ವಿಜಯೇಂದ್ರ ವಿರುದ್ಧ ಖರ್ಗೆ ಕಿಡಿ: 'POCSO ಆರೋಪಿಗಿಂತ ಇದು ಸಾವಿರ ಪಟ್ಟು ಮೇಲು': ಗೃಹ ಸಚಿವ
ಬೆಂಗಳೂರು: ನೀಟ್ ಯುಜಿ ಪರೀಕ್ಷೆ ಅಕ್ರಮಕ್ಕೆ ಸಂಬಂಧಿಸಿದಂತೆ ಹೋರಾಟಗಳು ತಾರ್ಕಿಕ ಅಂತ್ಯ ಕಂಡರೂ ಸಹಿತ ಕರ್ನಾಟಕ ರಾಜಕೀಯ ಆರೋಪ ಪ್ರತ್ಯಾರೋಪಗಳು ಮತ್ತೊಂದು ಹಂತಕ್ಕೆ ತಲುಪಿವೆ. 'ನಾನು ಗೃಹ ಸಚಿವನಾಗಿ ಅಧಿಕಾರ ಸ್ವೀಕರಿಸಿ ಕೆಲವೇ ವಾರಗಳಾಗಿವೆ. ಅಷ್ಟರಲ್ಲೇ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರಿಗೆ ಭಯ ಹಾಗೂ ಹತಾಶೆ ಶುರುವಾಗಿದೆ' ಎಂದು ತಮ್ಮ ವಿರುದ್ಧ ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದ ವಿಜಯೇಂದ್ರ ವಿರುದ್ಧ ಗೃಹ ಸಚಿವ ಪ್ರಿಯಾಂಕ್ ಖರ್ಗೆ ತಿರುಗೇಟು ಕೊಟ್ಟರು.
ಏಕವಚನದಲ್ಲಿ ವಾಗ್ದಾಳಿ ನಡೆಸಿದ ವಿಜಯೇಂದ್ರ ಅವರ ವಿಡಿಯೋ ಹಂಚಿಕೊಂಡು ಎಕ್ಸ್ ಪೋಸ್ಟ್ ಮಾಡಿರುವ ಪ್ರಿಯಾಂಕ್ ಖರ್ಗೆ, ಅವರಿಗೆ ಹತಾಶ ಶುರುವಾಗಿರುವುದು ವಿಜಯೇಂದ್ರ ಘನತೆಗೆ ತಕ್ಕದ್ದೇ? ಎಂಬುದನ್ನು ನಾನು ಪ್ರಶ್ನಿಸಲು ಹೋಗುವುದಿಲ್ಲ. ಪಿಎಸ್ಐ ನೇಮಕಾತಿ ಹಗರಣದಲ್ಲಿ ಸಿಕ್ಕಿಬಿದ್ದ ನೋವು ಅವರಲ್ಲಿ ಇನ್ನೂ ಮಾಸಿದಂತೆ ಕಾಣುತ್ತಿಲ್ಲ. ವಿಜಯೇಂದ್ರ ನನಗಿಂತ ಮೂರು-ನಾಲ್ಕು ವರ್ಷ ಹಿರಿಯರಾಗಿರಬಹುದು. ಆದರೆ ವಯಸ್ಸಿನಲ್ಲಿ ಹಿರಿಯನಾದ ತಕ್ಷಣ ಬಾಯಿಗೆ ಬಂದಂತೆ ಮಾತನಾಡುವ ಪರವಾನಗಿ ಸಿಕ್ಕಂತಲ್ಲ ಎಂದು ಗುಡುಗಿದ್ದಾರೆ.

POCSO ಆರೋಪಿಗಿಂತ ಸಾವಿರ ಪಟ್ಟು ಮೇಲು
ನಿಷ್ಪ್ರಯೋಜಕ ಅಥವಾ ಅಸಮರ್ಥ ಎಂದು ಕೈಲಾಗದ ವಿರೋಧ ಪಕ್ಷ ಬಿಜೆಪಿಯಿಂದ ಟೀಕೆ ಕೇಳುವುದು POCSO ಪ್ರಕರಣದ ಆರೋಪಿ ಆಗಿರುವುದಕ್ಕಿಂತ ಸಾವಿರ ಪಟ್ಟು ಮೇಲು ಎಂದು ನಾನು ಭಾವಿಸುತ್ತೇನೆ ಎನ್ನವು ಮೂಲಕ ಖರ್ಗೆ ಅವರು, ಮಾಜಿ ಸಿಎಂ ಯಡಿಯೂರಪ್ಪನವರ ಮೇಲೆ ದಾಖಲಾಗಿದ್ದ ಪೋಕ್ಸೋ ಪ್ರಕರಣವನ್ನು ಎಳೆತಂದು ತಿರುಗೇಟು ನೀಡಿದ್ದಾರೆ.
