ಭಯೋತ್ಪಾದಕನಿಗೆ ಆಶ್ರಯ ನೀಡಿದ ಮಸೀದಿ ಸೀಜ್ ಮಾಡಿ- ಹಿಂದೂ ಸಂಘಟನೆ ಆಗ್ರಹ
ಬೆಂಗಳೂರು, ಜೂನ್ 09: ಹಿಂದೂ ಕ್ರೈಸ್ತ ಮುಸಲ್ಮಾನ ಪಾರಸೀಕ ಜೈನರ ಉದ್ಯಾನ ಎಂದು ಕರ್ನಾಟಕದ ಬಗ್ಗೆ ಕುವೆಂಪು ನಾಡಗೀತೆಯಲ್ಲಿ ಬರೆದಿದ್ದರು. ಅಂದರೆ ಕರ್ನಾಟಕ ಸಾಮರಸ್ಯದ ನೆಲೆವೀಡು ಅನ್ನುವುದನ್ನೂ ಆ ಮೂಲಕ ಸಾರಿದ್ದರು. ಆದರೆ ಕರುನಾಡಿನಲ್ಲಿ ಹಿಜಾಬ್, ಹಲಾಲ್ ಕಟ್, ಮಸೀದಿ ವಿವಾದ ಹೀಗೆ ಹಲವಾರು ವಿಚಾರ ಮುನ್ನೆಲೆಗೆ ಬಂದು ಮುಗ್ದ ಮನಸ್ಸನ್ನು ಕೆಡಿಸುವ ಕೆಲಸವಾಗುತ್ತಿದೆ. ಧರ್ಮ ದಂಗಲ್ ಎನ್ನುವ ಮಟ್ಟಕ್ಕೆ ಕೆಲವು ಬೆಳವಣಿಗೆಗಳು ನಡೆಯುತ್ತಿವೆ. ಉರಿವ ತುಪ್ಪಕ್ಕೆ ಬೆಂಕಿ ಸುರಿಯುವಂತಾಗಿ ಸಿಲಿಕಾನ್ ಸಿಟಿಯಲ್ಲಿ ಸೆರೆಸಿಕ್ಕ ಉಗ್ರನ ವಿಚಾರ, ಭಯೋತ್ಪಾದನೆ ಸಂಬಂಧ ಮೂರು ದೂರುಗಳನ್ನು ನಗರ ಪೊಲೀಸ್ ಆಯುಕ್ತರಿಗೆ ನೀಡಲಾಗಿದೆ.
ಭಜರಂಗದಳ ಹಾಗು ವಿಶ್ವ ಹಿಂದೂ ಪರಿಷತ್ ಜಂಟಿಯಾಗಿ ನಗರ ಪೊಲೀಸ್ ಆಯುಕ್ತರಿಗೆ ದೂರನ್ನು ನೀಡಿದ್ದಾರೆ. ಭಯೋತ್ಪಾದಕನ ಬಂಧನ ಸಂಬಂಧಿಸಿದ ದೂರು ಒಂದು, ರಂಜಾನ್ ಆಚರಣೆಯ ಸಂಬಂಧಿಸಿದಂತೆ ನೀಡಲಾಗಿರುವ ದೂರು ಇನ್ನೊಂದು, ಲೌಡ್ ಸ್ಪೀಕರ್ ಬಗ್ಗೆ ನೀಡಲಾಗಿರುವ ದೂರು ಮಗದೊಂದು. ಈ ಮೂರು ದೂರಗಳು ಸಹ ಗಂಭೀರವಾಗಿರುವಂತಹದ್ದೇ ಆಗಿದೆ. ಪೊಲೀಸ್ ಆಯುಕ್ತರಿಗೆ ರವಾನೆ ಮಾಡಲಾಗಿದೆ.
ಮಸೀದಿ ಸೀಝ್ ಮಾಡಿ ಎಂದ ಹಿಂದೂ ಸಂಘಟನೆ..!
ಹಿಂದೂ ಸಂಘಟನೆಯ ಮುಖಂಡರಾದ ತೇಜಸ್ ಗೌಡ , ಗೋವರ್ಧನ್ ಹಾಗು ಶಿವಕುಮಾರ್ ಪೊಲೀಸ್ ಆಯುಕ್ತರ ಕಚೇರಿಗೆ ಆಗಮಿಸಿ ದೂರು ಸಲ್ಲಿಸಿದರು. ಇತ್ತೀಚೆಗೆ ಜಮ್ಮು ಕಾಶ್ಮೀರ ಪೊಲೀಸರ ಕೈಗೆ ಸಿಕ್ಕಿಬಿದ್ದು ಬಂಧನಕ್ಕೊಳಗಾದ ತಾಲೀಬ್ ಹುಸೇನ್ ಗೆ ಆಶ್ರಯ ಕೊಟ್ಟವರು ಸಿಮ್ ಕಾರ್ಡ್ ಕೊಟ್ಟವರನ್ನೂ ಕೂಡ ವಿಚಾರಣೆಗೊಳಪಡಿಸಬೇಕು ಹಾಗು ಆತ ಪ್ರಾರ್ಥನೆ ಸಲ್ಲಿಸಿ ಬೋಧನೆ ಮಾಡುತ್ತಿದ್ದ ಮಸೀದಿಯನ್ನೂ ಸೀಝ್ ಮಾಡಬೇಕೆಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.ಅದೇ ರೀತಿ ಕಳೆದ ಎರಡು ವರ್ಷದಲ್ಲಿ ಆತನ ಎಲ್ಲೆಲ್ಲಿ ಸಭೆಗಳನ್ನ ಮಾಡಿದ್ದ ಅಲ್ಲಿ ಉಗ್ರತ್ವದ ಬಗ್ಗೆ ಏನೇನೋ ಮಾತನಾಡಿ ಪ್ರಚೋದನೆ ಮಾಡಿದ್ದ , ನಿಜಕ್ಕೂ ಆತ ಪ್ರಚೋದನೆ ಮಾಡಿ ಯಾರ್ಯಾರನ್ನ ಉಗ್ರತ್ವಕ್ಕೆ ಕಳಿಸುತ್ತಿದ್ದ ಎಂಬುದರ ಬಗ್ಗೆ ತನಿಖೆ ಮಾಡಬೇಕು ಎಂದು ಹಿಂದೂ ಸಂಘಟನೆಗಳು ಆಗ್ರಹಿಸಿದೆ.

