ಸಂಬಳ ಕೊಡದಿದ್ದಕ್ಕೆ ಚಿನ್ನಸ್ವಾಮಿಯಲ್ಲಿ ಆರ್‌ಸಿಬಿ ಪಂದ್ಯದ ವೇಳೆ 240 ಸಿಸಿಟಿವಿ ಕ್ಯಾಮೆರಾಗಳ ಆಫ್ ಮಾಡಿದ ಸಿಬ್ಬಂದಿ
Chinnaswamy Stadium: ಬೆಂಗಳೂರಿನ ಎಂ.ಚಿನ್ನಸ್ವಾಮಿಯಲ್ಲಿ ಏಪ್ರಿಲ್ 24ರಂದು ನಡೆದ ಐಪಿಎಲ್ ಪಂದ್ಯದಲ್ಲಿ ಆರ್‌ಸಿಬಿ ತಂಡವು ಗುಜರಾತ್ ಟೈಟಾನ್ಸ್ ವಿರುದ್ಧ ಭರ್ಜರಿ ಗೆಲುವು ಸಾಧಿಸಿತು. ಆದರೆ, ಪಂದ್ಯದ ವೇಳೆಯೇ ಮೈದಾನದಲ್ಲಿ ದೊಡ್ಡ ಮಟ್ಟದ ಭದ್ರತಾ ಲೋಪ ನಡೆದಿದೆ. ಇಲ್ಲಿನ ಸುಮಾರು 240ಕ್ಕೂ ಅಧಿಕ ಸಿಸಿಟಿವಿ ಕ್ಯಾಮೆರಾಗಳನ್ನು ಆಫ್ ಮಾಡಲಾಗಿದೆ ಎನ್ನುವ ಆರೋಪ ಕೇಳಿಬಂದಿದ್ದು, ಈ ಸಂಬಂಧ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ತವರು ಮೈದಾನವಾದ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ದೊಡ್ಡ ಮಟ್ಟದ ಭದ್ರತಾ ಲೋಪ ಕಂಡುಬಂದಿದೆ. ಕ್ರೀಡಾಂಗಣದ ಭದ್ರತಾ ಉಪಕರಣಗಳನ್ನು ಹಾನಿಗೊಳಿಸಿದ ಆರೋಪದ ಮೇಲೆ ಇಬ್ಬರು ವ್ಯಕ್ತಿಗಳನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.

ಹೈವೋಲ್ಟೇಜ್ ಪಂದ್ಯದ ವೇಳೆ ಸಿಸಿಟಿವಿ ಕ್ಯಾಮೆರಾಗಳ ಸ್ಥಗಿತ
ಏಪ್ರಿಲ್ 24ರಂದು ಆರ್‌ಸಿಬಿ ಮತ್ತು ಗುಜರಾತ್ ಟೈಟಾನ್ಸ್ ನಡುವೆ ಪಂದ್ಯ ನಡೆದ ದಿನದಂದೇ ಈ ಘಟನೆ ನಡೆದಿದೆ. ವರದಿಗಳ ಪ್ರಕಾರ ಕ್ರೀಡಾಂಗಣದ ನೆಟ್‌ವರ್ಕ್ ವಿಡಿಯೋ ರೆಕಾರ್ಡರ್ ಸಿಸ್ಟಮ್ ಮತ್ತು ಫೈಬರ್ ಆಪ್ಟಿಕ್ ಲಿಂಕ್‌ಗಳನ್ನು ಉದ್ದೇಶಪೂರ್ವಕವಾಗಿ ಹಾನಿಗೊಳಿಸಲಾಗಿದೆ. ಇದರಿಂದಾಗಿ ಮೈದಾನದಲ್ಲಿದ್ದ 240ಕ್ಕೂ ಹೆಚ್ಚು ಸಿಸಿಟಿವಿ ಕ್ಯಾಮೆರಾಗಳು ಏಕಾಏಕಿ ಸ್ಥಗಿತಗೊಂಡಿದ್ದು, ಹೈ-ವೋಲ್ಟೇಜ್ ಪಂದ್ಯದ ವೇಳೆ ಭದ್ರತಾ ವ್ಯವಸ್ಥೆಯಲ್ಲಿ ದೊಡ್ಡ ಲೋಪ ನಡೆದದಿದೆ.
