ಬಸ್ಸುಗಳಲ್ಲಿ ತುರ್ತು ನಿರ್ಗಮನದ ಬಗ್ಗೆ ವಿಡಿಯೋ ಪ್ರಸಾರ!
ಬೆಂಗಳೂರು, ನ, 2 : ಆಂಧ್ರಪ್ರದೇಶದಲ್ಲಿ ರಾಜ್ಯದ ಖಾಸಗಿ ಬಸ್ ದುರಂತ ಸಂಭವಿಸಿದ ಬಳಿಕ ಸಾರಿಗೆ ಇಲಾಖೆ ಹೊಸ ನಿಯಮ ಜಾರಿಗೆ ತರಲು ಮುಂದಾಗಿದೆ. ಅದರಂತೆ ಖಾಸಗಿ ಮತ್ತು ಸರ್ಕಾರಿ ಬಸ್ ಗಳಲ್ಲಿ ಇನ್ನು ಮುಂದೆ ತುರ್ತು ನಿರ್ಗಮನವ ಬಗ್ಗೆ ಮಾಹಿತಿ ನೀಡುವ ವಿಡಿಯೋ ತುಣುಕು ಪ್ರಸಾರವಾಗಲಿದೆ.
ಈ ಕುರಿತು ಮಾಹಿತಿ ನೀಡಿರುವ ಸಾರಿಗೆ ಇಲಾಖೆ, ಚಿತ್ರಮಂದಿರದಲ್ಲಿ ಧೂಮಪಾನದ ಕುರಿತು ಜನರಿಗೆ ಮಾಹಿತಿ ನೀಡುವ ಜಾಹೀರಾತು ಪ್ರದರ್ಶನವಾಗುವಂತೆ, ಬಸ್ ನಲ್ಲಿರುವ ತುರ್ತು ನಿರ್ಗಮನ ಮತ್ತು ಅದನ್ನು ಹೇಗೆ ಬಳಸಬೇಕು ಎಂಬ ವಿಡಿಯೋವನ್ನು ಬಸ್ ಗಳಲ್ಲಿ ಪ್ರಸಾರ ಮಾಡಲಾಗುವುದು ಎಂದು ಹೇಳಿದ್ದಾರೆ. ಶೀಘ್ರವೇ ಈ ಯೋಜನೆ ಜಾರಿಗೆ ಬರಲಿದೆ.

ಸರ್ಕಾರಿ ಮತ್ತು ಖಾಸಗಿ ಬಸ್ ಗಳಲ್ಲಿ ಈ ವಿಡಿಯೋ ಪ್ರಸಾರ ಮಾಡುವುದನ್ನು ಕಡ್ಡಾಯಗೊಳಿಸಲು ಇಲಾಖೆ ಚಿಂತನೆ ನಡೆಸಿದೆ. ಅದರಂತೆ ಮೊದಲ ಹಂತದಲ್ಲಿ ಎಸಿ ಬಸ್ ಗಳಲ್ಲಿ ಈ ವಿಡಿಯೋ ಪ್ರಸಾರ ವಾಗಲಿದೆ. ಟಿವಿ ಸೌಲಭ್ಯವಿಲ್ಲದ ಹವಾನಿಯಂತ್ರಣ ರಹಿತ ಬಸ್ ಗಳಲ್ಲಿ ಚಾಲಕರು ಪ್ರಯಾಣಿಕರಿಗೆ ತುರ್ತು ನಿರ್ಗಮನದ ಕುರಿತು ಮಾಹಿತಿ ನೀಡಲು ಸೂಚಿಸಲಾಗುತ್ತದೆ.
ಬಸ್ ಗಳಲ್ಲಿ ತುರ್ತು ನಿರ್ಗಮನವಿರುದ ಸ್ಥಳದಲ್ಲಿ ಕೆಂಪು ದೀಪವನ್ನು ಹಾಕುವ ಮೂಲಕ ಪ್ರಯಾಣಿಕರಿಗೆ ಆ ಕುರಿತು ಮಾಹಿತಿ ನೀಡಲು ಪ್ರಸ್ತಾವನೆಯಲ್ಲಿ ತೀರ್ಮಾನಿಸಲಾಗಿದೆ. ಪ್ರಯಾಣಿಕರ ಹಿತ ದೃಷ್ಠಿಯಿಂದ ಇಂತಹ ಯೋಜನೆ ಜಾರಿಗೆ ತರಲು ಮುಂದಾಗಿದೆ. (ಹೈದರಾಬಾದಿನ ಬಸ್ ದುರಂತದ ಚಿತ್ರಗಳು)
ದಂಡ ಪ್ರಯೋಗ : ಹಬ್ಬದ ದಿನಗಳಲ್ಲಿ ಕಾನೂನು ಬಾಹಿರವಾಗಿ ಸಂಚರಿಸುತ್ತಿದ್ದ ಖಾಸಗಿ ಬಸ್ ಗಳ ಸಾರಿಗೆ ಇಲಾಖೆ ಸಮರ ಸಾರಿದೆ. ಗುರುವಾರ ಮತ್ತು ಶುಕ್ರವಾರ ಖಾಸಗಿ ಬಸ್‌ಗಳ ಕಾನೂನುಬಾಹಿರ ಸಂಚಾರದ ಮೇಲೆ ದಂಡ ಪ್ರಯೋಗ ಮಾಡಲಾಗಿದೆ ಎಂದು ಇಲಾಖೆಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ. 139 ವಾಹನಗಳ ಮೇಲೆ ಕಾನೂನು ಉಲ್ಲಂಘನೆ ಪ್ರಕರಣ ದಾಖಲಿಸಿಕೊಂಡಿದ್ದು, 24, 800 ರೂಪಾಯಿ ದಂಡವನ್ನು ವಸೂಲಿ ಮಾಡಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.











Click it and Unblock the Notifications