ಜಾರಕಿಹೊಳಿ ಸಿಡಿ ಸ್ಪೋಟ ಪ್ರಕರಣ: ಖಾಸಗಿ ಜಾಹೀರಾತು ಕಚೇರಿ ಮೇಲೆ SIT ದಾಳಿ
ಬೆಂಗಳೂರು, ಮಾರ್ಚ್ 16: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಖಾಸಗಿ ಜಾಹೀರಾತು ಕಂಪನಿ ಮೇಲೆ ವಿಶೇಷ ತನಿಖಾ ತಂಡದ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಖಾಸಗಿ ಜಾಹೀರಾತು ಕಂಪನಿಗೂ ಸಿಡಿಗೂ ಏನು ಸಂಬಂಧ ಅಂತೀರಾ ? ಜಾರಕಿಹೊಳಿ ಸಿಡಿ ಸ್ಫೋಟ ಮೊದಲು ಎಡಿಟ್ ಮಾಡಲಾಗಿದೆ.
ಶಿವಾನಂದ ವೃತ್ತದ ರೈಲ್ವೇ ಪ್ಯಾರಲಲ್ ರಸ್ತೆ ಸಮೀಪದ ಟೈಮ್ಸ್ ಕ್ರಿಯೇಷನ್ ಕಚೇರಿಯಲ್ಲಿ ಸಿಡಿ ಬಿಡುಗಡೆ ಮುನ್ನ ಎಡಿಟ್ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ಈ ಮಾಹಿತಿ ಹಿನ್ನೆಲೆಯಲ್ಲಿ ವಿಶೇಷ ತನಿಖಾ ತಂಡದ ಅಧಿಕಾರಿಗಳು ಸೋಮವಾರ ಕಚೇರಿ ಮೇಲೆ ದಾಳಿ ನಡೆಸಿದ್ದಾರೆ.
ದಾಳಿ ನಡೆಸಿದ ವೇಳೆ ಕಂಪ್ಯೂಟರ್‌ನ ಹಲವು ಹಾರ್ಡ್ ಡಿಸ್ಕ್ ಹಾಗೂ ಲ್ಯಾಪ್‌ಟಾಪ್‌ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅಲ್ಲದೇ ಟೈಮ್ಸ್ ಕ್ರಿಯೇಷನ್ ಮಾಲೀಕ ಸೇರಿ ಸಿಬ್ಬಂದಿ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲಾಗಿದೆ. ಅಡುಗೋಡಿಯಲ್ಲಿರುವ ಟೆಕ್ನಿಕಲ್ ಸೆಂಟರ್‌ನಲ್ಲಿ ವಿಚಾರಣೆ ನಡೆಯಲಿದೆ.
ಸಿಡಿ ಗರ್ಲ್ ಗಾಗಿ ಶೋಧ: ವಿಚಾರಣೆಗೆ ಹಾಜರಾಗುವಂತೆ ಯುವತಿಗೆ ನೋಟಿಸ್ ನೀಡಿದರೂ ಆಕೆ ಇನ್ನೂ ಹಾಜರಾಗಿಲ್ಲ. ತನಗೆ ರಮೇಶ್ ಜಾರಕಿಹೊಳಿಯಿಂದ ಅನ್ಯಾಯವಾಗಿದೆ. ನನ್ನನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ. ಕೆಲಸ ಕೊಡಿಸುವುದಾಗಿ ಮೋಸ ಮಾಡಿದ್ದಾರೆ ಎಂದು ಸಿಡಿ ಸ್ಫೋಟ ಬಳಿಕ ವಿಡಿಯೋ ಬಿಟ್ಟಿದ್ದ ಸಿಡಿ ಗರ್ಲ್ ಸೋಮವಾರ ಪೊಲೀಸರ ಮುಂದೆ ಹಾಜರಾಗಬೇಕಿತ್ತು. ಇಮೇಲ್‌ಗಾಗಲೀ, ಮನೆಗೆ ತಲುಪಿಸಿರುವ ನೋಟಿಸ್‌ಗಾಗಲಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಹೀಗಾಗಿ ಆಕೆಗಾಗಿ ವಿಶೇಷ ತನಿಖಾ ತಂಡ ಶೋಧ ಕಾರ್ಯ ಮುಂದುವರೆಸಿದೆ.

ರಮೇಶ್ ಜಾರಕಿಹೊಳಿ ಸಿಡಿ ಸ್ಫೋಟ ಪ್ರಕರಣದಲ್ಲಿ ತಲೆ ಮರೆಸಿಕೊಂಡಿರುವ ಶಂಕಿತ ಆರೋಪಿಗಳಿಗಾಗಿ ವಿಶೇಷ ತನಿಖಾ ತಂಡ ಜಾಲಾಡುತ್ತಿದೆ. ಹೊರ ರಾಜ್ಯಗಳಲ್ಲಿ ಇರುವ ಬಗ್ಗೆ ಮಾಹಿತಿ ಸಂಗ್ರಹಿಸಿ ನಾನಾ ಆಯಾಮದಲ್ಲಿ ತನಿಖೆ ಮುಂದುವರೆಸಿದೆ. ಮೊಬೈಲ್ ಬಳಸದ ಕಾರಣ ಅವರು ಸಂಪರ್ಕಕ್ಕೆ ಸಿಗುತ್ತಿಲ್ಲ ಎನ್ನಲಾಗಿದೆ. ಪ್ರಕರಣ ರಾಜಕೀಯ ಸ್ವರೂಪ ಪಡೆದುಕೊಂಡಿರುವ ಬೆನ್ನೆಲ್ಲೇ ಶಂಕಿತರಿಗಾಗಿ ವಿಶೇಷ ತನಿಖಾ ತಂಡ ಕಾರ್ಯಾಚರಣೆ ನಡೆಸುತ್ತಿದೆ. ಇನ್ನೊಂದೆಡೆ ಕೆಲವರನ್ನು ವಿಚಾರಣೆಗೆ ಒಳಪಡಿಸಲು ಎಸ್ಐಟಿ ಮುಂದಾಗಿದೆ.












Click it and Unblock the Notifications