ಎಸ್ಐಟಿಗೆ "ಆಟ" ಆಡಿಸುತ್ತಿದ್ದಾರಾ ಸಿಡಿ ಕೇಸ್ ಶಂಕಿತ ಆರೋಪಿಗಳು !
ಬೆಂಗಳೂರು, ಮಾರ್ಚ್ 22: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಸ್ಫೋಟ ಪ್ರಕರಣದಲ್ಲಿ ಶಂಕಿತ ಆರೋಪಿಗಳು ಎಸ್ಐಟಿ ಅಧಿಕಾರಿಗಳನ್ನೇ ಆಟ ಆಡಿಸುತ್ತಿದ್ದಾರಾ ? ಶಂಕಿತ ಆರೋಪಿಗಳಿಗಾಗಿ ಎಸ್ಐಟಿ ಪೊಲೀಸರು ನಾನಾ ರಾಜ್ಯಗಳಲ್ಲಿ ಹುಡುಕುತ್ತಿದ್ದಾರೆ, ಹಗಲು ರಾತ್ರಿ ಎನ್ನದೇ ಶೋಧ ನಡೆಸುತ್ತಿದ್ದಾರೆ. ಶಂಕಿತ ಸಿಡಿ ಮೇಕರ್ಸ್ ತಂತ್ರಜ್ಞಾನ ಬಳಿಸಿಕೊಂಡು ಟವರ್ ಲೊಕೇಷನ್ ಮಿಸ್ ಮ್ಯಾಚ್ ಮಾಡಿಸುತ್ತಿದ್ದಾರೆಯೇ ? ಶಂಕಿತರ ನಿಗೂಢ ಹೆಜ್ಜೆ ಗುರುತು ಪತ್ತೆ ಮಾಡಲಾಗದ ಎಸ್ಐಟಿ ಇದೀಗ ಸೈಬರ್ ತಜ್ಞರ ನೆರವಿನ ಮೊರೆ ಹೋಗಿದೆ.
ಚೆನ್ನೈನಲ್ಲಿದ್ದಾರೆ, ಚೆನ್ನೈನಿಂದ ಹೈದರಾಬಾದ್‌ಗೆ ಪ್ರಯಾಣಿಸಿದ್ದಾರೆ. ಅಯ್ಯೋ ಅಲ್ಲೂ ಇಲ್ಲ, ದೆಹಲಿಯಲ್ಲಿ ಪೋನ್ ಆನ್ ಆಗಿದೆ. ಇದನ್ನು ಎಸ್ಐಟಿ ಅಧಿಕಾರಿಗಳು ಹರಿ ಬಿಟ್ಟಿದ್ದಾರೋ ಅಥವಾ ಸುಳ್ಳೋ ಗೊತ್ತಿಲ್ಲ. ಪ್ರಕರಣದ ಬೆಳವಣಿಗೆ ನೋಡಿದರೆ ಎಸ್ಐಟಿ ಅಧಿಕಾರಿಗಳಿಗಿಂತಲೂ ಶಂಕಿತರೆನ್ನಲಾದ ಆರೋಪಿಗಳು ಒಂದು ಹೆಜ್ಜೆ ಮುಂದೆ ಇಟ್ಟಿರುವುದು ನಿಶ್ಚಳವಾಗಿ ಕಾಣುತ್ತದೆ.
