Bommasandra - Hosur Metro: ಅಧ್ಯಯನಕ್ಕೆ ಚೆನ್ನೈ ಮೆಟ್ರೋ ನಿಗಮದಿಂದ ಟೆಂಡರ್, ಕನ್ನಡ ಪರ ಸಂಘಟನೆಗಳ ಕೆಂಗಣ್ಣು
ಬೆಂಗಳೂರು, ಆಗಸ್ಟ್ 3: ಕನ್ನಡ ಪರ ಸಂಘಟನೆಗಳ ತೀವ್ರ ವಿರೋಧದ ನಡುವೆಯೂ ಬೊಮ್ಮಸಂದ್ರ ಟು ಹೊಸೂರು ಮಾರ್ಗದ ಮೆಟ್ರೋಗೆ ಮತ್ತೆ ಜೀವ ಸಿಕ್ಕಿದೆ. ಮೆಟ್ರೋ ಸಂಪರ್ಕ ಕಲ್ಪಿಸುವ ಯೋಜನೆಯ ಕಾರ್ಯಸಾಧ್ಯತೆ ಬಗ್ಗೆ ಮೆಟ್ರೋ ಅಧ್ಯಯನಕ್ಕೆ ಚೆನ್ನೈ ಮೆಟ್ರೋ ನಿಗಮದಿಂದ ಟೆಂಡರ್ ಕರೆಯಲಾಗಿದೆ. ಇದಕ್ಕೆ ಕರ್ನಾಟಕ ರಕ್ಷಣಾ ವೇದಿಕೆ ವಿರೋಧ ವ್ಯಕ್ತಪಡಿಸಿದೆ.
ದೇಶದ ಮೊದಲ ಅಂತಾರಾಜ್ಯ ಮೆಟ್ರೋ ಯೋಜನೆಗೆ ಚೆನ್ನೈ ಮೆಟ್ರೋ ನಿಗಮ ಆರಂಭಿಕ ಹೆಜ್ಜೆ ಇಟ್ಟಿದೆ. ಇದೇ ಫೆಬ್ರವರಿಯಲ್ಲಿ ಹೊಸೂರು ಮತ್ತು ಬೆಂಗಳೂರು ನಡುವೆ ಮೆಟ್ರೊ ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ ಚೆನ್ನೈ ಮೆಟ್ರೋ ರೈಲು ನಿಗಮ ಕಾರ್ಯಸಾಧ್ಯತಾ ಅಧ್ಯಯನ ನಡೆಸಲು ಅನುಮತಿ ಕೇಂದ್ರಕ್ಕೆ ಪತ್ರ ಬರೆದಿತ್ತು. ಒಪ್ಪಿಗೆ ಸಿಕ್ಕ ಹಿನ್ನೆಲೆ ಈಗ ಅಧ್ಯಯನ ಮಾಡಲು ಆಗಸ್ಟ್ 1 ರಿಂದ 31 ರವರೆಗೆ ಟೆಂಡರಿಗೆ ಅರ್ಜಿ ಸಲ್ಲಿಸಲು ಚೆನ್ನೈ ಮೆಟ್ರೋ ನಿಗಮ ಅವಕಾಶ ನೀಡಿದೆ. ಹಾಗದರೆ, ಏನಿದು ಯೋಜನೆ..ಇದರ ಲಾಭವೇನು?

ಹೊಸೂರು - ಎಲೆಕ್ಟ್ರಾನಿಕ್ ಸಿಟಿಯ ಬೊಮ್ಮಸಂದ್ರ ನಡುವೆ 20.5 ಕಿಮೀ ಮೆಟ್ರೋ ಮಾರ್ಗಕ್ಕೆ ಪ್ಲಾನ್‌ಮಾಡಲಾಗಿದೆ. ಈ ಮಾರ್ಗ 11.7 ಕಿಮೀ ಕರ್ನಾಟಕದಲ್ಲಿದೆ, ಉಳಿದ 8.8 ಕಿಮೀ ತಮಿಳುನಾಡಿನಲ್ಲಿದೆ. ಈಗ ಕಾರ್ಯಸಾಧ್ಯತಾ ಅಧ್ಯಯನದ ಪೂರ್ಣ ವೆಚ್ಚ ವಹಿಸಲಿರುವ ತಮಿಳುನಾಡು ಸರ್ಕಾರ ಮುಂದಾಗಿದೆ. ಮುಂದೆ ವರದಿ ಬಂದು ಕೇಂದ್ರದ ಒಪ್ಪಿಗೆ ಸಿಕ್ಕ ಬಳಿಕ ಎರಡು ರಾಜ್ಯಗಳು ತಮ್ಮ ವ್ಯಾಪ್ತಿಯ ಕಾಮಗಾರಿಗೆ ವೆಚ್ಚದ ಹೊಣೆ ಹೊರುವ ಸಾಧ್ಯತೆಯಿದೆ.
