Bus Fare Hike: ದೀಪಾವಳಿಗೂ ಮುನ್ನವೇ ಜನರಿಗೆ ದರ ಏರಿಕೆ ಶಾಕ್: ಬಸ್ ಟಿಕೆಟ್ ಶೇ 40% ರಷ್ಟು ದುಬಾರಿ! ವಿಪಕ್ಷ ನಾಯಕ
ಬೆಂಗಳೂರು: ಕರ್ನಾಟಕ ರಾಜ್ಯ ಸರ್ಕಾರ ನಾಲ್ಕು ಸಾರಿಗೆ ನಿಗಮಗಳಿಗೆ 5,650.95 ಕೋಟಿ ರೂ. ಬಾಕಿ ಉಳಿಸಿಕೊಂಡಿದೆ. ಈ ಬಾಕಿ ಹಣ ಪಾವತಿಸಿದ್ದರೆ ಇಂದು ಬಸ್ ಟಿಕೆಟ್ ದರ ಏರಿಕೆ ಮಾಡುವ ಅಗತ್ಯವೇ ಇರುತ್ತಿರಲಿಲ್ಲ. ಬಾಕಿ ಹಣ ನೀಡದೇ ಜನರ ಮೇಲೆ ದರ ಏರಿಕೆಯ ಹೊರೆ ಹಾಕಲಾಗಿದೆ ಎಂದು ಸರ್ಕಾರದ ಗ್ಯಾರಂಟಿ ಯೊಜನೆಗಳ ವಿರುದ್ಧ ಪ್ರತಿಪಕ್ಷ ನಾಯಕ ಆರ್.ಅಶೋಕ ಆಕ್ರೋಶ ಹೊರ ಹಾಕಿದರು.
ಇಂದು ಬುಧವಾರ (ನ.4) ತಡರಾತ್ರಿಯಿಂದಲೇ ರಾಜ್ಯ ಸಾರ್ವಜನಿಕ ಸಾರಿಗೆ ಬಸ್ ಟಿಕೆಟ್ ದರ ಏರಿಕೆ ಮಾಡುವುದಾಗಿ ಸಾರಿಗೆ ಸಚಿವ ಬೈರತಿ ಸುರೇಶ್ ಘೋಷಿಸಿದ್ದಾರೆ. ಅದರ ಬೆನ್ನಲ್ಲೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಆರ್. ಅಶೋಕ್ ಅವರು, ತುಘಲಕ್ ಸರ್ಕಾರಕ್ಕಿಂತ ಹೀನಾಯವಾದ ಕಾಂಗ್ರೆಸ್ ರಾಜ್ಯದ ಇತಿಹಾಸದಲ್ಲೇ ದಾಖಲೆ ಬರೆಯುವಂತೆ ಬಸ್ ಟಿಕೆಟ್ ದರ ಏರಿಸಿದೆ. ಈ ಮಟ್ಟಿಗಿನ ದರ ಏರಿಕೆಯನ್ನೂ ಯಾವುದೇ ಸರ್ಕಾರ ಈವರೆಗೆ ಮಾಡಿಲ್ಲ.

ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳುವಂತೆ ಸಾರಿಗೆ ಇಲಾಖೆಯಲ್ಲಿ ಸಾಕ್ಷಿಗುಡ್ಡೆಯನ್ನು ಬಿಟ್ಟು ಹೋಗುತ್ತಿದ್ದಾರೆ. ದೀಪಾವಳಿ ಹಬ್ಬ ಬೆಳಕಿನ ಹಬ್ಬವಾಗಿದ್ದರೂ, ಜನರ ಬದುಕಲ್ಲಿ ಕತ್ತಲಿನ ಆಚರಣೆಯಾಗಲಿದೆ. ಇದು ಜನರನ್ನು ಸುಲಿಗೆ ಮಾಡುವ ವಿಧಾನವಾಗಿದೆ. ಸುಮಾರು 40% ವರೆಗೂ ಟಿಕೆಟ್ ದರ ಏರಿಸಲಾಗಿದೆ ಎಂದು ದೂರಿದರು.
12 ರೂ.ನಿಂದ 18ಕ್ಕೆ ಹೆಚ್ಚಳ, ದರ ಏರಿಕೆ ಎಷ್ಟಾಗಿದೆ ಗೊತ್ತಾ?