ರಸ್ತೆ ಮಧ್ಯೆ ನಮಾಜ್‌ಗೆ ಆಕ್ರೋಶ
ಇನ್ನು ಮೇ ಮೂರನೆ ತಾರೀಕು ನಡೆದ ರಂಜಾನ್ ಹಬ್ಬದ ವೇಳೆ ಸ್ಪಷ್ಟವಾಗಿ ಕಾನೂನು ಉಲ್ಲಂಘನೆಯಾಗಿದೆ ಎಂದು ಕೂಡ ದೂರನ್ನ ನೀಡಲಾಗಿದೆ. ಆ ದಿನ ರಸ್ತೆಗಳನ್ನ ಬ್ಲಾಕ್ ಮಾಡಿ ಪ್ರಾರ್ಥನೆ ಮಾಡಿದ್ದಾರೆ. ಅದಕ್ಕೆ ಸಂಚಾರಿ ಪೊಲೀಸರಿಂದ ಯಾವುದೇ ಅನುಮತಿಯನ್ನ ಪಡೆದಿರಲಿಲ್ಲ. ನಮಾಜ್ ಮಾಡಬೇಡಿ ಎಂದಿಲ್ಲ ಆದರೆ ಅದನ್ನ ಮಸೀದಿಗಳಲ್ಲಿ ಹಾಗು ನಿರ್ದಿಷ್ಟ ಸ್ಥಳಗಳಲ್ಲಿ ಮಾಡಲಿ ಸಾರ್ವಜನಿಕರ ಸ್ವತ್ತಿನಲ್ಲಿ ಅಲ್ಲ ಎಂದು ಕಿಡಿಕಾರಿದ್ದಾರೆ. ಹಿಂದೂಗಳ ಹಬ್ಬವಾದರೆ ಹತ್ತಾರು ಅನುಮತಿಗಳನ್ನ ಪಡೆಯಬೇಕು ಆದರೆ ಮುಸ್ಲಿಮರು ಕಾನೂನು ಉಲ್ಲಂಘಿಸಿದ್ದಾರೆ ಹೀಗಾಗಿ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಮನವಿ ಮಾಡಲಾಗಿದೆ.
ಪೊಲೀಸ್ ಆಕ್ಟ್ ಪ್ರಕಾರ ಧ್ವನಿವರ್ಧಕಕ್ಕೆ ಅನುಮತಿ ಇಲ್ಲ..!
ಇದೇ ವೇಳೆ ಧ್ವನಿವರ್ದಕಗಳ ಬಗ್ಗೆ ಕೂಡ ವಿಚಾರವಾಗಿಯೂ ದೂರನ್ನು ಸಲ್ಲಿಸಲಾಗಿದೆ. 51 ಮೀಟರ್ ಅಂತರದ ಕಟ್ಟಡಕ್ಕೆ ಧ್ವನಿವರ್ಧಕ ಅಳವಡಿಸಲು ಅನುಮತಿ ನೀಡಬೇಡಿ, ಅಷ್ಟಕ್ಕೂ ಕರ್ನಾಟಕ ಪೊಲೀಸ್ 1983 ಪ್ರಕಾರ ಪೊಲೀಸರು ಅನುಮತಿ ನೀಡುವಂತಿಲ್ಲ ಎಂದಿದ್ದಾರೆ.

ಇನ್ನು ಇದರ ಬಗ್ಗೆ ಪರಿಶೀಲನೆ ನಡೆಸೋದಾಗಿ ಪೊಲೀಸ್ ಆಯುಕ್ತರು ಭರವಸೆ ನೀಡಿದ್ದಾರೆಂದು ಹಿಂದೂ ಸಂಘಟನೆಗಳು ಹೇಳಿಕೊಂಡಿದೆ. ಸದ್ಯ ಚಾಮರಾಜ ಪೇಟೆಯ ಈದ್ಗಾ ಮೈದಾನದ ವಿವಾದ ನಡುವೆ ಮತ್ತಷ್ಟು ಹತ್ತು ಹಲವು ವಿವಾದಗಳು ಹುಟ್ಟುತ್ತಲೇ ಸಾಗುತ್ತಿರುವುದು ಪೊಲೀಸರ ಕಾನೂನು ಸುವ್ಯವಸ್ಥೆ ತಡೆಗೆ ನಿಜಕ್ಕೂ ಸವಾಲಾಗುವ ಸಾಧ್ಯತೆಗಳಿವೆ.
(ಒನ್ಇಂಡಿಯಾ ಸುದ್ದಿ)












Click it and Unblock the Notifications