Rent in Bengaluru: ಬೆಂಗಳೂರಿನ ಮನೆ ಬಾಡಿಗೆಗಳಲ್ಲಿ ಹಿಂದೆಂದೂ ಕಂಡು ಕೇಳರಿಯದಷ್ಟು ಏರಿಕೆ- ಎಲ್ಲೆಲ್ಲಿ ಎಷ್ಟೆಷ್ಟು? ಅಂಕಿಅಂಶ
ಬೆಂಗಳೂರು, ಆಗಸ್ಟ್ 14: ಬೆಂಗಳೂರಿನಲ್ಲಿ ಮನೆ ಬಾಡಿಗೆ ಪಡೆಯುವುದು ಬಹಳ ಕಷ್ಟದ ಕೆಲಸವಾಗಿ ಪರಿಣಮಿಸಿದೆ. ಅದರಲ್ಲೂ ಐಟಿ ಕಂಪನಿಗಳಿರುವ ಪ್ರದೇಶಗಳಲ್ಲಿ ಬಾಡಿಗೆಗಳು ಭಾರೀ ಏರಿಕೆ ಕಂಡಿವೆ. ಮುಂಬೈ ಮಹಾನಗರಕ್ಕಿಂತಲೂ ಮನೆ ಬಾಡಿಗೆಗಳು ಹೆಚ್ಚಾಗಿವೆ. ಬೆಂಗಳೂರಿನ ಮನೆ ಬಾಡಿಗೆ ಕುರಿತು 'ಮನಿ ಕಂಟ್ರೋಲ್' ಪ್ರಕಟಿಸಿರುವ ಈ ವರದಿಯನ್ನು ಓದಿ.
ಒಂದು ತಿಂಗಳ ಕಠಿಣ ಪರಿಶ್ರಮದ ನಂತರ ಸಂದೇಶ್ ಗೌಡ ಎಂಬುವವರು ಪೂರ್ವ ಬೆಂಗಳೂರಿನ ಮಾರತ್ತಹಳ್ಳಿಯಲ್ಲಿ 1 ಬಿಎಚ್‌ಕೆ ಅಪಾರ್ಟ್‌ಮೆಂಟ್ ಅನ್ನು ಕಂಡುಕೊಂಡಿದ್ದಾರೆ. ಈ ಅಪಾರ್ಟ್‌ಮೆಂಟ್‌ನ ಬಾಡಿಗೆ ದರ 22,000 ರೂಪಾಯಿ ಎಂದು ತಿಳಿದುಬಂದಿದೆ.

ಈ ಕುರಿತು 'ಮನಿ ಕಂಟ್ರೋಲ್'ಗೆ ಮಾತನಾಡಿರುವ ಅವರು, 'ನಾನು ಬಾಡಿಕೆ ಕಡಿಮೆ ಮಾಡಲು ಕೇಳಿಕೊಂಡೆ. ಆದರೆ, ಮಾಲೀಕರು ನನ್ನ ಬೇಡಿಕೆಗೆ ಪ್ರತಿಕ್ರಿಯಿಸುವುದನ್ನೇ ನಿಲ್ಲಿಸಿದರು. ಒಂದು ವಾರದೊಳಗೆ, ಇದೇ ಅಪಾರ್ಟ್ಮೆಂಟ್ ಅನ್ನು ಹೆಚ್ಚಿನ ಬಾಡಿಗೆಗೆ ಬೇರೆಯವರಿಗೆ ನೀಡಲಾಯಿತು' ಎಂದು ಅವರು ಹೇಳಿದರು.
ಹೆಚ್ಚುತ್ತಿರುವ ಬಾಡಿಗೆ ಸಂಕಷ್ಟವನ್ನು ಎದುರಿಸುತ್ತಿರುವ ಬೆಂಗಳೂರಿನ ಹಲವಾರು ಬಾಡಿಗೆದಾರರಲ್ಲಿ ಸಂದೇಶ್ ಗೌಡರೂ ಒಬ್ಬರು. ನಗರದ ಕೇಂದ್ರಕ್ಕೆ ಹತ್ತಿರವಾಗಿರುವ ಮತ್ತು ಐಟಿ ಕಾರಿಡಾರ್‌ಗಳಿಗೆ ಸಮೀಪವಿರುವ ಹಲವಾರು ಪ್ರದೇಶಗಳಲ್ಲಿ ಮನೆ ಬಾಡಿಗೆಗಳು ಗಗನಕ್ಕೇರಿವೆ.
ಮುಂಬೈನ ಐಷಾರಾಮಿ ಪ್ರದೇಶಗಳಿಗೆ ಸರಿ ಸಮನಾಗಿ ಇಲ್ಲಿನ ಬಾಡಿಗೆಗಳು ಏರಿಕೆ ಕಂಡಿವೆ. ಈ ಪ್ರದೇಶಗಳಲ್ಲಿ ಬಾಡಿಗೆಗಳು 40ರಿಂದ 50 ಪ್ರತಿಶತದಷ್ಟು ಹೆಚ್ಚಾಗಿದೆ. ಆದರೆ, ಸ್ಥಳೀಯ ದಲ್ಲಾಳಿಗಳ ಪ್ರಕಾರ, ಉತ್ತರ, ದಕ್ಷಿಣ ಹಾಗೂ ಸೆಂಟ್ರಲ್ ಭಾಗಗಳಲ್ಲಿನ ಹಲವಾರು ಪ್ರದೇಶಗಳಲ್ಲಿ ಕೈಗೆಟುಕುವ ದರದಲ್ಲಿ ಬಾಡಿಗೆಗಳು ಸಿಗುತ್ತವೆ.

