ಆರ್.ಆರ್.ನಗರ ಚುನಾವಣೆ : ವಶಪಡಿಸಿಕೊಂಡಿದ್ದ ವೋಟರ್ ಐಡಿ ಹಂಚಿಕೆ
ಬೆಂಗಳೂರು, ಮೇ 24 : ರಾಜರಾಜೇಶ್ವರಿ ನಗರದ ಕ್ಷೇತ್ರದ ಚುನಾವಣೆಗೆ ಚುನಾವಣಾ ಆಯೋಗವು ಸಿದ್ಧವಾಗುತ್ತಿದೆ. ಜಾಲಹಳ್ಳಿಯ ಅಪಾರ್ಟ್‌ಮೆಂಟ್‌ನಲ್ಲಿ ವಶಕ್ಕೆ ಪಡೆಯಲಾಗಿದ್ದ ಮತದಾರರ ಗುರುತಿನ ಚೀಟಿಗಳನ್ನು ಜನರಿಗೆ ವಾಪಸ್ ನೀಡಲಾಗುತ್ತಿದೆ.
ಮೇ 8ರಂದು ಜಾಲಹಳ್ಳಿಯ ಎಸ್‌ಎಲ್‌ವಿ ಅಪಾರ್ಟ್‌ಮೆಂಟ್‌ನ ಫ್ಲಾಟ್ ನಂ 115ರಲ್ಲಿ 9,746 ವೋಟರ್ ಐಡಿಗಳನ್ನು ಚುನಾವಣಾ ಆಯೋಗ ವಶಕ್ಕೆ ಪಡೆದಿತ್ತು. ಬಳಿಕ ಮೇ 12ರಂದು ನಡೆಯಬೇಕಾಗಿದ್ದ ಚುನಾವಣೆಯನ್ನು ಮುಂದೂಡಲಾಗಿತ್ತು.
ಮೇ 28ರಂದು ರಾಜರಾಜೇಶ್ವರಿ ನಗರ ಕ್ಷೇತ್ರದ ಚುನಾವಣೆ ನಡೆಯಲಿದೆ. ಆದ್ದರಿಂದ, ಚುನಾವಣಾ ಆಯೋಗ ಗುರುತಿನ ಚೀಟಿಗಳನ್ನು ಮತದಾರರಿಗೆ ವಾಪಸ್ ವಿತರಣೆ ಮಾಡುತ್ತಿದೆ. ಮತ ಚೀಟಿಗಳು ಕಳೆದು ಹೋಗಿವೆ ಎಂದು ಜನರಿಂದ ಹೇಳಿಕೆ ಪಡೆದುಕೊಂಡು ಚೀಟಿಗಳನ್ನು ವಾಪಸ್ ನೀಡಲಾಗುತ್ತಿದೆ.

ಚುನಾವಣಾ ಅಧಿಕಾರಿಗಳು ನೀಡಿದ ದೂರಿನ ಅನ್ವಯ ರಾಜರಾಜೇಶ್ವರಿ ನಗರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮುನಿರತ್ನ ಸೇರಿದಂತೆ 14 ಜನರ ವಿರುದ್ಧ ಜಾಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.
ಅಪಾರ್ಟ್‌ಮೆಂಟ್‌ನಲ್ಲಿ ಸಿಕ್ಕ ಎಲ್ಲಾ ಗುರುತಿನ ಚೀಟಿಗಳು ಅಸಲಿಯಾಗಿವೆ. ಚುನಾವಣಾಧಿಕಾರಿಗಳು ಅವುಗಳನ್ನು ತಮ್ಮ ಬಳಿ ಇಟ್ಟುಕೊಂಡಿದ್ದರು. ಮೇ 28ರಂದು ರಾಜರಾಜೇಶ್ವರಿ ನಗರ ಕ್ಷೇತ್ರದ ಚುನಾವಣೆ ನಡೆಯುವ ಹಿನ್ನಲೆಯಲ್ಲಿ ಅದನ್ನು ಜನರಿಗೆ ವಾಪಸ್ ನೀಡಲಾಗುತ್ತಿದೆ.












Click it and Unblock the Notifications