ಇರಾನ್ ಸೇನೆಗೆ ಎಚ್ಚರಿಕೆ ಸಂದೇಶ ರವಾನಿಸಿದ ಸೌದಿ ಅರೇಬಿಯಾ, ಪರಿಸ್ಥಿತಿ ಭೀಕರ | Iran Conflict
ಮಧ್ಯಪ್ರಾಚ್ಯ ಇಷ್ಟುದಿನ ತೈಲ ಮಾರಾಟಕ್ಕೆ ಹೆಸರು ಮಾಡಿತ್ತು, ಆದರೆ ಈಗ ಯುದ್ಧದ ಕಾರಣದಿಂದ ಇಡೀ ಜಗತ್ತಿನಾದ್ಯಂತ ಚರ್ಚೆಯಲ್ಲಿದೆ. ಇರಾನ್ ಯಾರ ಮಾತನ್ನು ಕೇಳುತ್ತಿಲ್ಲ, ತನ್ನ ಮೇಲೆ ನಡೆದಿರುವ ದಾಳಿಗೆ ಪ್ರತಿಕಾರದ ಮಂತ್ರ ಜಪಿಸುತ್ತಾ ಮತ್ತೆ ಮತ್ತೆ ತನ್ನ ಅಕ್ಕಪಕ್ಕ ಇರುವ ದೇಶಗಳ ಮೇಲೆ ದಾಳಿ ಮಾಡುತ್ತಿದೆ. ಈವರೆಗೂ ಈ ರೀತಿ ಇರಾನ್ ನಡೆಸಿರುವ ದಾಳಿ ಪರಿಣಾಮ, ಸೌದಿ ಅರೇಬಿಯಾ ಸೇರಿದಂತೆ ಕತಾರ್, ಕುವೈತ್ ಮತ್ತು ಯುಎಇ ದೊಡ್ಡ ಮಟ್ಟದಲ್ಲಿ ನಷ್ಟ ಅನುಭವಿಸಿವೆ. ನೋಡ ನೋಡುತ್ತಲೇ ಮಧ್ಯಪ್ರಾಚ್ಯ ಭಾಗದಲ್ಲಿ ನರಕದ ವಾತಾವರಣ ಸೃಷ್ಟಿಯಾಗಿದ್ದು, ಈಗಾಗಲೇ ಸಾವಿರಾರು ಜನ ಜೀವ ಕಳೆದುಕೊಂಡು ಲಕ್ಷಾಂತರ ಜನರ ಜೀವ ಕಂಟಕದಲ್ಲಿ ಸಿಲುಕಿದೆ.
ಹೀಗಿದ್ದಾಗಲೇ ಇರಾನ್ ಜೊತೆಗೆ ಶಾಂತಿ ಮಾತುಕತೆಗೆ ಅಮೆರಿಕ ಕೂಡ ಮನಸ್ಸು ಮಾಡುತ್ತಿದೆ, ಆದರೆ ತನ್ನ ಮೇಲೆ ದಾಳಿ ಮಾಡಿದ್ದು ಏಕೆ? ಎಂಬ ಕೋಪದಲ್ಲಿ ಈಗ ಇರಾನ್ ಹಲವು ಡಿಮ್ಯಾಂಡ್ ಮುಂದೆ ಇಟ್ಟು ದಾಳಿ ನಡೆಸುತ್ತಿದೆ. ಈ ಕಾರಣಕ್ಕೆ, ನೇರವಾಗಿ ಭಾರಿ ದೊಡ್ಡ ಎಚ್ಚರಿಕೆ ಸಂದೇಶ ಕೊಟ್ಟಿದೆ ಸೌದಿ ಅರೇಬಿಯಾ. ಅದರಲ್ಲೂ ಸೌದಿ ಅರೇಬಿಯಾ ವಿದೇಶಾಂಗ ಸಚಿವ ಪ್ರಿನ್ಸ್ ಫೈಸಲ್ ಬಿನ್ ಫರ್ಹಾನ್ ಅಲ್ ಸೌದ್, ತಮ್ಮ ದೇಶ & ಪಕ್ಕದ ಗಲ್ಫ್ ರಾಷ್ಟ್ರಗಳ ಮೇಲೆ ಇರಾನ್ ನಡೆಸುತ್ತಿರುವ ದಾಳಿಗಳನ್ನ ಹೆಚ್ಚು ಕಾಲ ಸಹಿಸುವುದಿಲ್ಲ ಎಂದು ಎಚ್ಚರಿಸಿದ್ದಾರೆ. ತಕ್ಷಣ ಇರಾನ್ ತನ್ನ ನೀತಿ ಮರುಪರಿಶೀಲಿಸಲಿ, ಎಂದು ಕೂಡ ಪ್ರಿನ್ಸ್ ಫೈಸಲ್ ಬಿನ್ ಫರ್ಹಾನ್ ಅಲ್ ಸೌದ್ ಇರಾನ್‌ಗೆ ಆಗ್ರಹಿಸಿದ್ದಾರೆ. ಈ ಮೂಲಕ ನಾವು ಕೂಡ, ನೇರವಾಗಿ ಇರಾನ್ ವಿರುದ್ಧ ದಾಳಿಗೆ ಸಿದ್ಧ ಎಂಬ ಸಂದೇಶ ರವಾನಿಸಿದೆ ಸೌದಿ ಅರೇಬಿಯಾ.

