂರು ಒನ್ ಕೇಂದ್ರಗಳಲ್ಲೂ ಸೌಲಭ್ಯ: ಜಿಬಿಎ ವ್ಯಾಪ್ತಿಯಲ್ಲಿ 140 ಬೆಂಗಳೂರು ಒನ್ ಕೇಂದ್ರಗಳು ಬರಲಿದ್ದು, ನಿಮ್ಮ ಹತ್ತಿರದ ಬೆಂಗಳೂರು ಒನ್ ಕೇಂದ್ರ (https://gba.karnataka.gov.in/files/B1centres.pdf) ಕ್ಕೆ ಭೇಟಿ ನೀಡಿ 45 ರೂ. ಪಾವತಿಸಿ ಇ-ಖಾತಾಗೆ ಅರ್ಜಿ ಸಲ್ಲಿಸಬಹುದು ಎಂದು ಜಿಬಿಎ ಅಧಿಕಾರಿಗಳು ವಿವರಿಸಿದ್ದಾರೆ.














Click it and Unblock the Notifications