ವೈಟ್‌ಫೀಲ್ಡ್‌ನ ಪೂರ್ವ ಭಾಗಗಳಿಗಿಂತ ಉತ್ತರದಲ್ಲಿ ಬಾಡಿಗೆಗಳು (ಹೆಬ್ಬಾಳದ ಐಟಿ ಕಾರಿಡಾರ್‌ಗೆ ಹತ್ತಿರ) ನಿಧಾನ ಗತಿಯಲ್ಲಿ ಏರಿಕೆ ಕಂಡಿವೆ.
ಹೆಬ್ಬಾಳ, ಜಕ್ಕೂರು, ಹೆಣ್ಣೂರು ಮತ್ತು ಯಲಹಂಕದ ಹೊರವಲಯದಲ್ಲಿ 2 ಬಿಎಚ್‌ಕೆ ಮನೆಗಳನ್ನು 25,000 ರಿಂದ 30,000 ರೂ ಗಳಿಗೆ ಬಾಡಿಗೆಗೆ ಪಡೆಯಬಹುದು. 3 ಬಿಎಚ್‌ಕೆ ಅಪಾರ್ಟ್ಮೆಂಟ್ ಸುಮಾರು 35,000 ರೂಗಳಷ್ಟಿದೆ. 1 ಬಿಎಚ್‌ಕೆ ಫ್ಲಾಟ್‌ಗಳ ಬಾಡಿಗೆಯು ಸುಮಾರು 10,000 ರೂಪಾಯಿಗಳಿಂದ 15,000 ರೂಪಾಯಿಗಳಿಗೆ ಹೆಚ್ಚಾಗಿದೆ.
ದಕ್ಷಿಣ ಬೆಂಗಳೂರಿನ ಜೆಪಿ ನಗರದ ಕೆಲವು ಭಾಗಗಳಲ್ಲಿ, ದೊಡ್ಡ ಮನೆಗಳನ್ನು ಬಹು ವಸತಿ ಘಟಕಗಳಾಗಿ ಪರಿವರ್ತಿಸಲಾಗಿದೆ. ಇಲ್ಲಿ 2 ಬಿಎಚ್‌ಕೆ ಮನೆಗಳು ತಿಂಗಳಿಗೆ 25,000 ರೂ.ಗೆ ಬಾಡಿಗೆಗೆ ಸಿಗುತ್ತವೆ.

