'ಗಾರ್ಮೆಂಟ್ ಫ್ಯಾಕ್ಟರಿ ಮಹಿಳೆಯರಿಗೆ ರಿಯಾಯಿತಿ ಬಸ್ ಪಾಸ್'
ಬೆಂಗಳೂರು, ಜು. 19: ಸಿದ್ಧ ಉಡುಪು ಕಾರ್ಖಾನೆಯಲ್ಲಿ ಕೆಲಸ ನಿರ್ವಹಿಸುವ ಮಹಿಳಾ ಕಾರ್ಮಿಕರಿಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಒಳ್ಳೆ ಸುದ್ದಿ ನೀಡಿದ್ದಾರೆ. ಮಹಿಳಾ ಕಾರ್ಮಿಕರಿಗೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಹಾಗೂ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್ ಗಳ ಮಾಸಿಕ ಬಸ್ ಪಾಸ್ ದರದಲ್ಲಿ ರಿಯಾಯಿತಿ ಸಿಗಲಿದೆ.
ಮಹಿಳಾ ಕಾರ್ಮಿಕರಿಗೆ ರಿಯಾಯಿತಿ ದರದಲ್ಲಿ ಮಾಸಿಕ ಪಾಸ್ ವಿತರಣೆ ಮಾಡಲು ಸರ್ಕಾರ ಸಿದ್ದವಿದೆ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು ಸದನದಲ್ಲಿ ಭರವಸೆ ನೀಡಿದ್ದಾರೆ.

ಸರ್ವೋದಯ ಕರ್ನಾಟಕ ಪಕ್ಷದ ಸದಸ್ಯ ಕೆ.ಎಸ್.ಪುಟ್ಟಣ್ಣಯ್ಯ ಮತ್ತು ಕೆಜೆಪಿ ಸದಸ್ಯ ಬಿ.ಆರ್.ಪಾಟೀಲ್ ಅವರು ವಿಧಾನಸಭೆಯಲ್ಲಿ ನಿಯಮ 69ರ ಅಡಿ ಈ ವಿಷಯ ಪ್ರಸ್ತಾಪಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ರಾಮಲಿಂಗಾರೆಡ್ಡಿ ಅವರು, ಸಿದ್ಧ ಉಡುಪು ಕಾರ್ಖಾನೆಗಳ ಮಹಿಳೆಯರಿಗೆ ಮಾಸಿಕ 1 ಸಾವಿರ ರೂ. ಡೆಡಿಕೇಟೆಡ್ ಪ್ರೀಮಿಯಂ ಪಾಸ್‌ಗಳನ್ನು ವಿತರಿಸಲಾಗುವುದು ಎಂದರು.
ಸಾರಿಗೆ ಇಲಾಖೆಯು ಇದೇ ಮಾದರಿಯಲ್ಲಿ ಬೇರೆ ಕಂಪೆನಿಗಳಿಗೆ 1,900 ರೂ.ಗೆ ಪಾಸ್ ವಿತರಿಸುತ್ತಿದೆ. ಆದರೆ, ಸಿದ್ಧ ಉಡುಪು ಕಾರ್ಖಾನೆಗಳ ಮಹಿಳಾ ಕಾರ್ಮಿಕರಿಗೆ 1 ಸಾವಿರ ರೂ.ಗಳ ಈ ಪಾಸ್ ನೀಡಲು ನಿರ್ಧರಿಸಲಾಗಿದೆ. ಹಲವು ನಗರಗಳಲ್ಲಿ ಕೆಲಸ ಮಾಡುವ ಮಹಿಳೆಯರ ಅನುಕೂಲಕ್ಕಾಗಿ ಕೆಎಸ್ಸಾರ್ಟಿಸಿಯಿಂದ ಸಾರಿಗೆ ವ್ಯವಸ್ಥೆ ಮಾಡಲಾಗಿದೆ ಎಂದರು.












Click it and Unblock the Notifications