Namma Metro: ಆರ್. ವಿ. ರಸ್ತೆ-ಬೊಮ್ಮಸಂದ್ರ ಮೆಟ್ರೋ ಸಂಚಾರ, ಸಚಿವರ ಅಪ್‌ಡೇಟ್
ಬೆಂಗಳೂರು, ಮಾರ್ಚ್ 10: ಉದ್ಯಾನ ನಗರಿ ಬೆಂಗಳೂರಿನ ಬಹು ನಿರೀಕ್ಷಿತ ನಮ್ಮ ಮೆಟ್ರೋ ಮಾರ್ಗ ಆರ್. ವಿ. ರಸ್ತೆ - ಬೊಮ್ಮಸಂದ್ರ. ಹಳದಿ ಮಾರ್ಗದಲ್ಲಿ ಯಾವಾಗ ರೈಲು ಸಂಚಾರ ಆರಂಭ? ಎಂಬುದು ಚರ್ಚೆಯ ವಿಚಾರ. ಎಲೆಕ್ಟ್ರಾನಿಕ್ ಸಿಟಿಗೆ ಸಂಪರ್ಕ ಕಲ್ಪಿಸುವ ಈ ಮಾರ್ಗ ನಗರದ ಸಾಫ್ಟ್‌ವೇರ್ ಇಂಜನಿಯರ್‌ಗಳಿಗೆ ಅನುಕೂಲವಾಗಲಿದೆ. ಪ್ರತಿನಿತ್ಯ 3 ಲಕ್ಷ ಜನರು ಈ ಮಾರ್ಗದಲ್ಲಿ ಸಂಚಾರ ನಡೆಸಬಹುದು ಎಂದು ಅಂದಾಜಿಸಲಾಗಿದೆ. ಬಿಎಂಆರ್‌ಸಿಎಲ್ ಈ ಮಾರ್ಗದಲ್ಲಿ ಪ್ರಸ್ತುತ ರೈಲುಗಳ ಪ್ರಾಯೋಗಿಕ ಸಂಚಾರವನ್ನು ನಡೆಸುತ್ತಿದೆ.
2021ರಲ್ಲಿ ವಾಣಿಜ್ಯ ಸಂಚಾರಕ್ಕೆ ಮುಕ್ತವಾಗಬೇಕಿದ್ದ ಸುಮಾರು 18 ಕಿ. ಮೀ. ಉದ್ದದ ನಮ್ಮ ಮೆಟ್ರೋ ಹಳದಿ ಮಾರ್ಗ ತನ್ನ ಹಲವು ಗಡುವುಗಳನ್ನು ದಾಟಿ ಹೋಗಿದೆ. ರೈಲುಗಳ ಕೊರತೆ ಕಾರಣಕ್ಕೆ 2025ರ ಜನವರಿಯಲ್ಲಿಯೂ ಮಾರ್ಗ ರೈಲುಗಳ ಸಂಚಾರಕ್ಕೆ ಮುಕ್ತವಾಗಿಲ್ಲ. ಹಾಗಾದರೆ ರೈಲುಗಳ ಸಂಚಾರ ಯಾವಾಗ?.

ಬೊಮ್ಮನಹಳ್ಳಿ ಶಾಸಕ ಸತೀಶ್ ರೆಡ್ಡಿ ಈ ಕುರಿತು ಕೇಳಿದ್ದ ಪ್ರಶ್ನೆಗೆ ಉಪ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಉತ್ತರ ನೀಡಿದ್ದಾರೆ, "ಆರ್. ವಿ. ರಸ್ತೆ-ಬೊಮ್ಮಸಂದ್ರ ಹಳದಿ ಮಾರ್ಗ ಮೇ 2025ಕ್ಕೆ ಜನರ ಸಂಚಾರಕ್ಕೆ ಮುಕ್ತವಾಗಲಿದೆ" ಎಂದು ಹೇಳಿದ್ದಾರೆ. ಈ ಮಾರ್ಗದಲ್ಲಿ ಚಾಲಕ ರಹಿತ ನಮ್ಮ ಮೆಟ್ರೋ ರೈಲನ್ನು ಓಡಿಸಲು ಬಿಎಂಆರ್‌ಸಿಎಲ್ ಮುಂದಾಗಿದೆ.
ಪ್ರಾಯೋಗಿಕ ಸಂಚಾರ: ಆರ್. ವಿ. ರಸ್ತೆ-ಬೊಮ್ಮಸಂದ್ರ ಮಾರ್ಗದ ನಿರ್ಮಾಣ ಕಾರ್ಯಪೂರ್ಣಗೊಂಡಿದೆ. ಬಿಎಂಆರ್‌ಸಿಎಲ್ ಚಾಲಕ ಸಹಿತ, ಚಾಲಕ ರಹಿತ ನಮ್ಮ ಮೆಟ್ರೋ ರೈಲುಗಳನ್ನು ಮಾರ್ಗದಲ್ಲಿ ಓಡಿಸಿ ಪ್ರಾಯೋಗಿಕ ಪರೀಕ್ಷೆಯನ್ನು ನಡೆಸಿದೆ.
