ಸ್ಯಾಂಡಲ್ ವುಡ್ ಡ್ರಗ್ ಕೇಸ್: ಪ್ರಮುಖ ಆರೋಪಿ ಬಂಧನ
ಬೆಂಗಳೂರು, ಡಿಸೆಂಬರ್ 21: ಸ್ಯಾಂಡಲ್ ವುಡ್ ಡ್ರಗ್ ಜಾಲ ಪ್ರಕರಣದಲ್ಲಿ ತಲೆ ಮರೆಸಿಕೊಂಡಿದ್ದ ಪ್ರಮುಖ ಆರೋಪಿಯನ್ನು ಸಿಸಿಬಿ ಪೊಲೀಸರು ಬೆಂಗಳೂರಿನಲ್ಲಿ ಬಂಧಿಸಿದ್ದಾರೆ. ವಿನಯ್ ಬಂಧಿತ ಆರೋಪಿ. ಖಚಿತ ಮಾಹಿತಿ ಆಧರಿಸಿ ಯಶವಂತಪುರದ ಗೊರಗುಂಟೆಪಾಳ್ಯದಲ್ಲಿ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.
ಡ್ರಗ್ ಸೇವನೆ ಹಾಗೂ ಮಾರಾಟ ಆರೋಪ ಎದುರಿಸುತ್ತಿದ್ದ ವಿನಯ್ ಡ್ರಗ್ ಜಾಲದ ಕಿಂಗ್ ಪಿನ್ ವೀರೇನ್ ಖನ್ನಾ ಆಪ್ತನಾಗಿದ್ದ. ನಟಿ ಸಂಜನಾ ಮತ್ತು ಇತರೆ ಆರೋಪಿಗಳು ಬಂಧನವಾಗುತ್ತಿದ್ದಂತೆ ನಿರೀಕ್ಷಣಾ ಜಾಮೀನು ಸಲ್ಲಿಸಿ ವಿನಯ್ ತಲೆ ಮರೆಸಿಕೊಂಡಿದ್ದ. ಈತನಿಗಾಗಿ ಸಿಸಿಬಿ ಪೊಲೀಸರು ಶೋಧ ನಡೆಸುತ್ತಿದ್ದರು. ಆರೋಪಿಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿ ಪೊಲೀಸ್ ವಶಕ್ಕೆ ಪಡೆದು ವಿಚಾರಣೆ ನಡೆಸಲಿದ್ದಾರೆ.
ನಗರದಲ್ಲಿ ಪ್ರತಿಷ್ಠಿತ ಡ್ರಗ್ ಪಾರ್ಟಿಗಳನ್ನು ವೀರೇನ್ ಖನ್ನಾ ಆಯೋಜಿಸುತ್ತಿದ್ದ. ಎಲ್ಲಾ ಪಾರ್ಟಿಗಳ ಉಸ್ತುವಾರಿ ವಿನಯ್ ನೋಡಿಕೊಳ್ಳುತ್ತಿದ್ದ. ಆರ್‌ಟಿಓ ಅಧಿಕಾರಿ ರವಿಶಂಕರ್, ನಟಿ ರಾಗಿಣಿ ಸೇರಿದಂತೆ ಪ್ರಮುಖರು ವಿನಯ್ ಆಯೋಜಿಸುತ್ತಿದ್ದ ಪಾರ್ಟಿಗಳಲ್ಲಿ ಪಾಲ್ಗೊಳ್ಳುತ್ತಿದ್ದರು ಎಂಬ ಮಾಹಿತಿ ಸಿಕ್ಕಿದೆ. ಸದ್ಯ ಆರೋಪಿ ಸಿಸಿಬಿ ಪೊಲೀಸರ ಕಸ್ಡಡಿಯಲ್ಲಿದ್ದು, ನ್ಯಾಯಾಲಯದ ಮುಂದೆ ಹಾಜರು ಪಡಿಸಿದ ನಂತರವೇ ಹೆಚ್ಚಿನ ವಿಚಾರಣೆ ನಡೆಸಲಾಗುವುದ ಎಂದು ಸಿಸಿಬಿ ಪೊಲೀಸರು ತಿಳಿಸಿದ್ದಾರೆ.

