ಮದ್ಯ ಪ್ರಿಯರಿಗೆ ಶಾಕಿಂಗ್ ನ್ಯೂಸ್; ಬೆಂಗಳೂರಲ್ಲಿ ಎರಡು ದಿನ ಎಣ್ಣೆ ಸಿಗಲ್ಲ!
ಬೆಂಗಳೂರು, ಆಗಸ್ಟ್ 28: ದೇಶಾದ್ಯಂತ ಗೌರಿ-ಗಣೇಶ ಹಬ್ಬವನ್ನು ಸಡಗರದಿಂದ ಆಚರಣೆ ಮಾಡಿದ್ದಾರೆ. ಬೆಂಗಳೂರಿನಲ್ಲಿ ಸಾಮೂಹಿಕ ಗಣೇಶ ವಿಸರ್ಜನೆ ಹಿನ್ನೆಲೆಯಲ್ಲಿ ಆಗಸ್ಟ್ 30 ಮತ್ತು 31 ರಂದು ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ಮದ್ಯ ಮಾರಾಟ ನಿಷೇಧಿಸಿ ಮಹತ್ವದ ಆದೇಶವನ್ನ ಹೊರಡಿಸಲಾಗಿದೆ. ಬೆಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಸಾಮೂಹಿಕ ಗಣೇಶ ಮೂರ್ತಿಗಳು ವಿಸರ್ಜನಾ ಕಾರ್ಯಕ್ರಮ ಇರುವುದರಿಂದ ಕಿಡಿಗೇಡಿಗಳು ಮಧ್ಯ ಸೇವಿಸಿ ದಾಂದಲೆ ಮಾಡುವ ಸಾಧ್ಯತೆ ಇರುವುದರಿಂದ ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ಮದ್ಯ ಮಾರಾಟವನ್ನ ನಿಷೇಧಿಸಲಾಗಿದೆ.
ಬೆಂಗಳೂರು ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ 2025ನೇ ಸಾಲಿನ ಸಾಮೂಹಿಕ ಗಣೇಶ ಮೂರ್ತಿಗಳ ವಿಸರ್ಜನಾ ಕಾರ್ಯಕ್ರಮದ ಮೆರವಣಿಗೆಯ ಸಮಯದಲ್ಲಿ ಕೆಲವು ಕಿಡಿಗೇಡಿಗಳು ಮದ್ಯಪಾನ ಮಾಡಿ ಕಾನೂನು ಮತ್ತು ಸುವ್ಯವಸ್ಥೆಗೆ ತೊಂದರೆ ಮಾಡಬಹುದಾದ ಸಾಧ್ಯತೆಗಳಿರುತ್ತವೆ. ಈ ನಿಟ್ಟಿನಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವ ದೃಷ್ಟಿಯಿಂದ ಮುನ್ನೆಚ್ಚರಿಕಾ ಕ್ರಮವಾಗಿ ಬೆಂಗಳೂರು ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯ ಕೆಲವು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಮದ್ಯದಂಗಡಿ, ಬಾರ್ ಮತ್ತು ರೆಸ್ಟೋರೆಂಟ್ ಹಾಗೂ ವೈನ್ಸ್‌ಗಳಲ್ಲಿ ಮದ್ಯ ಮಾರಾಟವನ್ನು ನಿಷೇಧಿಸುವಂತೆ ಸಂಬಂಧಪಟ್ಟ ವಿಭಾಗಗಳ ಉಪ ಪೊಲೀಸ್ ಆಯುಕ್ತರುಗಳು ಉಲ್ಲೇಖಿತ ಪತ್ರಗಳಲ್ಲಿ ಪ್ರತ್ಯೇಕವಾಗಿ ಮನವಿಯನ್ನು ಸಲ್ಲಿಸಿರುತ್ತಾರೆ.

2025ನೇ ಸಾಲಿನ ಸಾಮೂಹಿಕ ಗಣೇಶ ಮೂರ್ತಿಗಳ ವಿಸರ್ಜನಾ ಕಾರ್ಯಕ್ರಮದ ಮೆರವಣಿಗೆಯ ಸಮಯದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಹಾಗೂ ಕಾನೂನು ಮತ್ತು ಸುವ್ಯವಸ್ಥೆಗೆ ಭಂಗವುಂಟಾಗದಂತೆ ಅಹಿತಕರ ಘಟನೆಗಳನ್ನು ತಡೆಯುವ ಅವಶ್ಯಕತೆ ಇರುವುದರಿಂದ ಈ ಕೆಳಕಂಡ ವಿಭಾಗಗಳ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಅವುಗಳ ಮುಂದೆ ನಮೂದಿಸಲಾದ ದಿನಾಂಕಗಳು ಮತ್ತು ಸಮಯದಲ್ಲಿ ಮದ್ಯ ಮಾರಾಟವನ್ನು ನಿಷೇಧಿಸುವುದು ಸೂಕ್ತವೆಂದು ಮನಗಂಡಿರುತ್ತೇನೆ. ಆದ್ದರಿಂದ ಈ ಆದೇಶ ಹೊರಡಿಸಲಾಗಿದೆ ಎಂಬ ಮಾಹಿತಿ ತಿಳಿದು ಬಂದಿದೆ.
ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಲು ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ ಕಲಂ.163 ರ ಉಪ ಕಲಂ (1) ಮತ್ತು (3) ರ ಅನ್ವಯ ಪ್ರದತ್ತವಾದ ಅಧಿಕಾರಿವನ್ನು ಚಲಾಯಿಸಿ ಸೀಮಾಂತ್ ಕುಮಾರ್ ಸಿಂಗ್, ಭಾ.ಪೊ.ಸೇ. ಪೊಲೀಸ್ ಆಯುಕ್ತರು, ಬೆಂಗಳೂರು ನಗರ ಆದ ನಾನು ಬೆಂಗಳೂರು ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯ ಈ ಕೆಳಕಂಡ ವಿಭಾಗಗಳ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಅವುಗಳ ಮುಂದೆ ನಮೂದಿಸಲಾದ ದಿನಾಂಕಗಳು ಮತ್ತು ಸಮಯದಲ್ಲಿ CL-4 & CL-6A ಪರವಾನಗಿಗಳನ್ನು ಹೊರತುಪಡಿಸಿ, ಉಳಿದ ಎಲ್ಲಾ ಬಾರ್ & ರೆಸ್ಟೋರೆಂಟ್‌ಗಳು, ವೈನ್ಸ್ ಷಾಪ್ ಗಳು, ಪಬ್‌ಗಳು, ಎಂ.ಎಸ್.ಐ.ಎಲ್. ಮಳಿಗೆಗೆಳು ಸೇರಿದಂತೆ ಎಲ್ಲಾ ರೀತಿಯ ಮದ್ಯ ಮಾರಾಟವನ್ನು ಮಾಡುವ ಅಂಗಡಿಗಳನ್ನು ಮುಚ್ಚಲು ಹಾಗೂ ಮಾರಾಟವನ್ನು ಮಾಡದಿರಲು ನಿಷೇಧಾಜ್ಞೆಯನ್ನು ವಿಧಿಸಲಾಗಿದೆ.
ಹುಬ್ಬಳ್ಳಿ-ಧಾರವಾಡ ಮದ್ಯ ಮಾರಾಟ ನಿಷೇಧ
ಹೌದು, ಗಣೇಶ ಚತುರ್ಥಿ ಹಾಗೂ ಈದ್-ಮಿಲಾದ್ ಹಬ್ಬದ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಹಾಗೂ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವ ಹಿತದೃಷ್ಠಿಯಿಂದ ಮದ್ಯಪಾನ, ಮದ್ಯ ಮಾರಾಟ ಮತ್ತು ಮದ್ಯ ಸಾಗಾಣಿಕೆಯನ್ನು ಹುಬ್ಬಳ್ಳಿ-ಧಾರವಾಡ ಅವಳಿನಗರದಲ್ಲಿ ನಿಷೇಧಿಸಿ ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮೀಷನರ್ ಮತ್ತು ಹೆಚ್ಚುವರಿ ಜಿಲ್ಲಾ ದಂಡಾಧಿಕಾರಿ ಎನ್ ಶಶಿಕುಮಾರ ಆದೇಶ ಹೊರಡಿಸಿದ್ದಾರೆ.
ಹುಬ್ಬಳ್ಳಿ-ಧಾರವಾಡದಲ್ಲಿ ಆಗಸ್ಟ್ 26ರ ರಾತ್ರಿ 11.59ರಿಂದ 28ರ ಬೆಳಿಗ್ಗೆ 6ರವರೆಗೆ ಮತ್ತು 30ರ ರಾತ್ರಿ 11.59ರಿಂದ ಸೆಪ್ಟೆಂಬರ್ 1ರ ಬೆಳಿಗ್ಗೆ 6ರವರೆಗೆ, ಸೆ.1ರ ರಾತ್ರಿ 11.59ರಿಂದ ಸೆ.3ರ ಬೆಳಿಗ್ಗೆ 6ರವರಗೆ ಹಾಗೂ ಸೆ.3ರ ರಾತ್ರಿ 11.59ರಿಂದ ಸೆ.7ರ ಬೆಳಿಗ್ಗೆ 6ರವರಗೆ ಮದ್ಯಪಾನ, ಮದ್ಯ ಮಾರಾಟ ಮತ್ತು ಮದ್ಯ ಸಾಗಾಣಿಕೆಯನ್ನು ನಿಷೇಧಿಸಿ ಆದೇಶಿಸಿದ್ದಾರೆ.












Click it and Unblock the Notifications