ಶೇಷಾದ್ರಿಪುರ ಪೊಲೀಸರ ವಶಕ್ಕೆ ನಟ ಚೇತನ್ ಕುಮಾರ್, ಕಾರಣ ಏನು?
ಬೆಂಗಳೂರು, ಫೆ. 22: ಹಿಜಾಬ್ ವಿವಾದ ಕುರಿತು ವಿವಾದಾತ್ಮಕ ಪೋಸ್ಟ್ ಹಾಕಿದ ಅರೋಪದ ಹಿನ್ನೆಲೆಯಲ್ಲಿ ನಟ ಚೇತನ್ ಕುಮಾರ್ ಅವರನ್ನು ಶೇಷಾದ್ರಿಪುರಂ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಹಿಜಾಬ್ ಕುರಿತು ಯಾವುದೇ ವಿವಾದತ್ಮಕ ಪೋಸ್ಟ್ ಮಾಡದಂತೆ ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲಪಂತ್ ಸೂಚನೆ ನೀಡಿದ್ದರು. ಅತ್ಯಾಚಾರ ಪ್ರಕರಣವೊಂದು ಉಲ್ಲೇಖಿಸಿ ಎರಡು ವರ್ಷದ ಹಿಂದೆ ನಟ ಚೇತನ್ ಹೈಕೋರ್ಟ್ ನ್ಯಾ. ಕೃಷ್ಣ ದೀಕ್ಷಿತ್ ಬಗ್ಗೆ ವಿವಾದಾತ್ಮಕ ಪೋಸ್ಟ್ ಹಾಕಿದ್ದರು. ಹಿಜಾಬ್ ವಿವಾದವನ್ನು ನ್ಯಾ. ಕೃಷ್ಣ ದೀಕ್ಷಿತ್ ವಿಚಾರಣೆ ನಡೆಸುತ್ತಿದ್ದನ್ನು ಉಲ್ಲೇಖಿಸಿ ಫೆ. 16 ರಂದು ಪೋಸ್ಟ್ ಮಾಡಿದ್ದರು. " ಈ ವಾರ ಕರ್ನಾಟಕ ಹೈಕೋರ್ಟ್ ನ್ಯಾ. ಕೃಷ್ಣ ದೀಕ್ಷಿತ್ ಅವರು ಅತ್ಯಾಚಾರದ ಆರೋಪಿ ರಾಕೇಶ್ ಬಿ. ಅವರಿಗೆ ಬಂಧನ ಪೂರ್ವ ಜಾಮೀನು ಮಂಜೂರು ಮಾಡಿ " ಅತ್ಯಾಚಾರದ ನಂತರ ಮಲಗುವುದು ಒಬ್ಬ ಭಾರತೀಯ ಮಹಿಳೆಗೆ ನಾಚಿಕೆಗೇಡಿನ ಸಂಗತಿ. ಅಂತಹ ಸಮಯದಲ್ಲಿ ಮಹಿಳೆಯರು ಪ್ರತಿಕ್ರಿಯಿಸುವ ರೀತಿ ಅದಲ್ಲ ಎಂಬ ಹೇಳಿಕೆ ನೀಡಿದ್ದರು.

21 ನೇ ಶತಮಾನದಲ್ಲಿ ಕೂಡ ನ್ಯಾಯಾಂಗದ ದೀಕ್ಷಿತ್ ಅವರ ಸ್ತ್ರೀ ದ್ವೇಷ, ನಾಚಿಕೆಗೇಡಿನ ಸಂಗತಿ. ಈ ಟ್ವೀಟ್‌ನ್ನು ನಾನು ಕರ್ನಾಟಕ ಹೈಕೋರ್ಟ್ ತೀರ್ಪಿನ ಬಗ್ಗೆ ಎರಡು ವರ್ಷದ ಹಿಂದೆ ಬರೆದಿದ್ದೆ. ಅದೇ ನ್ಯಾಯಾಧೀಶರು ಶಾಲೆಗಳಲ್ಲಿ ಹಿಜಾಬ್ ಬೇಕೆ, ಬೇಡವೇ ಎಂಬುದರ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾರೆ. ಕೃಷ್ಣ ದೀಕ್ಷಿತ್ ಅವರಿಗೆ ಹಿಜಾಬ್ ಕುರಿತು ಸ್ಪಷ್ಟತೆ ಇದೆಯೆ ಎಂದು ಪ್ರಶ್ನಿಸಿ ಟ್ವೀಟ್ ಮಾಡಿದ್ದರು.

ಈ ವಿವಾದಾತ್ಮಕ ಟ್ವೀಟ್ ಹಿನ್ನೆಲೆಯಲ್ಲಿ ನಟ ಚೇತನ್ ಕುಮಾರ್ ಅವರ ವಿರುದ್ಧ ಶೇಷಾದ್ರಿಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ವಶಕ್ಕೆ ಪಡೆಯಲಾಗಿದೆ.












Click it and Unblock the Notifications