ಬೆಂಗಳೂರಲ್ಲಿ ಈ ಮನೆಗಳ ಬೆಲೆ ಭರ್ಜರಿ ಹೆಚ್ಚಳ: ವಿಶ್ವದಲ್ಲೇ 4ನೇ ಸ್ಥಾನ!
ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಭೂಮಿ ಬೆಲೆ ಹೆಚ್ಚಳವಾಗುತ್ತಲ್ಲೇ ಸಾಗುತ್ತಿದೆ. ಒಂದರ್ಥದಲ್ಲಿ ಚಿನ್ನ ಮತ್ತು ಭೂಮಿಯ ಬೆಲೆ ಸರಿಸಮಾನವಾಗಿ ಬೆಳೆಯುತ್ತಿದೆ ಎಂದೇ ಹೇಳಬಹುದು. ಬೆಂಗಳೂರು ಅಭಿವೃದ್ಧಿಯ ಮುಂಚೂಣಿಯಲ್ಲಿ ಮುಂಬೈ ಮತ್ತು ದೆಹಲಿಯಂತಹ ಮಹಾನಗರಗಳನ್ನೂ ಹಿಂದಿಕ್ಕಿ ಮುಂದಕ್ಕೆ ಸಾಗಿದೆ. ದೇಶದಲ್ಲಿ ದುಬಾರಿ ಭೂಮಿ ಅಥವಾ ಜಾಗ ಇರುವ ಪ್ರದೇಶಗಳಲ್ಲಿ ಮುಂಬೈ ಮುಂಚೂಣಿಯಲ್ಲಿದೆ. ಅದೇ ರೀತಿ ದೆಹಲಿಯಲ್ಲೂ ಮನೆ ಬಾಡಿಗೆಗಳು ದುಬಾರಿಯಾಗಿ ಹಲವು ವರ್ಷಗಳೇ ಕಳೆದಿವೆ. ಆ ರೀತಿ ನೋಡಿದರೆ ಬೆಂಗಳೂರಿನಷ್ಟು ವಿಸ್ತಾರವಾದ ಮೆನೆಗಳು ಹಾಗೂ ಬಾಡಿಗೆ ದರ ಸಹ ಮುಂಬೈ ಮತ್ತು ದೆಹಲಿಯಂತಹ ನಗರಗಳಲ್ಲಿ ಇಲ್ಲ. ಬೆಂಗಳೂರಿಗಿಂತ ಎರಡು ಪಟ್ಟು ಹೆಚ್ಚಳವಾಗಿದೆ. ಇದೀಗ ಬೆಂಗಳೂರಿನಲ್ಲಿ ಪ್ರೀಮಿಯಂ ಮನೆಗಳ (ಐಷಾರಾಮಿ) ಬೆಲೆಯು ಭರ್ಜರಿ ಹೆಚ್ಚಳವಾಗಿದೆ. ಅಲ್ಲದೇ ಬಾಡಿಗೆ ಬೆಲೆಗಳೂ ಸಹ ಹೆಚ್ಚಾಗುತ್ತಿದೆ.
ಬೆಂಗಳೂರು ಭಾರತದಲ್ಲೇ ರಿಯಲ್ ಎಸ್ಟೇಟ್‌ನಲ್ಲಿ ಮುಂಚೂಣಿಯಲ್ಲಿದೆ. ಇದೀಗ ದೇಶದಲ್ಲಿ ಮಾತ್ರವಲ್ಲದೆ ವಿಶ್ವದಲ್ಲೇ ದುಬಾರಿ ಬೆಲೆಗೆ ತಲುಪಿದೆ. ನೈಟ್ ಫ್ರಾಂಕ್ ಪ್ರಕಾರ ಪ್ರೈಮ್ ಹೌಸಿಂಗ್ ಪ್ರಾಪರ್ಟಿಗಳ ಬೆಲೆ ಏರಿಕೆಯಲ್ಲಿ ಗಾರ್ಡನ್ ಸಿಟಿ ಖ್ಯಾತಿಯ ಬೆಂಗಳೂರು ಮುಂಚೂಣಿಯಲ್ಲಿದೆ.

ದೇಶದ ವಾಣಿಜ್ಯ ನಗರಿ ಮುಂಬೈ ಮಹಾನಗರವನ್ನೇ ಬೆಂಗಳೂರು ಹಿಂದಕ್ಕೆ ಸರಿಸಿದೆ. ಜಾಗತಿಕವಾಗಿ ದುಬಾರಿ ಬೆಲೆಯ ಮನೆಗಳಿರುವ 46 ನಗರಗಳ ಪಟ್ಟಿಯಲ್ಲಿ ಬೆಂಗಳೂರಿಗೆ 4ನೇ ಸ್ಥಾನ ಸಿಕ್ಕಿದೆ. ಮುಂಬೈ 6ನೇ ಸ್ಥಾನದಲ್ಲಿದ್ದು ದೇಶದ ರಾಜಧಾನಿ ದೆಹಲಿ 15ನೇ ಸ್ಥಾನಕ್ಕೆ ಕುಸಿತ ಕಂಡಿದೆ.
