ಬೆಂಗಳೂರು; ಮಾಜಿ ಮೇಯರ್ ಸಂಪತ್ ರಾಜ್ ಆಸ್ಪತ್ರೆಗೆ ದಾಖಲು
ಬೆಂಗಳೂರು, ನವೆಂಬರ್ 22 : ಬೆಂಗಳೂರಿನ ಮಾಜಿ ಮೇಯರ್, ಡಿ. ಜೆ. ಹಳ್ಳಿ ಮತ್ತು ಕೆ. ಜಿ. ಹಳ್ಳಿ ಗಲಭೆ ಪ್ರಕರಣದ ಆರೋಪಿ ಸಂಪತ್ ರಾಜ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಕೋರ್ಟ್ ಆದೇಶ ನೀಡಿತ್ತು.
ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದ ಸಂಪತ್ ರಾಜ್‌ರನ್ನು ಜಯದೇವ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಜೈಲಿನ ಸಿಬ್ಬಂದಿ ಅವರನ್ನು ಆರೋಗ್ಯ ತಪಾಸಣೆಗಾಗಿ ಕರೆತಂದಿದ್ದರು. ವರದಿ ಬಳಿಕ ಅವರನ್ನು ಅಲ್ಲಿಯೇ ದಾಖಲು ಮಾಡಲಾಗಿದೆ.
ಡಿ. ಜೆ. ಹಳ್ಳಿ ಮತ್ತು ಕೆ. ಜಿ. ಹಳ್ಳಿ ಗಲಭೆ ಪ್ರಕರಣದ ಆರೋಪಿ ಸಂಪತ್ ರಾಜ್ 22 ದಿನಗಳ ಕಾಲ ನಾಪತ್ತೆಯಾಗಿದ್ದರು. ಬಳಿಕ ಅವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದರು. ಎರಡು ದಿನಗಳ ಕಾಲ ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸಿದ್ದರು.

ನ್ಯಾಯಾಲಯ ಅವರನ್ನು 5 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತ್ತು. ಪರಪ್ಪನ ಅಗ್ರಹಾರ ಜೈಲಿಗೆ ಅವರನ್ನು ಕಳಿಸಲಾಗಿತ್ತು. ಆದರೆ, ಎದೆನೋವು ಕಾಣಿಸಿಕೊಂಡ ಹಿನ್ನಲೆಯಲ್ಲಿ ಆಸ್ಪತ್ರೆಗೆ ಕರೆತರಲಾಗಿತ್ತು.
22 ದಿನಗಳ ಕಾಲ ನಾಪತ್ತೆಯಾಗಿದ್ದ ಸಂಪತ್ ರಾಜ್ ಸರಿಯಾಗಿ ಊಟ, ನಿದ್ದೆ ಮಾಡಿಲ್ಲ. ಆದ್ದರಿಂದ, ಅವರ ಆರೋಗ್ಯದಲ್ಲಿ ಏರುಪೇರಾಗಿದ್ದು, ರಕ್ತದೊತ್ತಡ ಮತ್ತು ಶುಗರ್ ಲೆವಲ್‌ನಲ್ಲಿ ಹೆಚ್ಚುಕಮ್ಮಿಯಾಗಿದೆ.
ಜೈಲಿಗೆ ವಾಪಸ್ : ಸಂಪತ್ ರಾಜ್ ಅವರನ್ನು ಆಸ್ಪತ್ರೆಗೆ ದಾಖಲಿಸಿಕೊಂಡು ಪರೀಕ್ಷೆ ನಡೆಸಿದ ಬಳಿಕ ಜೈಲಿಗೆ ವಾಪಸ್ ಕಳಿಸಲಾಗಿದೆ.












Click it and Unblock the Notifications