ಮೆಜೆಸ್ಟಿಕ್‌ನಿಂದ ಶಿವಾಜಿನಗರಕ್ಕೆ ಬಿಎಂಟಿಸಿಯಲ್ಲಿ 12 ರೂ. ಇದ್ದು, ಈಗ 18 ರೂ. ಆಗಿದೆ. ಮೆಜೆಸ್ಟಿಕ್‌ನಿಂದ ಯಶವಂತಪುರಕ್ಕೆ 18 ರೂ. ಇದ್ದು, ಈಗ 25 ರೂ. ಆಗಿದೆ. ಮೆಜೆಸ್ಟಿಕ್‌ನಿಂದ ಬನಶಂಕರಿಗೆ 12 ರೂ., ಅತ್ತಿಬೆಲೆಗೆ 12 ರೂ. ಜಾಸ್ತಿಯಾಗಿದೆ. ನೆಲಮಂಗಲ, ಕಾಡುಗೋಡಿಗೆ 10 ರೂ, ಹೊಸಕೋಟೆಗೆ 12 ರೂ. ಹೆಚ್ಚಳವಾಗಿದೆ. ವೇಗದೂತದಲ್ಲಿ ಬೆಂಗಳೂರು-ಕೋಲಾರಕ್ಕೆ 19 ರೂ. ಹೆಚ್ಚಳ, ಬೆಂಗಳೂರು-ತುಮಕೂರು 81 ರೂ. ಇದ್ದು, ಈಗ 100 ರೂ. ಆಗಿದೆ. ಬೆಂಗಳೂರು-ಮಂಡ್ಯ 110 ರಿಂದ 136 ರೂ., ಚಾಮುಂಡೇಶ್ವರಿ ದೇವಾಲಯಕ್ಕೆ ಹೋಗುವವರಿಗೆ ಬೆಂಗಳೂರು-ಮೈಸೂರು ಟಿಕೆಟ್‌ನಲ್ಲಿ 37 ರೂ. ಹೆಚ್ಚಳವಾಗಿದೆ. ಹಾಸನಾಂಬೆ ದರ್ಶನ ಪಡೆಯಲು ಹೋಗುವವರಿಗೆ ಬೆಂಗಳೂರು-ಹಾಸನಕ್ಕೆ 51 ರೂ. ಜಾಸ್ತಿಯಾಗಿದೆ ಎಂದು ಅವರು ವಿವರಿಸಿದ್ದಾರೆ.
ಸರ್ಕಾರಕ್ಕೆ ದರ ಏರಿಕೆ ಮಾಡಲು ಒಂದು ಕಾರಣ ಬೇಕು. ಆದರೆ ಇಲ್ಲಿ ಸಾಲ ಮಾಡಿರುವುದರಿಂದ ದರ ಏರಿಕೆ ಎನ್ನುತ್ತಿದ್ದಾರೆ. ಸಚಿವ ಬೈರತಿ ಸುರೇಶ್ ಸಾಲದಲ್ಲಿದ್ದೇವೆ ಎಂದಿದ್ದಾರೆ. ನಾನು ಸಾರಿಗೆ ಸಚಿವನಾಗಿದ್ದಾಗ ನಿಗಮಗಳು ಐದು ವರ್ಷ ಲಾಭದಲ್ಲಿತ್ತು. ಆಗ ಸ್ವಂತ ಹಣದಿಂದಲೇ 1,110 ಎಕರೆ ಜಮೀನು ಖರೀದಿಸಿ ಲ್ಯಾಂಡ್ ಬ್ಯಾಂಕ್ ಮಾಡಲಾಗಿತ್ತು. ಈಗ ಅದಕ್ಕೆ 10,000 ಕೋಟಿ ರೂ. ಮೌಲ್ಯವಿದೆ. ನಾನು ಟಿಟಿಎಂಸಿ ಮಾಡಿದ್ದೆ. ಬಾಡಿಗೆಯಿಂದಲೇ 40-50 ಕೋಟಿ ರೂ. ಬರುತ್ತಿತ್ತು ಎಂದರು.
ನಾಲ್ಕು ನಿಮಗಳಿಗೆ ಬಾಕಿ ಇರುವ ಹಣವೆಷ್ಟು?
ರಾಜ್ಯ ಸರ್ಕಾರದಿಂದ ನಾಲ್ಕೂ ಸಾರಿಗೆ ನಿಗಮಗಳಿಗೆ ಈಗ ₹5,650.95 ಕೋಟಿ ಬಾಕಿ ಪಾವತಿ ಆಗಬೇಕಿದೆ. KSRTC ಗೆ ₹2,943 ಕೋಟಿ NWKRTC ಗೆ ₹1,306 ಕೋಟಿ, BMTC ಗೆ ₹1,019 ಕೋಟಿ, KKRTC ಗೆ ₹999 ಕೋಟಿ ನೀಡುವುದು ಬಾಕಿ ಉಳಿದಿದೆ.