ಪೂರ್ವ ನಿಯೋಜಿತ ದಾಳಿ ಎಂಬ ಆರೋಪ
ಸೌದಿ ಅರೇಬಿಯಾ ವಿದೇಶಾಂಗ ಸಚಿವ ಪ್ರಿನ್ಸ್ ಫೈಸಲ್ ಬಿನ್ ಫರ್ಹಾನ್ ಅಲ್ ಸೌದ್ ಈ ಬಗ್ಗೆ ದಿಢೀರ್ ಮಹತ್ವದ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ್ದಾರೆ. ನಮಗೆ ಅಗತ್ಯ ಎದುರಾದರೆ ವೈರಿಗಳ ವಿರುದ್ಧ ಬಳಸಲು ದೊಡ್ಡ ಮಟ್ಟದ ಸಾಮರ್ಥ್ಯ ಮತ್ತು ಶಕ್ತಿ ಹೊಂದಿದ್ದೇವೆ ಎಂದು ಸೌದ್ ಎಚ್ಚರಿಸಿದ್ದಾರೆ. ಈ ಮೂಲಕ ನೇರವಾಗಿ ಇರಾನ್ ವಿರುದ್ಧ ದಾಳಿ ಮಾಡುವ ಬಗ್ಗೆ ಮಾತನಾಡಿದ್ದಾರೆ ಪ್ರಿನ್ಸ್ ಫೈಸಲ್ ಬಿನ್ ಫರ್ಹಾನ್ ಅಲ್ ಸೌದ್. ಹಾಗೇ ನಮ್ಮ ಮೇಲೆ ನಡೆಯುತ್ತಿರುವ ದಾಳಿ ಪೂರ್ವ ನಿಯೋಜಿತವಾಗಿದೆ. ನಮ್ಮ ನೆರೆ ದೇಶಗಳ ಮೇಲೆ ಕೂಡ ಇಂತಹದ್ದೇ ದಾಳಿ ನಡೆಯುತ್ತಿದೆ ಎಂದು ಆಕ್ರೋಶ ಹೊರ ಹಾಕಿರುವ ಸೌದಿ ವಿದೇಶಾಂಗ ಸಚಿವರು, ಯೋಜನೆ ರೂಪಿಸಿಯೇ ವ್ಯವಸ್ಥಿತವಾಗಿ ನಡೆಸಿದ ದಾಳಿ ಇದು ಎಂದು ಆರೋಪಿಸಿದ್ದಾರೆ.
ಮತ್ತೊಬ್ಬ ಇರಾನ್ ಸಚಿವ ಸಾವು
ಇಸ್ರೇಲ್ ಸೇನೆಯಿಂದ ಇರಾನ್ ಮೇಲೆ ಮಾರಣಾಂತಿಕ ದಾಳಿ ಮುಂದುವರಿದ ಹಿನ್ನೆಲೆ ಮತ್ತೊಬ್ಬ ಸಚಿವ ಜೀವ ಬಿಟ್ಟಿರುವುದು ಕನ್ಫರ್ಮ್ ಆಗಿದೆ. ಇರಾನ್‌ನ ಗುಪ್ತಚರ ಸಚಿವ ಇಸ್ಮಾಯಿಲ್ ಖತೀಬ್ ಇಸ್ರೇಲ್ ದಾಳಿಗೆ ಬಲಿಯಾಗಿದ್ದು, ಇಸ್ಮಾಯಿಲ್ ಖತೀಬ್ ಹತ್ಯೆ ಮಾಡಿದ್ದೀವಿ ಎಂದು ಇಸ್ರೇಲ್ ಕೆಲವು ಗಂಟೆಗಳ ಹಿಂದೆ ಹೇಳಿಕೊಂಡಿತ್ತು. ಇರಾನ್ ಕೂಡ ಈ ವಿಚಾರ ಕನ್ಫರ್ಮ್ ಮಾಡಿದ್ದು, ಆ ಮೂಲಕ ಯುದ್ಧ ಇನ್ನಷ್ಟು ತೀವ್ರವಾಗುವ ಮುನ್ಸೂಚನೆ ಸಿಕ್ಕಿದೆ. ಅದರಲ್ಲೂ ಸೌದಿ ಅರೇಬಿಯಾ ಸೇರಿ ತನ್ನ ಅಕ್ಕಪಕ್ಕದ ದೇಶಗಳ ಮೇಲೆಯೇ ಇರಾನ್ ಪ್ರಹಾರ ನಡೆಸುತ್ತಿದೆ ಎಂದು ನೆರೆಯ ದೇಶಗಳು ಆರೋಪ ಮಾಡುತ್ತಿವೆ.












Click it and Unblock the Notifications