ಇನ್ನೂ ಹೊಸೂರಿನಲ್ಲಿ 2,000 ಕ್ಕೂ ಹೆಚ್ಚು ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳಿವೆ. ಈ ಮೆಟ್ರೋ ಮಾರ್ಗದಿಂದ ಹೊಸೂರು- ಬೆಂಗಳೂರು ಮೆಟ್ರೋ ಸಂಪರ್ಕದಿಂದ ಅಭಿವೃದ್ಧಿ ಸಾಧ್ಯ ಅಂತಿದೆ ತಮಿಳುನಾಡು ಸರ್ಕಾರ. ಅಲ್ಲದೆ ಮೆಟ್ರೋ ಸಂಪರ್ಕದಿಂದ ಮತ್ತಷ್ಟು ಬೆಳವಣಿಗೆ ಉತ್ತೇಜನ ಸಿಗಲಿದೆಯಂತೆ.

ಹೊಸೂರಿನಿಂದ ಬೆಂಗಳೂರಿಗೆ ನಿತ್ಯ ಸಾವಿರಾರು ಜನರ ಸಂಚಾರ
ಜೊತೆಗೆ ಹೊಸೂರಿನಿಂದ ಬೆಂಗಳೂರಿಗೆ ನಿತ್ಯ ಸಾವಿರಾರು ಜನರು ಸಂಚರಿಸುತ್ತಾರೆ. ಪ್ರಯಾಣಿಕರ ಪಾಲಿಗೆ ಇದೊಂದು ಕನಸಿನ ಯೋಜನೆ ಅಂತ ತಮಿಳುನಾಡಿನ ವಾದ. ಇನ್ನು ಈ ಯೋಜನೆ ಜಾರಿಯಾದರೆ ಎರಡು ರಾಜ್ಯಗಳ ಜನರಿಗೆ ಅನುಕೂಲವಾಗಲಿದೆ ಅಂತಿದೆ ಚೆನ್ನೈ ಮೆಟ್ರೋ ನಿಗಮ.
ತಮಿಳುನಾಡು ಪ್ರಸ್ತಾವನೆ
5 ತಿಂಗಳ ಹಿಂದೆ ಬೆಂಗಳೂರು- ಹೊಸೂರು ಮೆಟ್ರೋಗೆ ಕೇಂದ್ರಕ್ಕೆ ತಮಿಳುನಾಡು ಪ್ರಸ್ತಾವನೆ ಸಲ್ಲಿಸಿತ್ತು . ಕೇಂದ್ರಕ್ಕೆ ಪ್ರಸ್ತಾಪ ಸಲ್ಲಿಸಿದ್ದಕ್ಕೆ ಕನ್ನಡ ಪರ ಸಂಘಟನೆಗಳು ವಿರೋಧ ವ್ಯಕ್ತಪಡಿಸಿದ್ದವು. ಯಾವುದೇ ಕಾರಣಕ್ಕೂ ಈ ಮೆಟ್ರೋ ಮಾರ್ಗಕ್ಕೆ ಅವಕಾಶ ನೀಡದಂತೆ ವಿರೋಧ ಮಾಡಿದ್ವು ಈಗ ಮತ್ತೆ ಕಾರ್ಯಸಾಧ್ಯತಾ ಅಧ್ಯಯನ ನಡೆಸಲು ಮುಂದಾಗಿರೋದು ಕನ್ನಡ ಪರ ಸಂಘಟನೆಗಳ ಕಣ್ಣು ಕೆಂಪಾಗಿಸಿದೆ. ಹಾಗದರೆ ಕನ್ನಡ ಪರ ಸಂಘಟನೆಗಳ ವಿರೋಧ ಯಾಕೆ ಅಂತ ನೋಡೋದಾದ್ರೆ.