ಸಾಮಾನ್ಯ ಜ್ಞಾನ ಎಲ್ಲರ ಮನೆಯಲ್ಲಿ ಅರಳುವ ಹೂವಲ್ಲ ಎಂಬ ವಾಸ್ತವಕ್ಕೆ ತಾವೂ ಸಾಕ್ಷಿಯಾಗುತ್ತಿರುವಂತಿದೆ. ಮಾತುಗಳಿಗೆ ಸ್ವಯಂ ಮಿತಿ ಇರಬೇಕು. ಇಲ್ಲವಾದರೆ ಹೇಗೆ ಮಾತನಾಡಬೇಕೆಂಬುದನ್ನು ಕಲಿಸಬೇಕಾದ ಪರಿಸ್ಥಿತಿ ಬರುತ್ತದೆ ಎಂದು ಅವರು ಎಚ್ಚರಿಕೆ ನೀಡಿದರು.
ಅವನು ಯಾರ್ ರೀ ಪ್ರಿಯಾಂಕ್ ಖರ್ಗೆ!: ವಿಜಯೇಂದ್ರ
ನೀಟ್ ಪ್ರತಿಭಟನೆಗಳು ಬೆಂಗಳೂರಿನಲ್ಲಿ ಸದ್ದು ಮಾಡಿದ್ದು, ಪ್ರತಿಭಟನೆ ವೇಳೆ ನಡೆದ ಅಹಿತಕರ ಘಟನೆಗಳ ವಿರುದ್ಧ ಬಿ.ವೈ.ವಿಜಯೇಂದ್ರ ಹೇಳಿಕೆ ನೀಡಿದ್ದರು. ಈ ವೇಳೆ ಗೃಹ ಸಚಿವರ ವಿರುದ್ಧ ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದರು. 'ಅವನು ಯಾರ್ ರೀ ಪ್ರಿಯಾಂಕ್ ಖರ್ಗೆ. ಅವನಿಗೆ ಧಮ್ಮು, ತಾಕತ್ತು ಇದ್ದರೆ ಬೆಂಗಳೂರಿನಲ್ಲಿ ಏನು ನಡೆಯುತ್ತಿದೆ. ಅದನ್ನು ಮೊದಲು ನೋಡಲಿ. ನೀಟ್ ವಿದ್ಯಾರ್ಥಿಗಳ ಪ್ರತಿಭಟನೆ ನೆಪದಲ್ಲಿ ಉಮರ್ ಖಾಲಿದ್ ಪರ ಘೋಷಣೆ ಘೋಷಣೆ ಕೂಗಲಾಗುತ್ತಿದೆ. ನಾಲಾಯಕ್ ಗೃಹ ಸಚಿವರು ಎಲ್ಲಿ ಮಲಗಿದ್ದಾರೆ ನೋಡಿ!. ಈ ರೀತಿ ಬೆಂಕಿ ಹಚ್ಚೋಕೆ ಪ್ರಿಯಾಂಕ್ ಖರ್ಗೆ ಅಂಥವರು ಇನ್ನೊಂದಿಬ್ಬರು ಹುಟ್ಟುಕೊಂಡರೆ ಸಾಕು ದೇಶ ಹಾಳಾಗುತ್ತದೆ' ಎಂದು ಹೇಳಿದ್ದರು.
'ದೇಶದ ಭವಿಷ್ಯ ರೂಪಿಸುವ ಯುವ ಶಕ್ತಿಗೆ ತೊಂದರೆ ಆಗಬಾರದು ಎಂಬ ಕಾರಣಕ್ಕೆ ಬಿಜೆಪಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ರಾಜೀನಾಮೆ ನೀಡಿದ್ದಾರೆ. ಈ ಬೆಳವಣಿಗೆಯು ಕಾಂಗ್ರೆಸ್ ಆಗಲಿ, ಸಿಜೆಪಿ ಪಕ್ಷದ ಗೆಲುವಲ್ಲ' ಎಂದು ವಿಜಯೇಂದ್ರ ಅವರು ಮಾತನಾಡಿದ್ದರು.


Click it and Unblock the Notifications