ದಕ್ಷಿಣ ವಲಯದ ರೈಲ್ವೆ ಸುರಕ್ಷತಾ ಆಯುಕ್ತರ ತಂಡ ಫೆಬ್ರವರಿಯಲ್ಲಿ ಈ ಮಾರ್ಗದಲ್ಲಿ ಚಾಲಕ ರಹಿತ ನಮ್ಮ ಮೆಟ್ರೋ ರೈಲಿನ ಪ್ರಾಯೋಗಿಕ ಪರೀಕ್ಷೆಯನ್ನು ನಡೆಸಿದ್ದಾರೆ. ಚಾಲಕ ರಹಿತ ಮೆಟ್ರೋ ಸೇವೆಗೆ ಅನುಮತಿ ಪಡೆಯಲು ಇದು ಮೊದಲ ಹೆಜ್ಜೆ ಎಂದು ಬಿಎಂಆರ್‌ಸಿಎಲ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದೆ.
ಹಳದಿ ಮಾರ್ಗದಲ್ಲಿ ರೈಲು ಓಡಿಸಲು ಕೋಲ್ಕತ್ತಾದ ಟಿಆರ್‌ಎಸ್ಎಸ್‌ನಿಂದ ರೈಲು ಬೋಗಿ ಬರಬೇಕಿದೆ. ಸದ್ಯ ಎರಡು ಸೆಟ್ ರೈಲುಗಳು ನಗರಕ್ಕೆ ಬಂದಿದ್ದು, ಅವುಗಳ ಮೂಲಕ ಪ್ರಾಯೋಗಿಕ ಸಂಚಾರವನ್ನು ನಡೆಸಲಾಗಿದೆ. ವಾಣಿಜ್ಯ ಸಂಚಾರ ಮೇ ತಿಂಗಳಿನಲ್ಲಿ ಆರಂಭವಾಗುವ ಸೂಚನೆ ಈಗ ಸಿಕ್ಕಿದೆ.
ಹಳದಿ ಮಾರ್ಗ ನಗರದ ಟೆಕ್ಕಿಗಳಿಗೆ ಅನುಕೂಲವಾಗಲಿದೆ. ಈ ಮಾರ್ಗದಲ್ಲಿ ಮೆಟ್ರೋ ಸಂಚಾರ ಆರಂಭವಾದರೆ ಸಿಲ್ಕ್ ಬೋರ್ಡ್, ಬಿಟಿಎಂ ಪ್ರದೇಶಗಳಲ್ಲಿ ವಾಹನ ಸಂಚಾರ ದಟ್ಟಣೆ ಕಡಿಮೆಯಾಗಲಿದೆ ಎಂದು ನಿರೀಕ್ಷೆ ಮಾಡಲಾಗಿದೆ. ಟೆಕ್ಕಿಗಳು ಸಹ ಯಾವಾಗ ಮೆಟ್ರೋ ಸಂಚಾರ ಆರಂಭ ಎಂದು ಕಾಯುತ್ತಿದ್ದಾರೆ.
ಆರ್. ವಿ. ರಸ್ತೆ ಬೊಮ್ಮಸಂದ್ರ ಮಾರ್ಗದಲ್ಲಿ ಡಬಲ್ ಡೆಕ್ಕರ್ ಫ್ಲೈ ಓವರ್ ಮೇಲೆ ಮೆಟ್ರೋ ಸಂಚಾರ ಮಾಡಲಿದೆ. ಫ್ಲೈ ಓವರ್‌ನ ಒಂದು ಬದಿಯಲ್ಲಿ 2024ರಲ್ಲಿಯೇ ವಾಹನ ಸಂಚಾರ ಆರಂಭವಾಗಿದೆ, ಮತ್ತೊಂದು ಭಾಗ ಸಂಚಾರಕ್ಕೆ ಮುಕ್ತವಾಗಬೇಕಿದೆ.
ಈ ಮಾರ್ಗದಲ್ಲಿ ಬೊಮ್ಮಸಂದ್ರ, ಹೆಬ್ಬಗೋಡಿ, ಇನ್ಫೋಸಿಸ್ ಫೌಂಡೇಶನ್, ಎಲೆಕ್ಟ್ರಾನಿಕ್ ಸಿಟಿ, ಬೆರಟೇನ ಅಗ್ರಹಾರ, ಸಿಂಗಸಂದ್ರ, ಕೂಡ್ಲುಗೇಟ್, ಹೊಂಗಸಂದ್ರ, ಬೊಮ್ಮನಹಳ್ಳಿ, ಸೆಂಟ್ರಲ್ ಸಿಲ್ಕ್ ಬೋರ್ಡ್, ಬಿಟಿಎಂ ಲೇಔಟ್, ಜಯದೇವ ಆಸ್ಪತ್ರೆ, ರಾಗಿಗುಡ್ಡ, ಆರ್. ವಿ. ರಸ್ತೆ ನಿಲ್ದಾಣಗಳಿವೆ.












Click it and Unblock the Notifications