Namma Metro: ಶಕ್ತಿ ಯೋಜನೆ ಜಾರ ಬಳಿಕವೂ ಮೆಟ್ರೋ ಪ್ರಯಾಣಿಕರ ಸಂಖ್ಯೆಯಲ್ಲಿ ಭಾರೀ ಏರಿಕೆ
ಬೆಂಗಳೂರು, ಜುಲೈ 23: ವೇಗ ಮತ್ತು ಸುರಕ್ಷತೆಯ ಸಾರಿಗೆಯಾಗಿರುವ ಬೆಂಗಳೂರು ನಮ್ಮ ಮೆಟ್ರೋ ರೈಲು ಪ್ರಯಾಣಿಕರ ಸಂಖ್ಯೆಯು ಜುಲೈ ತಿಂಗಳಲ್ಲಿ ಹೆಚ್ಚಾಗುವ ಮೂಲಕ ಸಾರ್ವಕಾಲಿಕ ದಾಖಲೆ ಬರೆದಿದೆ. ಶಕ್ತಿ ಯೋಜನೆಯಿಂದ ಮೆಟ್ರೋ ಪ್ರಯಾಣಕ್ಕೆ ಯಾವುದೇ ತೊಂದರೆ ಆಗಿಲ್ಲ ಎಂಬುದು ಸಾಬೀತಾಗಿದೆ.
ಕರ್ನಾಟಕ ರಾಜ್ಯದ ಸರ್ಕಾರ ಕಳೆದ ಜೂನ್ 11ರಂದು ಶಕ್ತಿ ಯೋಜನೆ (Shakti scheme) ಜಾರಿಗೊಳಿಸುವ ಮೂಲಕ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ ಅವಕಾಶ ಕಲ್ಪಿಸಿತು. ಅಲ್ಲಿಂದ ಮಹಿಳೆಯರು ನಾ ಮುಂದೆ ತಾ ಮುಂದು ಎಂದು ಸಾರ್ವಜನಿಕ ಸಾರಿಗೆ ಏರಿದರು. ಇದರಿಂದ ಆಟೋ, ಟ್ಯಾಕ್ಸಿ ಮತ್ತು ಖಾಸಗಿ ಬಸ್ ಮಾಲೀಕರಿಗೆ ತೊಂದರೆ ಆದಂತೆ ನಮ್ಮ ಮೆಟ್ರೋ (Bengaluru namma metro) ಪ್ರಯಾಣದ ಮೇಲೂ ಶಕ್ತಿ ಯೋಜನೆ ದುಷ್ಪರಿಣಾಮ ಬೀರಬಹುದು ಎನ್ನಲಾಗಿತ್ತು.

ನಿರೀಕ್ಷೆಯಂತೆ ಶಕ್ತಿ ಯೋಜನೆ ನಮ್ಮ ಮೆಟ್ರೋ ಮೇಲೆ ಪರಿಣಾಮ ಬೀರಿಲ್ಲ, ಬದಲಾಗಿ ಮೆಟ್ರೋ ಪ್ರಯಾಣಿಕರ ಸಂಖ್ಯೆಯಲ್ಲಿ ಏರಿಕೆ ಆಗಿದೆ. ಇದೇ ಮೇ ತಿಂಗಳಲ್ಲಿ ನಮ್ಮ ಮೆಟ್ರೋ ಬಳಸುವರ ಸಂಖ್ಯೆಯಲ್ಲಿ ಸರಿಸುಮಾರು 40ಸಾವಿರ ಮಂದಿ ಹೆಚ್ಚಾಗಿದ್ದಾರೆ. ಈ ಹಿಂದೆ ಸರಾಸರಿ 5.6 ಲಕ್ಷ ಪ್ರಯಾಣಿಕರು ನಿತ್ಯ ನಮ್ಮ ಮೆಟ್ರೋ ಬಳಸುತ್ತಿದ್ದರು. ಶಕ್ತಿ ಯೋಜನೆ ಜಾರಿ ನಂತರ ಈ ಪ್ರಯಾಣಿಕರ ಸಂಖ್ಯೆ ಪ್ರತಿನಿತ್ಯ 6.1 ಲಕ್ಷಕ್ಕೆ ಹೆಚ್ಚಾಗಿದೆ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
BMRCL ವ್ಯವಸ್ಥಾಪಕ ನಿರ್ದೇಶಕರ ಪ್ರತಿಕ್ರಿಯೆ
ಜುಲೈ 21ರವರೆಗೆ ಪ್ರತಿನಿತ್ಯ ಪ್ರಯಾಣಿಕರ ಸಂಖ್ಯೆ 6.1 ಲಕ್ಷ ಗಡಿ ದಾಟಿದೆ. ಇದರ ಹಿಂದಿನ ವಾರ ಜುಲೈ 15 ರಂದು ದೈನಂದಿನ ಮೆಟ್ರೋ ಪ್ರಯಾಣಿಕರ ಸಂಖ್ಯೆ 6.7 ಲಕ್ಷ ಏರಿಕೆ ಆಗುವ ಮೂಲಕ ಸಾರ್ವಕಾಲಿಕ ದಾಖಲೆ ಬರೆಯಿತು. ಈ ಬಗ್ಗೆ ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ (BMRCL) ವ್ಯವಸ್ಥಾಪಕ ನಿರ್ದೇಶಕ ಅಂಜುಮ್ ಪರ್ವೇಜ್ ಪ್ರತಿಕ್ರಿಯಿಸಿದ್ದಾರೆ.