ಸಾಲ ಪಡೆದು ಗ್ಯಾರಂಟಿಗೆ ಹಣ ನೀಡಿದ ಆರೋಪ
ಸಾಲ ಪಡೆಯಲು 2,000 ಕೋಟಿ ರೂ. ಗ್ಯಾರಂಟಿ ನೀಡಲಾಗಿದೆ. ಬಾಕಿ ಪಾವತಿ ಮಾಡಿದ್ದರೆ ಈ ಗ್ಯಾರಂಟಿಯ ಅಗತ್ಯವೇ ಇರಲಿಲ್ಲ. ನೌಕರರಿಗೂ ಸಾರಿಗೆ ನಿಗಮಗಳಿಂದ ಬಾಕಿ ಇಟ್ಟುಕೊಳ್ಳಲಾಗಿದೆ. ಭವಿಷ್ಯ ನಿಧಿ ₹2,901.53 ಕೋಟಿ ಬಾಕಿ ಹಾಗೂ ಇಂಧನ ಬಾಕಿ ₹827.37 ಕೋಟಿ ಇದೆ. ಇತ್ತೀಚೆಗೆ ಬಸ್ ಚಲಾಯಿಸುತ್ತಿದ್ದಾಗ ಸ್ಟಿಯರಿಂಗ್ ಕಳಚಿಕೊಂಡು ಚಾಲಕನ ಕೈಗೆ ಬಂದಿತ್ತು. ಮತ್ತೊಂದು ಕಡೆ ಬಸ್‌ಗಳನ್ನು ಜನರೇ ತಳ್ಳಿದ್ದರು. ಹೆಡ್‌ಲೈಟ್ ಇಲ್ಲದೆ ಮೊಬೈಲ್ ಟಾರ್ಚ್ ಹಾಕಿಕೊಂಡು ಬಸ್ ಚಲಾಯಿಸಿದ ಘಟನೆ ಕಲಬುರ್ಗಿಯ ಚಿಂಚೋಳಿ ಮಾರ್ಗದಲ್ಲಿ ನಡೆದಿತ್ತು ಎಂದರು.
2026ರ ಮೇ ತಿಂಗಳಲ್ಲಿ, ಸಾರಿಗೆ ನಿಗಮಗಳ ಒಟ್ಟು ಹೊಣೆಗಾರಿಕೆ ₹7,130.80 ಕೋಟಿ ಇತ್ತು. ಇದರಲ್ಲಿ ವೇತನ, ಪಿಎಫ್, ಗ್ಯಾಚ್ಯುಟಿ ಎಲ್ಲ ಸೇರಿದೆ. ಕೋವಿಡ್ ಸಮಯದಲ್ಲಿ ಎಲ್ಲ ಕಡೆ ನಷ್ಟ ಇದ್ದಿದ್ದರಿಂದ ಸಾರಿಗೆ ನಿಗಮಗಳಿಗೂ ನಷ್ಟವಾಗಿತ್ತು. ಅದನ್ನು ಹೊರತುಪಡಿಸಿ ಬಿಜೆಪಿ ಅವಧಿಯಲ್ಲಿ ಉಳಿದ ಸಮಯದಲ್ಲಿ ಸಂಪೂರ್ಣ ಲಾಭವಾಗಿದೆ ಎಂದರು.
ಡಿಕೆಶಿ 'ದರಿದ್ರ ಲಕ್ಷ್ಮಿ' ಎನ್ನಬೇಕಿತ್ತು!