ಸ್ಥಳೀಯ ರಿಯಲ್ ಎಸ್ಟೇಟ್ ಬ್ರೋಕರೇಜ್ ರಿಯಾಲ್ಟಿ ಕಾರ್ಪ್ಸ್‌ನ ಸಂಸ್ಥಾಪಕ ಸುನಿಲ್ ಸಿಂಗ್ ಪ್ರಕಾರ, 'ಕನಕಪುರ ರಸ್ತೆಯಲ್ಲಿರುವ ಪ್ರೆಸ್ಟೀಜ್ ಪ್ರಾಜೆಕ್ಟ್ ಮನೆಗಳನ್ನು 40,000 ರೂ ಗಳಿಗೆ ಬಾಡಿಗೆಗೆ ನೀಡಲಾಗುತ್ತಿದೆ. ಆದರೆ ಬ್ರಿಗೇಡ್ ಮೆಡೋಸ್ 2 ಬಿಎಚ್‌ಕೆ ಮನೆಗಳು 30,000 ರೂ.ಗಿಂತ ಕಡಿಮೆ ಬಾಡಿಗೆಗೆ ಲಭ್ಯವಿದೆ' ಎಂದು ಹೇಳಿದ್ದಾರೆ.
ಮಾನ್ಯತಾ ಟೆಕ್ ಪಾರ್ಕ್ ಮತ್ತು ಉತ್ತರದ ಐಟಿ ಕಾರಿಡಾರ್‌ಗಳಿಗೆ ಸಮೀಪವಿರುವ ಪ್ರದೇಶಗಳಲ್ಲಿ, ಬಾಡಿಗೆಗಳು ದೊಡ್ಡ ಮಟ್ಟದಲ್ಲಿ ಏರಿಕೆ ಕಂಡಿವೆ. 2 ಬಿಎಚ್‌ಕೆ ಮನೆಗಳು ಸಾಮಾನ್ಯವಾಗಿ ತಿಂಗಳಿಗೆ 50,000 ರೂಪಾಯಿಗಳಿಗೆ ಲಭ್ಯವಿದೆ.
ಕೈಗೆಟಕುವ ದರದಲ್ಲಿ ಬಾಡಿಗೆಗೆ ಸಿಗುವ ಏರಿಯಾಗಳು ನಗರದಲ್ಲಿನ ಐಟಿ ಹಬ್‌ಗಳು ಅಥವಾ ವಾಣಿಜ್ಯ ಕ್ಷೇತ್ರಗಳಿಗೆ ನೇರ ಸಂಪರ್ಕವನ್ನು ಹೊಂದಿಲ್ಲ. ಈ ಪ್ರದೇಶಗಳು ಮಾಲ್‌ಗಳಂತಹ ಸೌಕರ್ಯಗಳನ್ನು ಹೊಂದಿಲ್ಲ. ಉತ್ತಮ ಆಸ್ಪತ್ರೆ ಸೌಕರ್ಯಗಳು ಇಲ್ಲಿಲ್ಲ.

ಉದಾಹರಣೆಗೆ, ಜಕ್ಕೂರಿನಲ್ಲಿ ತಂಗಿರುವ ಜನರು ಮಾಲ್‌ಗೆ ತೆರಳಬೇಕೆಂದರೆ, ಸುಮಾರು 8 ಕಿಮೀ ಪ್ರಯಾಣಿಸಬೇಕು. ಇದು ಸುಮಾರು 25ರಿಂದ 30 ನಿಮಿಷಗಳ ಪ್ರಯಾಣವಾಗಿರುತ್ತದೆ. ಈ ಸ್ಥಳಗಳು ತಮ್ಮದೇ ಆದ ವಾಹನವನ್ನು ಹೊಂದಿರುವ ಶ್ರೀಮಂತರಿಗೆ ಈ ಸ್ಥಳ ಸೂಕ್ತವಾಗಿವೆ ಎಂದು ಹೇಳಲಾಗುತ್ತಿದೆ.
ಫ್ರೇಜರ್ ಟೌನ್, ಕುಕ್ ಟೌನ್, ಶಾಂತಿನಗರ ಮತ್ತು ಕಾಕ್ಸ್ ಟೌನ್‌ನಂತಹ ಪ್ರದೇಶಗಳಲ್ಲಿ ಮನೆಗಳು ಸ್ಪಲ್ಪ ಕಡಿಮೆ ಬಾಡಿಗೆಗೆ ಲಭ್ಯವಿದೆ ಎಂದು ದಲ್ಲಾಳಿಗಳು ಹೇಳುತ್ತಾರೆ.
ರಾಜಾಜಿನಗರ, ಮೆಜೆಸ್ಟಿಕ್ ಮತ್ತು ಈಜಿಪುರಗಳಲ್ಲಿ 2 ಬಿಎಚ್‌ಕೆಗೆ ರೂ 30,000 ಕ್ಕಿಂತ ಕಡಿಮೆ ಬಾಡಿಗೆ ಇದೆ. ಆದರೆ, ಈ ಸ್ಥಳಗಳು ಜನದಟ್ಟಣೆಯಿಂದ ಕೂಡಿವೆ.












Click it and Unblock the Notifications