ಬೆಂಗಳೂರು ರೈಲ್ವೆ ನಿಲ್ದಾಣದಲ್ಲಿ ಫೇಸ್ ರೆಕಗ್ನಿಷನ್ ಸಿಸ್ಟಂ
ಬೆಂಗಳೂರು, ಜನವರಿ 9: ಬೆಂಗಳೂರು ರೈಲ್ವೆ ನಿಲ್ದಾಣದಲ್ಲಿ ಶೀಘ್ರ ಫೇಸ್ ರೆಕಗ್ನಿಷನ್ ಸಿಸ್ಟಂ ಅಳವಡಿಸಲಾಗುತ್ತಿದೆ.
ಬೆಂಗಳೂರು ಸಿಟಿ ರೈಲು ನಿಲ್ದಾಣ, ಮಹಾರಾಷ್ಟ್ರದ ಮನ್ಮಾಡ್ ಹಾಗೂ ಭುಸಾವಲ್ ರೈಲು ನಿಲ್ದಾಣಗಳಲ್ಲಿ ಫೇಸ್ ರೆಕಗ್ನಿಷನ್ ತಂತ್ರಜ್ಞಾನವನ್ನು ಅಳವಡಿಸಲು ರೈಲ್ವೆ ಇಲಾಖೆ ಮುಂದಾಗಿದೆ.
ನಿರ್ಭಯಾ ನಿಧಿ ಅಡಿಯಲ್ಲಿ ರೈಲ್ವೆಗೆ 250 ಕೋಟಿ ರೂ ದೊರೆತಿದ್ದು, ಹಲವು ರೈಲ್ವೆ ನಿಲ್ದಾಣಗಳಲ್ಲಿ ವಿಡಿಯೋ ಸರ್ವೇಕ್ಷಣಾ ವ್ಯವಸ್ಥೆ ಅಳವಡಿಸಲಾಗಿದೆ.

ಆಧುನಿಕ ಕ್ಯಾಮರಾಗಳನ್ನು ನಿಲ್ದಾಣಗಳಲ್ಲಿ ಅಳವಡಿಸಿ ಅವುಗಳನ್ನು ಆರ್‌ಪಿಎಫ್‌ನ ಕಂಟ್ರೋಲ್ ರೂಂಗೆ ಸಂಯೋಜಿಸಲಾಗುತ್ತದೆ. ಈ ಮೂಲಕ ಪ್ರಯಾಣಿಕರ ಚಲನವಲನಗಳನ್ನು ಸುಲಭವಾಗಿ ಪತ್ತೆ ಮಾಡಬಹುದಾಗಿದೆ.
ಅಪರಾಧ ಹಾಗೂ ಅಪರಾಧಿಗಳ ಪತ್ತೆ ಜಾಲ ತಂತ್ರಜ್ಞಾನದಲ್ಲಿ ಶಂಕಿತರ ಮುಖಚಹರೆಗಳು ಲಭ್ಯವಿದೆ. ಈ ತಂತ್ರಜ್ಞಾನದ ಜೊತೆ ಫೇಸ್ ರೆಕಗ್ನಿಷನ್ ಸಿಸ್ಟಂ ಅನ್ನು ಸಂಯೋಜಿಸುವುದು ರೈಲ್ವೆಯಲ್ಲಿನ ಭದ್ರತೆ ನೋಡಿಕೊಳ್ಳುವ ರೈಲ್ವೆ ರಕ್ಷಣಾ ದಳದ ಉದ್ದೇಶವಾಗಿದೆ.
ಈಗಾಗಲೇ ಈ ವ್ಯವಸ್ಥೆಯನ್ನು ಬೆಂಗಳೂರು ಕಂಟೋನ್ಮೆಂಟ್ , ಬಂಗಾರಪೇಟೆ, ಬೆಳಗಾವಿ, ಹಾಸನ, ಶಿವಮೊಗ್ಗ, ವಾಸ್ಕೋ, ಸತ್ಯಸಾಯಿ ಪ್ರಶಾಂತಿ ನಿಲಯಂ ನಿಲ್ದಾಣಗಳಲ್ಲಿ ಅಳವಡಿಸಲಾಗಿದೆ. ದೇಶದ 200 ರೈಲು ನಿಲ್ದಾಣಗಳಲ್ಲಿ ಇದರ ಅಳವಡಿಕೆಯ ಗುರಿ ಹೊಂದಲಾಗಿದೆ.












Click it and Unblock the Notifications