ಸಿಡಿ ಸ್ಫೋಟಗೊಂಡು ಇಪ್ಪತ್ತು ದಿನ ಕಳೆದಿವೆ. ಒಂದಡೆ ಸರಣಿ ವಿಡಿಯೋ ಬಿಡುಗಡೆ ಮಾಡಿದರೂ ಶಂಕಿತ ಆರೋಪಿಗಳ ಸುಳಿವು ಪತ್ತೆ ಮಾಡಲು ಎಸ್ಐಟಿ ಅಧಿಕಾರಿಗಳಿಂದ ಸಾಧ್ಯವಾಗಿಲ್ಲ. ಪ್ರಕರಣದ ತನಿಖೆ ಆರಂಭದಲ್ಲಿ ಎಸ್ಐಟಿ ಅಧಿಕಾರಿಗಳು ಸರಣಿ ದಾಳಿ ನಡೆಸಿ ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದ್ದರು. ಇಡೀ ಪ್ರಕರಣದ ಹೂರಣವನ್ನು ಸಮಾಜದ ಮುಂದಿಟ್ಟಿದ್ದರು. ಉದ್ಯಮಿ ಮನೆ ಮೇಲು ಕೂಡ ದಾಳಿ ನಡೆಸಿದ್ದರು. ಶಂಕಿತರೆನ್ನಲಾದ ಆರೋಪಿಗಳಿಬ್ಬರು ಹಾಗೂ ಸಂತ್ರಸ್ತೆ ಎನ್ನಲಾದ ಯುವತಿಯನ್ನು ಪತ್ತೆ ಮಾಡದಿರುವುದು ಸಾರ್ವಜನಿಕ ವಲಯದಲ್ಲಿ ಭಾರೀ ಚರ್ಚೆಗೆ ನಾಂದಿ ಹಾಡಿದೆ.

ಎಂಟ್ರಿ ಯಾವಾಗ : ಶಂಕಿತ ಪ್ರಮುಖ ಆರೋಪಿ ಈ ಹಿಂದೆ ಬಿಡುಗಡೆ ಮಾಡಿದ್ದ ವಿಡಿಯೋ ಪ್ರಕಾರ, ಕೆಲವು ದಿನಗಳಲ್ಲೇ ತನಿಖಾಧಿಕಾರಿಗಳ ಮುಂದೆ ಹಾಜರಾಗುವುದಾಗಿ ಹೇಳಿದ್ದರು. ಇದೀಗ ಸದನದಲ್ಲಿ ಸಿಡಿ ವಿಚಾರ ಚರ್ಚೆಯಲ್ಲಿದೆ. ಸದನದಲ್ಲಿ ಪ್ರಸ್ತಾಪವಾದ ಬಳಿಕ ಶಂಕಿತರೆನ್ನಲಾದ ಆರೋಪಿಗಳು ತನಿಖಾಧಿಕಾರಿಗಳ ಮುಂದೆ ಹಾಜರಾಗಲಿದ್ದಾರೆಯೇ ? ಅಷ್ಟರಲ್ಲಿ ಈ ಪ್ರಕರಣ ಹೊಸ ತಿರುವು ಪಡೆಯಲಿದೆಯಾ ಎಂಬ ಸಂಶಯ ಮೂಡಿದೆ.
Recommended Video
ಮತ್ತೆ ನೋಟಿಸ್: ಅಶ್ಲೀಲ ಸಿಡಿ ಸ್ಫೋಟ ಪ್ರಕರಣ ಸಂಬಂಧ ವಿಚಾರಣೆಗೆ ಹಾಜರಾಗುವಂತೆ ಸಂತ್ರಸ್ತೆ ಯುವತಿ ಇಮೇಲ್ ಗೆ ನೋಟಿಸ್ ಕಳುಹಿಸಲಾಗಿದೆ. ಇದರ ಜತೆಗೆ ಇಬ್ಬರು ಶಂಕಿತ ಅರೋಪಿಗಳಿಗೂ ನೋಟಿಸ್ ರವಾನಿಸಲಾಗಿದೆ. ಸಂತ್ರಸ್ತೆ ಎನ್ನಲಾದ ಯುವತಿಯ ಪೋಷಕರನ್ನು ಎಸ್ಐಟಿ ಅಧಿಕಾರಿಗಳು ಭೇಟಿ ಮಾಡಿ ಯುವತಿಯ ಮೂಲ ಪತ್ತೆ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.












Click it and Unblock the Notifications