30 ವರ್ಷದ ಹಿಂದಿನ ಫ್ಯಾಷನ್ ಧಿರಿಸು, ವಯಸ್ಸು 63 ಆದರೂ ಮಾಸದ ಮನಸ್ಸು
ಬೆಂಗಳೂರು, ಜನವರಿ 07: ಫ್ಯಾಷನ್, ಫ್ಯಾಷನ್ ಶೋ ಗಳು ಕೇವಲ ಹದಿ ಹರೆಯದವರಿಗೆ ಎಂಬುದು ಸಾಮಾನ್ಯ. ಆದರೆ ಬೆಂಗಳೂರಿನಲ್ಲಿ 63 ವರ್ಷದ 'ಚಿರಯವ್ವನೆ' ಫ್ಯಾಷನ್ ಶೋ ನಲ್ಲಿ ಹೆಜ್ಜೆ ಹಾಕಿ ಎಲ್ಲರ ಹುಬ್ಬೇರಿಸಿದ್ದಾರೆ.
ಡಾ.ಶ್ರೀಧರನ್ ಶೋಭನಾ ಅವರು ಡಿಸೆಂಬರ್ 21, 2019 ರಂದು ಬೆಂಗಳೂರಿನಲ್ಲಿ ನಡೆದ ಮಿಸ್ & ಮಿಸೆಸ್ ಇಂಡಿಯಾ ಫ್ಯಾಶನ್ ಐಕಾನ್ ನಲ್ಲಿ ಬೆಕ್ಕಿನ ನಡಿಗೆ ನಡೆದು, ಪ್ರಾಯದ ಹುಡುಗಿಯರಿಗೆ ಸೆಡ್ಡು ಹೊಡೆದಿದ್ದಾರೆ.
ಅವರ ಫ್ಯಾಷನ್ ಶೋ ಭಾಗವಹಿಸುವಿಕೆಯ ಮತ್ತೊಂದು ವಿಶೇಷವೆಂದರೆ, ಮೂವತ್ತು ವರ್ಷಗಳ ಹಿಂದೆ ತಮಗೆ ಪ್ರಶಸ್ತಿ ತಂದುಕೊಟ್ಟ ಅದೇ ಧಿರಿಸನ್ನು ಧರಿಸಿಕೊಂಡೇ ಈಗ ಫ್ಯಾಷನ್ ಶೋ ನಲ್ಲಿ ಹೆಜ್ಜೆ ಹಾಕಿದ್ದಾರೆ.

ಡಾ. ಶೋಭನಾ ಅವರು 1990 ರಲ್ಲಿ, ಸಿಂಗಪುರದಲ್ಲಿ ನಡೆದ ಫ್ಯಾಶನ್ ಸ್ಪರ್ಧೆಯಲ್ಲಿ ಕಪ್ಪು ಬಣ್ಣದ ಮೋಹಕ ಉಡುಪು ಧರಿಸಿ ಹೆಜ್ಜೆ ಹಾಕಿದ್ದರು. ಅದೇ ಧಿರಿಸಿನಲ್ಲಿ ಬೆಂಗಳೂರಿನಲ್ಲಿ ಡಿಸೆಂಬರ್ 21 ರಂದು ನಡೆದ ಫ್ಯಾಷನ್ ಶೋ ನಲ್ಲಿ ಹೆಜ್ಜೆ ಹಾಕಿದ್ದಾರೆ. ಮೂವತ್ತು ವರ್ಷದ ಹಿಂದಿನ ಬಟ್ಟೆ ಈಗಲೂ ಅವರಿಗೆ ಸರಿಹೊಂದುತ್ತದೆ ಎಂಬುದು ಸೋಜಿಗವೇ!
ಶೋಭನಾ ಅವರ ಬತ್ತದ ಉತ್ಸಾಹಕ್ಕೆ, ಅವರ ದೈಹಿಕ ಕ್ಷಮತೆ ಮತ್ತು ಕಾಯ್ದು ಕೊಂಡು ಬಂದಿರುವ ಆರೋಗ್ಯ ಎಲ್ಲರಿಂದ ಮೆಚ್ಚುಗೆ ಗಳಿಸಿದೆ.












Click it and Unblock the Notifications