ಕುಖ್ಯಾತ ರೌಡಿ ಶೀಟರ್ ಸ್ಟಾಟ್ ನಾಗ ಪೊಲೀಸರಿಗೆ ಸಿಕ್ಕಿಬಿದ್ದ
ಬೆಂಗಳೂರು, ಏ. 23 : ದರೋಡೆ ಸೇರಿದಂತೆ ಹಲವಾರು ಪ್ರಕರಣದಲ್ಲಿ ಭಾಗಿಯಾಗಿದ್ದ ಬೆಂಗಳೂರಿನ ಕುಖ್ಯಾತ ರೌಡಿಶೀಟರ್ ಸ್ಪಾಟ್ ನಾಗನನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿಸಲು ಬಂದ ಪೊಲೀಸರು ಮೇಲೆಯೇ ಹಲ್ಲೆ ಮಾಡಿ ಪರಾರಿಯಾಗುತ್ತಿದ್ದ ನಾಗನ ಎಡಗಾಲಿಗೆ ಗುಂಡು ಹೊಡೆದ ಪೊಲೀಸರು ಆತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬುಧವಾರ ರಾತ್ರಿ ಪೀಣ್ಯ 2ನೇ ಹಂತದ ಹೆಗ್ಗನಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ರಾಜಗೋಪಲನಗರ ಪೊಲೀಸರು ಸ್ಟಾಟ್ ನಾಗನನ್ನು ಬಂಧಿಸಿದ್ದಾರೆ. ಪೊಲೀಸರಿಂದ ಗುಂಡೇಟು ತಿಂದ ನಾಗನಿಗೆ ಎಂ.ಎಸ್.ರಾಮಯ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. [ಶಿವಮೊಗ್ಗದ ಸ್ಟಾಟ್ ನಾಗನ ಹತ್ಯೆ]

ಪೊಲೀಸರ ಮೇಲೆ ಹಲ್ಲೆ : ಸ್ಟಾಟ್ ನಾಗನನ್ನು ಬಂಧಿಸಲು ಹೋದ ಪೊಲೀಸರ ಮೇಲೆಯೇ ಅವನು ಲಾಂಗ್‌ನಿಂದ ಹಲ್ಲೆ ಮಾಡಿ ಪರಾರಿಯಾಗಲು ಯತ್ನಿಸಿದ್ದ. ಈ ಸಂದರ್ಭದಲ್ಲಿ ಸಬ್‌ಇನ್ಸ್‌ಪೆಕ್ಟರ್ ವಾಸೀಂ ಉಲ್ಲಾ ನಾಗನ ಎಡಗಾಲಿಗೆ ಗುಂಡು ಹೊಡೆದು ಆತನನ್ನು ಹಿಡಿದಿದ್ದಾರೆ. ಘಟನೆಯಲ್ಲಿ ವಾಸೀಂ ಉಲ್ಲಾ ಅವರ ಕೈಗೆ ಗಾಯಗಳಾಗಿವೆ. [ಡೆಡ್ಲಿ ಸೋಮನ ಬಂಟ ಕವಳ ಭೀಕರ ಕೊಲೆ]
ಹಲವಾರು ಪ್ರಕರಣದಲ್ಲಿ ಬೇಕಾಗಿದ್ದ : ಸ್ಟಾಟ್ ನಾಗ ಹಲವಾರು ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ. ನಂದಿನಿ ಲೇಔಟ್, ರಾಜಗೋಪಾಲನಗರ ಸೇರಿದಂತೆ ನಗರದ ವಿವಿಧ ಪೊಲೀಸ್ ಠಾಣೆಗಳಲ್ಲಿ ಈತನ ವಿರುದ್ಧ ಪ್ರಕರಣಗಳು ದಾಖಲಾಗಿವೆ.
2015ರ ಜನವರಿಯಲ್ಲಿ ರಾಜಗೋಪಾಲನಗರ ಠಾಣೆ ವ್ಯಾಪ್ತಿಯಲ್ಲಿ ಒಂಟಿ ಮಹಿಳೆಯ ಮನೆಗೆ ನುಗ್ಗಿ, ಚಾಕು ತೋರಿಸಿ ಬೆದರಿಕೆ ಹಾಕಿದ್ದ ಈತ ಹಣ ಮತ್ತು ಚಿನ್ನಾಭರಣ ದೋಚಿ ಪರಾರಿಯಾಗಿದ್ದ. ಮಹಿಳೆ ಈ ಕುರಿತು ಠಾಣೆಗೆ ದೂರು ನೀಡಿದ್ದಳು.
ರೌಡಿ ಶೀಟರ್ ಜಾಕಿ ಶಿಷ್ಯನಾಗಿರುವ ಈತ ಒಂಟಿ ಮಹಿಳೆಯರು ಇರುವ ಮನೆಗೆ ಹೋಗಿ ಅವರ ನಗ್ನ ಚಿತ್ರ ಮತ್ತು ವಿಡಿಯೋಗಳನ್ನು ತೆಗೆದು ಬ್ಲಾಕ್ ಮೇಲ್ ಮಾಡುತ್ತಿದ್ದ ಎಂಬ ಆರೋಪಗಳು ಇವೆ.












Click it and Unblock the Notifications