ಸರ್ಕಾರ ಮಹಿಳೆಯರಿಗೆ ಶಕ್ತಿ ಯೋಜನೆಯಡಿ ಉಚಿತ ಬಸ್ ಪ್ರಯಾಣ ನೀಡಿದೆ. ಅಲ್ಲದೇ ಸಾರ್ವಜನಿಕರನ್ನು ಹೆಚ್ಚೆಚ್ಚು ಸಾರ್ವಜನಿಕ ಸಾರಿಗೆ ಬಳಸುವಂತೆ ಉತ್ತೇಜಿಸುತ್ತದೆ. ಇಷ್ಟರ ಮಧ್ಯೆಯು ಯೋಜನೆಯಿಂದ ಯಾವುದೇ ದುಷ್ಪರಿಣಾಮ ಭೀರಿಲ್ಲ. ಬದಲಾಗಿ, ನಮ್ಮ ಮೆಟ್ರೋ ಪ್ರಯಾಣಿಕರ ಸಂಖ್ಯೆಯನ್ನು ಏರಿಕೆಯಾಗಿದೆ. ಸೋಮವಾರದಿಂದ ಶುಕ್ರವಾರವರೆಗೆ 6.2 ರಿಂದ 6.3 ಲಕ್ಷ ಜನರು ಪ್ರಯಾಣ ಮಾಡಿದ್ದಾರೆ. ಕೆಲವು ದಿನ ಈ ಸಂಖ್ಯೆ 6.6 ಲಕ್ಷದ ಗಡಿ ದಾಟಿದೆ. ಈ ವೇಳೆ ದಿನಕ್ಕೆ 15 ಲಕ್ಷ ರೂಪಾಯಿಗೆ ಆದಾಯ ಸಂಗ್ರಹವಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಶಕ್ತಿ ಯೋಜನೆ ಜಾರಿ ಬಳಿಕ ಜೂನ್ 11ರಿಂದ ರಾಜ್ಯ ಸಾರಿಗೆ ಇಲಾಖೆ ವ್ಯಾಪ್ತಿಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ (KSRTC), ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC) ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (KKRTC) ಮತ್ತು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ (NWKRTC) ಬಸ್‌ಗಳಲ್ಲಿ ಮಹಿಳೆಯರು ಓಡಾಡಿದ್ದಾರೆ. ಬಹುತೇಕ ಬಸ್‌ಗಳು ರಶ್ ಆಗಿರುವುದು ಕಂಡು ಬರುತ್ತಿದೆ. ಪ್ರವಾಸಿ ತಾಣಗಳು ಮಹಿಳೆಯರಿಂದ ತುಂಬಿ ತುಳುಕಿದ್ದು, ವಹಿವಾಟು ಸಹ ಹೆಚ್ಚಾಗಿದೆ.
ಮಹಿಳೆಯರ ಉಚಿತ ಬಸ್ ಪ್ರಯಾಣದಿಂದ ವಿದ್ಯಾರ್ಥಿಗಳು, ಪುರಷರಿಗೆ ತೊಂದರೆ ಆಗಿದ್ದಲ್ಲಿ ಅವರು ಬೆಂಗಳೂರಿನಲ್ಲಿ ಸುಮಾರು 70 ಕಿಲೋ ಮೀಟರ್ ಸಾರಿಗೆ ಸೇವೆ ನೀಡುತ್ತಿರುವ ನಮ್ಮ ಮೆಟ್ರೋ ದಲ್ಲಿ ಪ್ರಯಾಣಿಸಬಹುದು ಎಂದು ಅವರು ತಿಳಿಸಿದ್ದಾರೆ.












Click it and Unblock the Notifications