ಬೆಂಗಳೂರು ಕಂಬಳಕ್ಕೆ ಕ್ಷಣಗಣನೆ: ಕಂಬಳದ ಕರೆ ನಿರ್ಮಾಣದ ಸ್ಥಳ ಪರಿಶೀಲಿಸಿದ ನಿಯೋಗ
ಬೆಂಗಳೂರು, ಸೆಪ್ಟೆಂಬರ್ 22: ಬೆಂಗಳೂರಿನಲ್ಲಿ ಇತಿಹಾಸ ಪ್ರಸಿದ್ಧ ಕಂಬಳ ಆಯೋಜಿಸಲಾಗುತ್ತಿದ್ದು, ನವೆಂಬರ್ 25ರಂದು ಇದೇ ಮೊದಲ ಬಾರಿಗೆ ಬೆಂಗಳೂರಿನಲ್ಲಿ ಬೆಂಗಳೂರು ಕಂಬಳ ನಡೆಯಲಿದೆ.'ಜಯಚಾಮರಾಜೇಂದ್ರ ಒಡೆಯರ್ ಜೋಡುಕರೆ ಕಂಬಳ'ಕ್ಕೆ ಸಕಲ ಸಿದ್ಧತೆಗಳು ಆರಂಭವಾಗಿದೆ.
ಬೆಂಗಳೂರಿನ ಅರಮನೆ ಮೈದಾನದಲ್ಲಿ 'ಜಯಚಾಮರಾಜೇಂದ್ರ ಒಡೆಯರ್ ಜೋಡುಕರೆ ಕಂಬಳ' ನಡೆಯಲಿದ್ದು, ಉಪ್ಪಿನಂಗಡಿ ವಿಜಯ- ವಿಕ್ರಮ ಜೋಡುಕರೆ ಕಂಬಳದ ರೂವಾರಿ ಹಾಗೂ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಈ ಕಂಬಳದ ಉಸ್ತುವಾರಿ ವಹಿಸಿದ್ದಾರೆ. ಇಂದು ಶಾಸಕ ಅಶೋಕ್ ಕುಮಾರ್ ರೈ ನೇತೃತ್ವದ ಕಂಬಳ ನಿಯೋಗವು ಇಂದು ಅರಮನೆ ಮೈದಾನಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಅರಮನೆ ಮೈದಾನಕ್ಕೆ ಮಾಡಬೇಕಾದ ಕಂಬಳ ಕೆರೆಯ ಜಾಗವನ್ನು ನಿಯೋಗವು ವೀಕ್ಷಣೆ ಮಾಡಿದ್ದಾರೆ. ಕಂಬಳದ ಕರೆ ನಿರ್ಮಾಣಕ್ಕಾಗಿ ಸ್ಥಳವನ್ನು ಗುರುತಿಸುವ ಕಾರ್ಯ ಪೂರ್ಣಗೊಂಡಿದ್ದು ಮುಂದಿನ ವಾರ ಕರೆ ನಿರ್ಮಾಣ ಕಾರ್ಯ ನಡೆಯಲಿದೆ ಎಂದು ಶಾಸಕ ಅಶೋಕ್ ಕುಮಾರ್ ರೈ ತಿಳಿಸಿದ್ದಾರೆ.
ಈ ಸಂಧರ್ಭದಲ್ಲಿ ಖ್ಯಾತ ಸಂಗೀತ ನಿರ್ದೇಶಕ ಗುರುಕಿರಣ್, ಬೆಂಗಳೂರು ತುಳು ಒಕ್ಕೂಟದ ಅಧ್ಯಕ್ಷ ಸುಂದರ್ ರಾಜ್ ರೈ, ಉದ್ಯಮಿಗಳಾದ ಗುಣರಂಜನ್ ಶೆಟ್ಟಿ, ಮಂಗಳೂರು ಲಿಕ್ಕರ್ ಎಸೋಶಿಯೇಶನ್ ಉಪಾಧ್ಯಕ್ಷರಾದ ಕರುಣಾಕರ್ ಹೆಗ್ಡೆ, ಅಕ್ಷಯ ರೈ, ದಂಬೆಕಾನ ಉಮಾನಾಥ ಶೆಟ್ಟಿ ಪರ್ನೆ, ಮುರಳೀಧರ ರೈ ಮಠಂತಬೆಟ್ಟು, ರಾಜ್‌ಕುಮಾರ್ ರೈ, ರಾಕೇಶ್ ರೈ ಕುದ್ರಾಡಿ, ಪ್ರಶಾಂತ್ ರೈ ಕೈಕಾರ, ಮಂಜುನಾಥ ಕನ್ನಾಡಿ, ರಾಜೇಶ್ ಶೆಟ್ಟಿ ಕೋಡಿಂಬಾಡಿ, ಯತೀಶ್ ಕನಕಪುರ, ಆದರ್ಶ ಶೆಟ್ಟಿ, ಅಶ್ವಿನ್ ಪೂಜಾರಿ, ದೀಕ್ಷಿತ್ ರೈ ಮೊದಲಾದವರು ಉಪಸ್ಥಿತರಿದ್ದರು.

ಬೆಂಗಳೂರಿನಲ್ಲೇ ಕಂಬಳವನ್ನು ನಡೆಸಲು ಒಂದು ತಂಡವೇ ಸಿದ್ಧವಾಗಿದೆ. ಕಂಬಳಕ್ಕೆ ಸುಮಾರು 10 ಲಕ್ಷಕ್ಕೂ ಅಧಿಕ ಮಂದಿ ಸೇರುವ ನಿರೀಕ್ಷೆಯಿದ್ದು, ಏಕಕಾಲದಲ್ಲಿ 4 ಲಕ್ಷಕ್ಕೂ ಹೆಚ್ಚು ಜನರು ಕಂಬಳ ವೀಕ್ಷಿಸುವಂತೆ ಅನುಕೂಲ ಮಾಡಲು ಸಿದ್ಧತೆ ನಡೆಸಲಾಗುತ್ತಿದೆ.
ಕರಾವಳಿಯ ಜನಪ್ರಿಯ ಕ್ರೀಡೆಗಳು, ಆಚರಣೆಗಳು ರಾಜಧಾನಿ ಬೆಂಗಳೂರಿಗೆ ಈಗಾಗಲೇ ಕಾಲಿಟ್ಟಿವೆ. ಯಕ್ಷಗಾನ ಸೇರಿದಂತೆ ವಿವಿಧ ರೀತಿಯ ಸಾಂಕ್ಕೃತಿಕ ಕಾರ್ಯಕ್ರಮಗಳನ್ನು ಕೇವಲ ಕರಾವಳಿಯಲ್ಲಿ ಅಲ್ಲದೇ ಬೆಂಗಳೂರಿನಲ್ಲೂ ಪ್ರದರ್ಶನಗೊಳ್ಳುತ್ತಿದೆ. ಇದರ ಜೊತೆಗೆ ಬೆಂಗಳೂರು ಹಾಗೂ ತುಳುನಾಡಿನ ನಂಟಿನ ಇನ್ನೊಂದು ಐತಿಹಾಸಿಕ ಕ್ಷಣ ಕಂಬಳ ಓಟಕ್ಕೆ ಸಿಲಿಕಾನ್ ಸಿಟಿ ಸಾಕ್ಷಿಯಾಗಲಿದೆ.












Click it and Unblock the Notifications