ಬಂಧಿತರು ಯಾರು?
ಬಂಧಿತರನ್ನು ಚಿತ್ರದುರ್ಗ ಮೂಲದ ಮಂಜುನಾಥ್ (37) ಮತ್ತು ಉತ್ತರ ಪ್ರದೇಶದ ಅಬ್ದುಲ್ ಕಲಾಂ (19) ಎಂದು ಗುರುತಿಸಲಾಗಿದೆ. ಇವರಿಬ್ಬರು ಕ್ರೀಡಾಂಗಣಕ್ಕೆ ಡಿಜಿಟಲ್ ಮತ್ತು ಕಣ್ಗಾವಲು ಸೇವೆ ಒದಗಿಸುವ ಗುತ್ತಿಗೆ ಪಡೆದಿದ್ದ ಕಂಪನಿಯ ಉಪ-ವೆಂಡರ್ ಬಳಿ ಕೆಲಸ ಮಾಡುತ್ತಿದ್ದರು. ನಿರ್ಬಂಧಿತ ಸಿಸಿಟಿವಿ ನಿಯಂತ್ರಣ ಕೊಠಡಿಯನ್ನು ಪ್ರವೇಶಿಸಿ ಅವರು ಉಪಕರಣಗಳನ್ನು ಧ್ವಂಸ ಮಾಡಿದ್ದಾರೆ ಎಂಬ ಆರೋಪದ ಮೇಲೆ ದೂರು ದಾಖಲಿಸಲಾಗಿದೆ.
ಆರೋಪಿಗಳು ಹೇಳಿದ್ದೇನು?
ಪ್ರಾಥಮಿಕ ತನಿಖೆಯ ಪ್ರಕಾರ ಬಾಕಿ ಇದ್ದ ಸುಮಾರು 10 ಲಕ್ಷ ರೂಪಾಯಿ ಹಣ ಪಾವತಿಯಾಗದ ಕಾರಣಕ್ಕೆ ಪ್ರತಿಭಟನೆಯ ರೂಪದಲ್ಲಿ ಈ ಕೃತ್ಯ ಎಸಗಲಾಗಿದೆ ಎಂದು ತಿಳಿದುಬಂದಿದೆ. ಹಲವು ಬಾರಿ ನೆನಪಿಸಿದರೂ ಹಣ ಸಿಗದಿದ್ದಕ್ಕೆ ಬೇಸತ್ತು ಈ ರೀತಿ ಮಾಡಿರುವುದಾಗಿ ಆರೋಪಿಗಳು ಪೊಲೀಸರಿಗೆ ತಿಳಿಸಿದ್ದಾರೆ ಎಂದು ವರದಿಯಾಗಿದೆ. ಸದ್ಯ ಈ ಇಬ್ಬರ ಮೇಲೆ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ. ವಿಶೇಷ ಅಂದ್ರೆ ಈ ಸೀಸನ್‌ನಲ್ಲಿ ಆರ್‌ಸಿಬಿಯ ಚಿನ್ನಸ್ವಾಮಿ ಮೈದಾನದ ಪಂದ್ಯಗಳು ಈಗಾಗಲೇ ಮುಗಿದಿವೆ. ಉಳಿದ ಎರಡು ತವರಿನ ಪಂದ್ಯಗಳನ್ನು ಪೂರ್ವನಿರ್ಧರಿತ ವ್ಯವಸ್ಥೆಯಂತೆ ರಾಯ್‌ಪುರಕ್ಕೆ ಸ್ಥಳಾಂತರ ಮಾಡಲಾಗಿದೆ.












Click it and Unblock the Notifications