ಸ್ಯಾಂಡಲ್ ವುಡ್ ಡ್ರಗ್ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿದ್ದ ರವಿಶಂಕರ್ ನೀಡಿದ ಮಾಹಿತಿ ಮೇರೆಗೆ ವೀರೇನ್ ಖನ್ನಾ ಮತ್ತು ಪಟಾಲಂ ಬಂಧನಕ್ಕೆ ಒಳಗಾಗಿತ್ತು. ಡ್ರಗ್ ಜಾಲದಲ್ಲಿ ಪ್ರತಿಷ್ಠಿತ ನಟಿಯರು ಶಾಮೀಲಾಗಿರುವ ಮಾಹಿತಿ ಹೊರ ಬಿದ್ದಿತ್ತು. ಈ ಹಿನ್ನೆಲೆಯಲ್ಲಿ ನಟಿ ರಾಗಿಣಿ ಮತ್ತು ಸಂಜನಾ ಬಂಧನಕ್ಕೆ ಒಳಗಾಗಿದ್ದರು. ಪ್ರಮುಖ ಆರೋಪಿಗಳಾದ ಶಿವಪ್ರಕಾಶ್ ಅಲಿಯಾಸ್ ಚಿಪ್ಪಿ ಹಾಗೂ ನಟ ವಿವೇಕ್ ಓಬೆರಾಯ್ ಅವರ ಅಳಿಯ ಆದಿತ್ಯ ಆಳ್ವಾ ತಲೆ ಮರೆಸಿಕೊಂಡಿದ್ದರು. ಇಬ್ಬರಿಗಾಗಿ ಶೋಧ ಮುಂದುವರೆದಿದೆ.
ವಿದೇಶಗಳಲ್ಲಿ ಪ್ರತಿಷ್ಠಿತರಿಗೆ ಪಾರ್ಟಿ ಆಯೋಜನೆ ಮಾಡುತ್ತಿದ್ದ ಪ್ರಭಾವಿ ರಾಜಕಾರಣಿಯ ಪರಮಾಪ್ತ ಫೈಸಲ್ ಕೂಡ ತಲೆ ಮರೆಸಿಕೊಂಡಿದ್ದಾನೆ. ಅಚ್ಚರಿ ಏನೆಂದರೆ ಈವರೆಗೂ ಫೈಸಲ್ ವಿರುದ್ಧ ಯಾವುದೇ ಎಫ್‌ಐಆರ್ ದಾಖಲಾಗಿಲ್ಲ. ಆದರೆ ಈತನ ಬಗ್ಗೆ ಮಾಹಿತಿ ಕಲೆ ಹಾಕಿರುವ ಸಿಸಿಬಿ ಪೊಲೀಸರು ಸತತ ಎರಡು ತಿಂಗಳಿನಿಂದ ಶೋಧ ನಡೆಸುತ್ತಿದ್ದಾರೆ. ಈವರೆಗೂ ಆತನ ಸುಳಿವು ಸಿಕ್ಕಿಲ್ಲ. ಫೈಸಲ್ ಬಂಧನವಾಗಿದ್ದಲ್ಲಿ ಇಡೀ ಬೆಂಗಳೂರಿನ ಗಾಂಜಾ ಡೀಲಿಂಗ್ ಸಂಪರ್ಕ ಜಾಲ ಬಯಲಿಗೆ ಬರಲಿದೆ. ಮಾತ್ರವಲ್ಲ ಶ್ರೀಲಂಕ ಸೇರಿದಂತೆ ವಿವಿಧ ದೇಶಗಳಲ್ಲಿ ಆಯೋಜಿಸಿದ್ದ ಪಾರ್ಟಿ ಹಾಗೂ ಡ್ರಗ್ ನೆಟ್ ವರ್ಕ್ ನಲ್ಲಿ ಶಾಮೀಲಾಗಿರುವ ಪ್ರತಿಷ್ಠಿತರು ಹೆಸರು ಹೊರ ಬರಲಿದೆ ಎಂಬ ಮಾಹಿತಿ ಲಭ್ಯವಾಗಿದೆ.











Click it and Unblock the Notifications