ಕನ್ನಡ ಸಂಘಟನೆಗಳ ತೀವ್ರ ವಿರೋಧ
ಇನ್ನೂ ಈ ಯೋಜನೆಗೆ ಕನ್ನಡ ಸಂಘಟನೆಗಳು ತೀವ್ರ ವಿರೋಧ ವ್ಯಕ್ತ ಪಡಿಸುತ್ತಿದೆ. ಈ ಯೋಜನೆಯಿಂದ ಬೆಂಗಳೂರಿಗೆ ನಷ್ಟ ಹೆಚ್ಚು. ಬೆಂಗಳೂರಿಗೆ ಬರುವ ಕೈಗಾರಿಕೆಗಳನ್ನ ಹೊಸೂರಿಗೆ ಸೆಳೆಯುವ ಯತ್ನ ಅಂತ ಆರೋಪ. ಈ ಕಾರಣಕ್ಕಾಗಿಯೇ ಹಿಂದೆ ಹೊಸರಿನಲ್ಲಿ ಸರ್ಕಾರ ತಮಿಳುನಾಡು ವಸಾಹತು ಸ್ಥಾಪನೆ ಮಾಡಿತ್ತು. ಈಗ ಬೊಮ್ಮಸಂದ್ರ, ವೈಟ್ ಫಿಲ್ಡ್ ಮಹದೇವಪುರ ಭಾಗದಲ್ಲಿ ತಮಿಳುನಾಡಿನ ಭಾಗದ ಪ್ರಭಾವ ಹೆಚ್ಚಾಗುವ ಸಾಧ್ಯತೆ ಇದೆ ಎಂದು ವಿರೋಧ ವ್ಯಕ್ತಪಡಿಸ್ತಿದ್ದಾರೆ.
ಬೆಂಗಳೂರು ಹಾಗೂ ಹೊಸೂರು ನಡುವೆ ಮೆಟ್ರೋ ಸಂಚಾರ
ಬೆಂಗಳೂರು ಹಾಗೂ ಹೊಸೂರು ನಡುವೆ ಮೆಟ್ರೋ ಸಂಚರಿಸಬಹುದಾದ ನಗರಗಳ ನಡುವಿನ ಮಾರ್ಗ ಬಗ್ಗೆ ಅಧ್ಯಯನ ನಡೆಸಲಿದ್ದಾರೆ. ಅಲ್ಲದೆ ಮೆಟ್ರೋ ಮಾರ್ಗದ ತಂತ್ರಜ್ಞಾನ ಹೇಗಿರಬೇಕು. ಅಂತರ ಕಡಿಮೆ ಮಾಡಬಹುದೇ.ಎಷ್ಟು ಸ್ಟೇಷನ್ ಗಳು ಇರಲಿವೆ. ಒಟ್ಟು ಯೋಜನೆಯ ವೆಚ್ಚ ಎಷ್ಟಾಗುತ್ತೆ ಅಂತ ಸಂಪೂರ್ಣವಾಗಿ ಅಧ್ಯಯನ ನಡೆಯಲಿದೆ. ಮುಂದೆ ಪ್ರಸ್ತಾವಿಕ ಯೋಜನೆಗೆ ವಸತಿ ಮತ್ತು ನಗರ ಸಚಿವಾಲಯದ ಸಹಯೋಗದಲ್ಲಿ ಕಾಮಗಾರಿ ನಡೆಯಲಿದೆಯಂತೆ. ಆದರೆ ಈಗ ಕನ್ನಡ ಪರ ಸಂಘಟನೆಗಳ ವಿರೋಧದ ನಡುವೆ ಯೋಜನೆ ಕೈಗೆತ್ತುಕೊಳ್ತಾರಾ ಎಂದು ಕಾದು ನೋಡಬೇಕಿದೆ.












Click it and Unblock the Notifications