ಬೆಂಗಳೂರು ಹಾಗೂ ಬೆಂಗಳೂರಿನ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಅಭಿವೃದ್ಧಿ ಯೋಜನೆಗಳು ಭರ್ಜರಿಯಾಗಿ ಸಾಗಿರುವ ಕಾರಣಕ್ಕೆ ಬೆಂಗಳೂರಿನಲ್ಲಿ ಈಗಾಗಲೇ ಭೂಮಿಯ ಬೆಲೆ ದುಬಾರಿಯಾಗಿದೆ. ಇದರೊಂದಿಗೆ ಇದೀಗ ಪ್ರೀಮಿಯಂ ಮನೆಗಳ ಬೆಲೆಯೂ ಹೆಚ್ಚಳವಾಗಿರುವುದರಿಂದ ಮುಂದಿನ ದಿನಗಳಲ್ಲಿ ಭೂಮಿ ಹಾಗೂ ಮನೆಗಳ ಬೆಲೆ ಇನ್ನಷ್ಟು ದುಬಾರಿಯಾದರೂ ಅಚ್ಚರಿ ಇಲ್ಲ ಎಂದೇ ಹೇಳಲಾಗುತ್ತಿದೆ.
ನೈಟ್ ಫ್ರಾಂಕ್‌ನ ಪ್ರೈಮ್ ಗ್ಲೋಬಲ್ ಸಿಟೀಸ್ ಇಂಡೆಕ್ಸ್ 2025ರ ತ್ರೈಮಾಸಿಕ 2(ಏಪ್ರಿಲ್-ಜೂನ್) ವರದಿಯಲ್ಲಿ ಬೆಂಗಳೂರಿನಲ್ಲಿ ಮನೆಗಳ ಮೌಲ್ಯ ಹೆಚ್ಚಾಗಿರುವ ಬಗ್ಗೆ ವರದಿ ಮಾಡಲಾಗಿದೆ. ಸಿಯೋಲ್ ನಗರ ಪ್ರೈಮ್ ರೆಸಿಡೆನ್ಶಿಯಲ್ ಪ್ರಾಪರ್ಟಿಗಳಲ್ಲಿ ಶೇ. 25.2 ರಷ್ಟು ವಾರ್ಷಿಕ ಬೆಲೆ ಏರಿಕೆ ಆಗುವ ಮೂಲಕ ಮೊದಲ ಸ್ಥಾನದಲ್ಲಿದೆ ಎಂದು ಹೇಳಲಾಗಿದೆ. ಜಪಾನ್‌ನ ಟೋಕಿಯೊ ಶೇ. 16.3 ರಷ್ಟು ಏರಿಕೆಯೊಂದಿಗೆ ಎರಡನೇ ಸ್ಥಾನದಲ್ಲಿದ್ದರೆ, ದುಬೈ ಶೇ. 15.8 ರಷ್ಟು ವಾರ್ಷಿಕ ಬೆಲೆ ಏರಿಕೆಯೊಂದಿಗೆ ಮೂರನೇ ಸ್ಥಾನ ಪಡೆದುಕೊಂಡಿದೆ. ಬೆಂಗಳೂರು ನಾಲ್ಕನೇ ಸ್ಥಾನದಲ್ಲಿದೆ.
ಮೂರು ನಗರಗಳಿಗೆ ಧಮಾಕ!
ಇನ್ನು ಬೆಂಗಳೂರು ಮಾತ್ರವಲ್ಲದೆ ಬೆಂಗಳೂರಿನಲ್ಲಿ ಇನ್ನೆರಡು ನಗರಗಳು ಆಸ್ತಿ ವಿಚಾರದಲ್ಲಿ ಮುಂಚೂಣಿಯಲ್ಲಿವೆ. ಭಾರತದಲ್ಲಿ, ಬೆಂಗಳೂರಿನ ಪ್ರೈಮ್ ಹೌಸಿಂಗ್ ಪ್ರಾಪರ್ಟಿಗಳ ಬೆಲೆಯಲ್ಲಿ ಶೇ. 10.2 ರಷ್ಟು ಹೆಚ್ಚಳವಾಗಿದೆ. ಈ ಮೂಲಕ ದೇಶದಲ್ಲೇ ಮೊದಲ ಸ್ಥಾನದಲ್ಲಿದೆ. ಮುಂದುವರಿದು ಮುಂಬೈ(ಶೇ. 8.7) ಹಾಗೂ ದೆಹಲಿ (ಶೇ. 3.9) ಭಾಗದಲ್ಲಿ ಪ್ರೀಮಿಯಂ ಪ್ರಾಪರ್ಟಿಗಳ ಬೆಲೆಯು ಭರ್ಜರಿ ಹೆಚ್ಚಳವಾಗಿದೆ.












Click it and Unblock the Notifications