ಮಳೆ ಬಂತು ಚಳಿ ಮಾಯವಾಯ್ತು: ಎರಡು ದಿನ ತುಂತುರು ಮಳೆ ಸಾಧ್ಯತೆ
ಬೆಂಗಳೂರು, ಫೆಬ್ರವರಿ 08 : ಕಳೆದೊಂದು ತಿಂಗಳಿನಿಂದ ನಗರದಲ್ಲಿ ಚಳಿ ಅಧಿಕವಾಗಿತ್ತು. ಬುಧವಾರ ಮುಂಜಾನೆಯಿಂದ ಹವಾಮಾನ ಸಂಪೂರ್ಣ ಬದಲಾವಣೆಯಾಗಿ ಅಲ್ಲಲ್ಲಿ ತುಂತುರು ಮಳೆಯಾಗಿದೆ. ಇನ್ನೂ ಎರಡು ದಿನ ಇದೇ ರೀತಿ ಹವಾಮಾನ ಮುಂದುವರೆಯಲಿದೆ.
ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದ ಪರಿಣಾಮ ನಗರದಲ್ಲಿ ತುಂತುರು ಮಳೆಯಾಗಿದೆ. ಇನ್ನೆರಡು ದಿನ ಮೋಡಕವಿದ ವಾತಾವರಣ ಮುಂದುವರೆಯಲಿದ್ದು ಸಂಜೆ ಅಥವಾ ರಾತ್ರಿ ಸಮಯದಲ್ಲಿ ಅಲ್ಲಲ್ಲಿ ಮಳೆಯಾಗಲಿದೆ. ನಗರದಲ್ಲಿ 30 ಡಿಗ್ರಿ ಸೆಲ್ಸಿಯಸ್ ಗರಿಷ್ಠ ತಾಪಮಾನ, 19 ಡಿಗ್ರಿ ಸೆ. ಕನಿಷ್ಠ ತಾಪಮಾನ, ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಗರಿಷ್ಠ ತಾಪಮಾನ 29 ಡಿಗ್ರಿ ಹಾಗೂ ಕನಿಷ್ಠ ತಾಪಮಾನ 18 ಡಿಗ್ರಿ ಸೆ, ಎಚ್ ಎಎಲ್ ವಿಮಾನ ನಿಲ್ದಾಣದಲ್ಲಿ ಗರಿಷ್ಠ ತಾಪಮಾನ 29 ಹಾಗೂ ಕನಿಷ್ಠ 17 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.

ಹವಾಮಾನ ಇಲಾಖೆ ಮಾಹಿತಿಯಂತೆ ಸಾರಕ್ಕಿಯಲ್ಲಿ ಅತಿ ಹೆಚ್ಚು ಅಂದರೆ 25 ಮಿ.ಮೀ ಮಳೆಯಾಗಿದೆ. ತಾವರೆಕೆರೆಯಲ್ಲಿ 16.5 ಮಿ.ಮೀ, ಬಿದರಹಳ್ಳಿಯಲ್ಲಿ 20 ಮಿ.ಮೀ, ಕೋಣನಕುಂಟೆಯಲ್ಲಿ 10.5 ಮಿ.ಮೀ, ಬ್ಯಾಟರಾಯಪುರದಲ್ಲಿ 11 ಮಿ.ಮೀ ಮಳೆಯಾಗಿದೆ. ಮಂಡೂರಿನಲ್ಲಿ 12 ಮಿ.ಮೀ, ಕೋರಮಂಗಲದಲ್ಲಿ 8 ಮಿ.ಮೀ, ಬಿಟಿಎಂ ಲೇಔಟ್ ನಲ್ಲಿ7.5 ಮಿ.ಮೀ ನಷ್ಟು ಮಳೆಯಾಗಿದೆ.












Click it and Unblock the Notifications