D.Roop vs Rohini Sindhuri: ಡಿ ರೂಪಾ ವಿರುದ್ಧ ದೂರು ದಾಖಲಿಸಿದ ರೋಹಿಣಿ ಸಿಂಧೂರಿ ಪತಿ ಸುಧೀರ್ ರೆಡ್ಡಿ
ಇಬ್ಬರು ಉನ್ನತ ಅಧಿಕಾರಿಗಳು ಹೀಗೆ ಸಾರ್ವಜನಿಕವಾಗಿ ಜಗಳವಾಡುತ್ತಿರುವುದಕ್ಕೆ ಹಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ
ಬೆಂಗಳೂರು, ಫೆಬ್ರವರಿ. 20: ಐಪಿಎಸ್ ಅಧಿಕಾರಿ ಡಿ ರೂಪ ವಿರುದ್ಧ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಪತಿ ಸುಧೀರ್ ರೆಡ್ಡಿ ದೂರು ದಾಖಲಿಸಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ್ದ ಅವರು, ಡಿ. ರೂಪಾ ವಿರುದ್ದ ದೂರು ದಾಖಲಿಸುವುದಾಗಿ ಹೇಳಿಕೆ ನೀಡಿದ್ದರು. ಅದರಂತೆ ನಗರದ ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಇಬ್ಬರು ಉನ್ನತ ಅಧಿಕಾರಿಗಳು ಹೀಗೆ ಸಾರ್ವಜನಿಕವಾಗಿ ಜಗಳವಾಡುತ್ತಿರುವುದಕ್ಕೆ ಹಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದರ ಬೆನ್ನಲ್ಲೆ ನನ್ನ ಪತ್ನಿ ರೋಹಿಣಿ ಸಿಂಧೂರಿ ಬಗ್ಗೆ ಗಂಭೀರ ಆರೋಪಗಳನ್ನು ಮಾಡಿ, ಖಾಸಗಿ ಫೋಟೋಗಳನ್ನು ಬಿಡುಗಡೆ ಮಾಡಿರುವ ರೂಪಾ ವಿರುದ್ದ ದೂರು ನೀಡುತ್ತೆನೆ ಎಂದು ಸುಧೀರ್ ರೆಡ್ಡಿ ಹೇಳಿದ್ದರು.

"ನಮ್ಮ ಕುಟುಂಬದ ಬಗ್ಗೆ ಅನಗತ್ಯವಾಗಿ ಮಾತನಾಡಬಾರದು. ರೂಪಾ ಅವರು ಹೀಗೆ ಮಾತನಾಡಲು ಪರ್ಸನಲ್ ಅಜೆಂಡಾ ಏನು ಎಂಬುವುದು ಗೊತ್ತಾಗಬೇಕು. ಪತ್ನಿಯ ಫೋಟೋಗಳು ರೂಪಾ ಅವರಿಗೆ ಸಿಕ್ಕಿದ್ದು ಹೇಗೆ..?" ಎಂದು ಪ್ರಶ್ನಿಸಿದ್ದರು.
" ಈ ರೂಪಾ ಅನ್ನೋರು ಯಾರು..? ರೋಹಿಣಿ ಸಿಂಧೂರಿಗೂ ಅವರಿಗೂ ಯಾವುದೇ ಸಂಬಂಧವಿಲ್ಲ, ರೋಹಿಣಿ ಮೇಲೆ ಹೊಟ್ಟೆಕಿಚ್ಚಿನಿಂದ ಈ ರೀತಿ ಮಾತನಾಡುತ್ತಿದ್ದಾರೆ. ಅವರಿಗೆ ಮಾನಸಿಕ ತೊಂದರೆ ಇರಬಹುದು, ಅವರು ಅನೇಕ ಸಾಮಾಜಿಕ ಜಾಲತಾಣಗಳಲ್ಲಿ ಅಕೌಂಟ್ ಹೊಂದಿದ್ದಾರೆ. ಪಬ್ಲಿಸಿಟಿಗೋಸ್ಕರ ಈ ರೀತಿ ಮಾತನಾಡಿರಬಹುದು. ರೋಹಿಣಿ ಸಿಂಧೂರಿಗೆ ಯಾವುದೇ ಪ್ರಚಾರ ಬೇಡ. ಅವರು ಯಾವುದೇ ಸಾಮಾಜಿಕ ಜಾಲತಾಣ ಸಹ ಬಳಕೆ ಮಾಡುತ್ತಿಲ್ಲ" ಎಂದು ಸುಧೀರ್ ರೆಡ್ಡಿ ಹೇಳಿದ್ದರು.
ರೋಹಿಣಿ ಸಿಂಧೂರಿ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಅವರಿಗೆ ಒಳ್ಳೆಯ ಹೆಸರು ಇದೆ. ಆದರೆ ಅವರ ಹೆಸರಿಗೆ ಮಸಿ ಬಳೆಯುವ ಕೆಲಸಗಳು ನಡೆಯುತ್ತಿವೆ. ರೋಹಿಣಿ ಸಿಂಧೂರಿ ಯಾವ ಯಾವ ಅಧಿಕಾರಿಗೆ ಫೋಟೋ ಕಳುಹಿಸಿದ್ದಾರೆ ಎಂಬುದನ್ನು ರೂಪಾ ಅವರು ಹೇಳಲಿ ಎಂದು ಸುಧೀರ್ ರೆಡ್ಡಿ ಸವಾಲು ಹಾಕಿದ್ದಾರೆ.












Click it and Unblock the Notifications