ಕ್ಯಾಬಿನೆಟ್ ಸಭೆಗೆ ಸತತ ಗೈರು: ಮೌನ ಮುರಿದ ರಮೇಶ್ ಜಾರಕಿಹೊಳಿ
Recommended Video

ಬೆಂಗಳೂರು, ಅಕ್ಟೋಬರ್ 30: ಸತತ ಮೂರು ಸಚಿವ ಸಂಪುಟ ಸಭೆಗೆ ಗೈರಾಗಿದ್ದ ಸಚಿವ ರಮೇಶ್ ಜಾರಕಿಹೊಳಿ ಈ ಬಗ್ಗೆ ಮೌನ ಮುರಿದಿದ್ದು ಮುಂದಿನ ಸಚಿವ ಸಂಪುಟ ಸಭೆಗೆ ಹಾಜರಾಗುವುದಾಗಿ ಪ್ರಕಟಿಸಿದ್ದಾರೆ.
ಬೆಂಗಳೂರಿನಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ನಾನು ಬಿಜೆಪಿಗೆ ಹೋಗುತ್ತೇನೆ ಎಂಬುದು ಸುಳ್ಳು, ಕಾಂಗ್ರೆಸ್ ಪಕ್ಷದಲ್ಲಿ ಕೆಲವು ಅಸಮಾಧಾನ ಇದ್ದದ್ದು ನಿಜ ಈಗ ಅದೆಲ್ಲವೂ ದೂರವಾಗಿದೆ, ಹೀಗಾಗಿ ಬಿಜೆಪಿ ಹೋಗುತ್ತೇನೆ ಎನ್ನುವುದು ಕೇವಲ ವದಂತಿ ಎಂದು ಸ್ಪಷ್ಟಪಡಿಸಿದರು.
ಇನ್ನುಮುಂದೆ ಕಾಂಗ್ರೆಸ್ ಪಕ್ಷ ಹಾಗೂ ಸರ್ಕಾರದಲ್ಲಿ ಸಕ್ರಿಯವಾಗಿರುತ್ತೇನೆ, ನಾನು ಈವರೆಗೂ ಸಚಿವ ಸಂಪುಟ ಸಭೆಗೆ ಹಾಜರಾಗದಿರುವುದು ನಿಜ ಅದಕ್ಕೆ ಬೇರೆ ಬೇರೆ ಕಾರಣಗಳಿವೆ. ಹಾಗೆಂದಾಕ್ಷಣ ನಾನು ಬಿಜೆಪಿಗೆ ಹೋಗುತ್ತೇನೆ ಎಂದು ಅರ್ಥವಲ್ಲ. ಬರುವ ವಾರ ನಡೆಯಲಿರುವ ಸಚಿವ ಸಂಪುಟ ಸಭೆಗೆ ಹಾಜರಾಗುವ ಮೂಲಕ ಎಲ್ಲ ಗೊಂದಲಗಳಿಗೆ ತೆರೆ ಎಳೆಯುತ್ತೇನೆ ಎಂದರು.

ನಾನು ಈಗಾಗಲೇ ಬಳ್ಳಾರಿ ಲೋಕಸಭಾ ಚುನಾವಣೆಯಲ್ಲಿ ಪಾಲ್ಗೊಂಡು ವಿಎಸ್ ಉಗ್ರಪ್ಪ ಅವರ ಪರ ಪ್ರಚಾರ ಮಾಡಿದ್ದೇನೆ, ಇಂದು ಸಂಜೆ ಜಮಖಂಡಿಗೆ ತೆರಳುತ್ತಿದ್ದು, ಬಹಿರಂಗ ಪ್ರಚಾರ ಅಂತ್ಯಗೊಳ್ಳುವ ತನಕ ಜಮಖಂಡಿ ಕಾಂಗ್ರೆಸ್ ಅಭ್ಯರ್ಥಿ ಆನಂದ್ ನ್ಯಾಮಗೌಡ ಅವರ ಪರ ಪ್ರಚಾರ ನಡೆಸುತ್ತೇನೆ ಈ ಬಗ್ಗೆ ಯಾವುದೇ ಸಂಶಯ ಬೇಡ ಎಂದು ಹೇಳಿದರು.
ಸಚಿವ ಡಿ.ಕೆ.ಶಿವಕುಮಾರ್ ಮೇಲಿನ ಸಿಟ್ಟು ಹಾಗೂ ಭಿನ್ನಾಭಿಪ್ರಾಯ ಕೇವಲ ವೈಯಕ್ತಿಕವಾದುದು. ಆ ಬಗ್ಗೆ ಪ್ರತಿಕ್ರಿಯೆ ನೀಡುವದಿಲ್ಲ ಎಂದು ಸಚಿವ ರಮೇಶ್ ಜಾರಕಿಹೊಳಿ ಇದೇ ವೇಳೆ ಸ್ಪಷ್ಟಪಡಿಸಿದರು.












Click it and Unblock the Notifications