Rameshwaram Cafe Blast: ಬೆಂಗಳೂರು ಬಾಂಬರ್ ತಲೆಗೆ 10 ಲಕ್ಷ ಘೋಷಣೆ, ಫೋಟೋ ಬಿಡುಗಡೆ
ಬೆಂಗಳೂರು, ಮಾರ್ಚ್ 06: ಮಾರ್ಚ್ 1 ರಂದು ರಾಜಧಾನಿಯನ್ನು ಬೆಚ್ಚಿಬೀಳಿಸಿದ್ದ ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣದ ತನಿಖೆ ನಡೆಯುತ್ತಿದೆ. ರಾಷ್ಟ್ರೀಯ ತನಿಖಾ ಸಂಸ್ಥೆ ತನಿಖೆಯನ್ನು ವಹಿಸಿಕೊಂಡಿದ್ದು, ಸ್ಪೋಟಕ್ಕೆ ಕಾರಣವಾದ ಪ್ರಮುಖ ಆರೋಪಿಯ ಪತ್ತೆಗೆ ಸಾರ್ವಜನಿಕರಿಂದ ಸಹಾಯ ಕೇಳಿದೆ.
ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಸ್ಫೋಟಕ್ಕೆ ಕಾರಣವಾದ ಕಡಿಮೆ ತೀವ್ರತೆಯ ಐಇಡಿ ಇಟ್ಟ ವ್ಯಕ್ತಿಯ ಬಗ್ಗೆ ಯಾವುದೇ ಮಾಹಿತಿ ಇದ್ದರು ನೀಡಿದವರಿಗೆ ಬರೋಬ್ಬರಿ 10 ಲಕ್ಷ ನಗದು ಬಹುಮಾನ ನೀಡುವುದಾಗಿ ರಾಷ್ಟ್ರೀಯ ತನಿಖಾ ಸಂಸ್ಥೆ ಬುಧವಾರ ಘೋಷಿಸಿದೆ. ಜೊತೆಗೆ ಆರೋಪಿಯ ಪೋಟೋ ಬಿಡುಗಡೆ ಮಾಡಿದೆ.

ಮಾರ್ಚ್ 1 ರಂದು ರಾಮೆಶ್ವರಂ ಕೆಫೆಯಲ್ಲಿ ನಡೆದ ಸ್ಪೋಟ ಪ್ರಕರಣದಲ್ಲಿ ಕನಿಷ್ಠ 10 ಜನರು ಗಾಯಗೊಂಡಿದ್ದಾರೆ. ಎನ್‌ಐಎ ಹಂಚಿಕೊಂಡಿರುವ 'ವಾಂಟೆಡ್' ಪೋಸ್ಟರ್‌ನಲ್ಲಿ ಆರೋಪಿಯ ರೇಖಾಚಿತ್ರವನ್ನು ಬಿಡುಗಡೆ ಮಾಡಿದ್ದು, ಆರೋಪಿ ಬಗ್ಗೆ ಮಾಹಿತಿ ನೀಡಿದವರರ ಗುರುತನ್ನು ರಹಸ್ಯವಾಗಿಡಲಾಗುವುದು ಎಂದು ಹೇಳಿದೆ.
NIA announces cash reward of 10 lakh rupees for information about bomber in Rameshwaram Cafe blast case of Bengaluru. Informants identity will be kept confidential. pic.twitter.com/F4kYophJFt
— NIA India (@NIA_India) March 6, 2024
ರಾಮೇಶ್ವರಂ ಸ್ಫೋಟ ಪ್ರಕರಣದಲ್ಲಿ ಇದುವರೆಗೆ ಯಾರನ್ನೂ ಬಂಧಿಸಲಾಗಿಲ್ಲ. ಆದರೆ ಕೇಂದ್ರ ಅಪರಾಧ ವಿಭಾಗ ಮತ್ತು ಎನ್‌ಐಎ ಎರಡರಿಂದಲೂ ತನಿಖೆ ನಡೆಯುತ್ತಿದೆ. ಸರ್ಕಾರವು ತನಿಖೆಯನ್ನು ಕೇಂದ್ರ ಏಜೆನ್ಸಿಗೆ ಹಸ್ತಾಂತರಿಸದ ಕಾರಣ ತನಿಖೆಯನ್ನು ಕೈಗೆತ್ತಿಕೊಳ್ಳುವಂತೆ ಕೇಂದ್ರ ಗೃಹ ಸಚಿವಾಲಯವು ನಿರ್ದೇಶಿಸಿದ ನಂತರ ಎನ್‌ಐಎ ಮಂಗಳವಾರ ತನ್ನ ತನಿಖೆಯನ್ನು ಪ್ರಾರಂಭಿಸಿದೆ.