ಹಿರಿಯೂರಿಗೆ ಹೋದ ಸಿಎಂ ಡಿ.ಕೆ.ಶಿವಕುಮಾರ್, ನಾನು ಲಕ್ಷ್ಮಿ ಜೊತೆ ಬಂದಿದ್ದೇನೆ ಎಂದು ಹೇಳಿದ್ದರು. ಅದು ದರಿದ್ರ ಲಕ್ಷ್ಮಿ ಎಂದು ಹೇಳಬೇಕಿತ್ತು. 12,000 ಕೋಟಿ ರೂ. ನಿಗಮಗಳಿಗೆ ಬಾಕಿ ಇದೆ. ಡಿ.ಕೆ.ಶಿವಕುಮಾರ್ ರಾಜ್ಯದ ಯಾವುದೇ ಸ್ಥಳಕ್ಕೆ ಹೋಗಿ ಲಕ್ಷ್ಮಿಯನ್ನು ತರುತ್ತೇನೆ ಎಂದರೆ, ಸಾಲ ತರುತ್ತಾರೆ ಎಂದೇ ಅರ್ಥ. ಅನುದಾನ ನೀಡುತ್ತೇನೆ ಎಂದರೆ, ಆರ್ಥಿಕ ಇಲಾಖೆಯಲ್ಲಿ ಕ್ಲಿಯರೆನ್ಸ್ ಸಿಕ್ಕಿದೆಯೇ ಎಂದು ಪ್ರಶ್ನೆ ಮಾಡಬೇಕು. ಸಾಲ ಇಟ್ಟುಕೊಂಡು ಕೇವಲ ಬುರುಡೆ ಬಿಡುವ ಕೆಲಸವನ್ನು ಸಿಎಂ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಹಾಲಿನ ದರ ಏರಿಕೆ
ಹಾಲಿನ ಪ್ರೋತ್ಸಾಹಧನವನ್ನು 7 ರೂ. ಗೆ ಏರಿಸುವುದಾಗಿ ಮಾತು ಕೊಟ್ಟ ಕಾಂಗ್ರೆಸ್ ನಂತರ ಅದನ್ನು ಮಾಡದೆ ಜನರ ಮೇಲೆ ಹೊರೆ ಹಾಕಿದೆ. ಲೀಟರ್‌ಗೆ 8 ರೂ. ಹೆಚ್ಚಾಗಿದೆ ಎಂದು ಹೇಳಲಾಗಿತ್ತು. ಶುಭಂ ಸ್ಟಾಂಡರ್ಡ್ ಹಾಲಿನ ದರ 12 ರೂ., ಮತ್ತೊಂದು ಶುಭಂ ಹಾಲಿನ ದರ 13 ರೂ. ಏರಿಸಲಾಗಿದೆ. ಮೊಸರು ಒಂದು ಕೆಜಿಗೆ 25 ರೂ. ಜಾಸ್ತಿ ಮಾಡಲಾಗಿದೆ. ಲಸ್ಸಿಗೆ 14 ರೂ. ನಿಂದ 16 ರೂ. ಮಾಡಲಾಗಿದೆ. ರೈತರಿಗೆ 7 ರೂ. ನೀಡಲಿದ್ದು, ಉಳಿದ ಹಣ ಕಾಂಗ್ರೆಸ್ ನಾಯಕರ ಜೇಬಿಗೆ ಹೋಗುತ್ತದೆ ಎಂದರು ಆರೋಪಿಸಿದರು.
ಪ್ರತಿ ದಿನ ಬಳಸುವ ಆಹಾರದ ಮೇಲೆ ದರ ಏರಿಕೆ ಮಾಡುವುದನ್ನು ತಪ್ಪಿಸಬೇಕಿತ್ತು. ಈಗ ತಿಂಗಳಿಗೆ ಒಂದು ಕುಟುಂಬ 390 ರೂ. ಅಧಿಕ ಖರ್ಚು ಮಾಡಬೇಕಾಗುತ್ತದೆ. ಜನರಿಗಾಗಿ ಸರ್ಕಾರ ಎಂದು ಸಿದ್ದರಾಮಯ್ಯ ಹೇಳಿದ್ದರು. ಆದರೆ ಈ ಸರ್ಕಾರ ಕೊಟ್ಟ ಮಾತಿಗೆ ತಪ್ಪಿ ನಡೆದು ಅನ್ಯಾಯ ಮಾಡಿದೆ ಎಂದರು.
ಹೋರಾಟಕ್ಕೆ ಕರೆ ನೀಡಿದ ವಿಪಕ್ಷ ನಾಯಕ
ದರ ಏರಿಕೆ ಬಗ್ಗೆ ನಾನು ಅಧಿವೇಶನದಲ್ಲೇ ಹೋರಾಟ ಮಾಡಿದ್ದೆ. ಮುಂದೆಯೂ ಮಾಡುತ್ತೇನೆ. ಜನರು ಇದಕ್ಕೆ ಇನ್ನಷ್ಟು ಸ್ಪಂದಿಸಿದರೆ ನಿಜವಾದ ಹೋರಾಟವಾಗುತ್ತದೆ. ಇಲ್ಲವಾದರೆ ರಾಜಕೀಯ ಪ್ರತಿಭಟನೆ ಎಂದು ವಾದ ಮಾಡುತ್ತಾರೆ. ಆದ್ದರಿಂದ ಸಾರ್ವಜನಿಕರು ಈ ಹೋರಾಟದಲ್ಲಿ ಭಾಗವಹಿಸಬೇಕು ಎಂದು ಕೋರಿದರು.


Click it and Unblock the Notifications