ಘಟನೆಗೆ ಸಂಬಂಧಿಸಿದಂತೆ ಬೆಂಗಳೂರು ನಗರದ ಪೊಲೀಸರು ಪ್ರಮುಖ ಸುಳಿವುಗಳನ್ನು ಕಂಡುಕೊಂಡಿದ್ದಾರೆ ಮತ್ತು ಪ್ರಕರಣವನ್ನು ಭೇದಿಸಲು ಹತ್ತಿರವಾಗಿದ್ದಾರೆ ಎಂದು ಕರ್ನಾಟಕ ಗೃಹ ಸಚಿವ ಜಿ ಪರಮೇಶ್ವರ್ ಬುಧವಾರ ಹೇಳಿದ್ದಾರೆ.
ರಾಮೇಶ್ವರಂ ಕೆಫೆಯಲ್ಲಿ ಆಗಿದ್ದೇನು?
ಮಾರ್ಚ್ 1 ರಂದು, ಜನಪ್ರಿಯ ರಾಮೇಶ್ವರಂ ಕೆಫೆಯಲ್ಲಿ ಊಟದ ಸಮಯದಲ್ಲಿ ವಿಪರೀತ ಜನರಿದ್ದ ಸಂದರ್ಭದಲ್ಲಿ ಸ್ಫೋಟ ಸಂಭವಿಸಿ 10 ಮಂದಿ ಗಾಯಗೊಂಡಿದ್ದರು. ಆದರೆ ಗಾಯಗಳು ಗಂಭೀರವಾಗಿರಲಿಲ್ಲ. ಬಳಿಕ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಘಟನೆ ಬಳಿಕ ಕೆಫೆಯನ್ನು ಮುಚ್ಚಲಾಗಿತ್ತು. ಮಾರ್ಚ್ 8ರ ಮಹಾ ಶಿವರಾತ್ರಿಯಂದು ಮತ್ತೆ ಕೆಫೆ ತೆರೆಯಲಾಗುತ್ತದೆ.
ಸಿಸಿಟಿವಿ ದೃಶ್ಯಾವಳಿಗಳನ್ನು ನೋಡಿದ ಬಳಿಕ ರಾಮೇಶ್ವರಂ ಕೆಫೆಗೆ ಘಟನೆಗೂ ಒಂದು ಗಂಟೆ ಮೊದಲು ಬಂದು ಕೆಫೆಯೊಳಗೆ ಕೆಲವೇ ನಿಮಿಷಗಳ ಕಾಲ ಇದ್ದ ವ್ಯಕ್ತಿಯೊಬ್ಬರನ್ನು ಪೊಲೀಸರು ಗಮನಿಸಿದ್ದರು. ಈ ವೇಳೆ ಒಬ್ಬ ವ್ಯಕ್ತಿ ಒಂದು ಪ್ಲೇಟ್ ರವೆ ಇಡ್ಲಿಯನ್ನು ಆರ್ಡರ್ ಮಾಡಿ ಟೈಮರ್ನೊಂದಿಗೆ ಐಇಡಿ ಹೊಂದಿದ್ದ ಬ್ಯಾಗ್ ಅನ್ನು ಬಿಟ್ಟು ಹೋಗಿದ್ದಾನೆ ಎಂದು ಪತ್ತೆ ಮಾಡಿದ್ದರು.
ಈ ದೃಶ್ಯಾವಳಿಯನ್ನು ಆಧರಿಸಿ, ಶಂಕಿತ ಆರೋಪಿಯ ಫೋಟೋ ವೈರಲ್ ಆಗಿದೆ. ವೈರಲ್ ಫೋಟೋದಲ್ಲಿರುವ ವ್ಯಕ್ತಿಯನ್ನು ಶಂಕಿತ ಎಂದು ಪರಿಗಣಿಸಲಾಗುತ್ತಿದೆ ಎಂದು ಎನ್‌ಐಎ ಬುಧವಾರ 'ವಾಂಟೆಡ್' ನೋಟಿಸ್‌ನಲ್ಲಿ ದೃಢಪಡಿಸಿದೆ. ಶಂಕಿತ ವ್ಯಕ್ತಿಯ ವಯಸ್ಸು 30 ರಿಂದ 40 ವರ್ಷ ಇರಬಹುದು.












Click it and Unblock the Notifications