ಜನವರಿ 25 ಕರ್ನಾಟಕ ಬಂದ್ : ಜ.18 ಕ್ಕೆ ಪೂರ್ವಭಾವಿ ಸಭೆ
ಬೆಂಗಳೂರು, ಜನವರಿ 16: ಕಳಸಾ ಬಂಡೂರಿ, ಮಹಾದಾಯಿ ನದಿ ವಿವಾದ ಹಾಗೂ ಕನ್ನಡಿಗರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವ ಗೋವಾ ಸಚಿವರ ಹೇಳಿಕೆ ಖಂಡಿಸಿ ಈ ತಿಂಗಳ 25 ರಂದು ಕರೆದಿರುವ ಕರ್ನಾಟಕ ಬಂದ್ ಬಗ್ಗೆ ಸಮಗ್ರ ಚರ್ಚೆ ನಡೆಸಲು ಜ.18 ರಂದು ಪೂರ್ವಭಾವಿ ಸಭೆ ನಡೆಯಲಿದೆ.
ನಗರದ ವುಡ್ ಲ್ಯಾಂಡ್ಸ್ ಹೋಟೆಲ್ ನಲ್ಲಿ ನಡೆಯುವ ಸಭೆಯಲ್ಲಿ ಕನ್ನಡಪರ ಸಂಘಟನೆಗಳ ಮುಖ್ಯಸ್ಥರು, ಸಾಹಿತಿಗಳು, ಲಾರಿ, ಆಟೋ ಮಾಲೀಕರು, ಚಿತ್ರರಂಗದ ಕಲಾವಿದರು ಭಾಗವಹಿಸಲಿದ್ದಾರೆ ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯಮಂಡಳಿ ಅಧ್ಯಕ್ಷ ಸಾ.ರಾ. ಗೋವಿಂದು ತಿಳಿಸಿದ್ದಾರೆ.
ಕನ್ನಡ ಒಕ್ಕೂಟದ ಅಧ್ಯಕ್ಷ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಕರ್ನಾಟಕ ಬಂದ್ ಗೆ ಕರೆ ನೀಡಿದ್ದು, ಬಂದ್ ಯಶಸ್ವಿಗೊಳಿಸಲು ಕೈಗೊಳ್ಳಬೇಕಾದ ಬಗ್ಗೆ ಚರ್ಚೆ ನಡೆಯಲಿದೆ. ಬಂದ್ ಯಶಸ್ವಿಗೆ ಅಂದು ಚಲನಚಿತ್ರೋದ್ಯಮ ಚಟುವಟಿಕೆ ಸ್ಥಗಿತೊಳ್ಳಲಿದೆ ಎಂದು ತಿಳಿಸಿದ್ದಾರೆ.

ಗೋವಾ ಜಲಸಂಪನ್ಮೂಲ ಸಚಿವ ಕನ್ನಡಿಗರ ಬಗ್ಗೆ ಲಘುವಾಗಿ ಮಾತನಾಡಿದ್ದಾರೆ. ಅವರನ್ನು ಸಚಿವ ಸಂಪುಟದಿಂದ ಕೈಬಿಡಬೇಕು ಎಂದು ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಅವರನ್ನು ಒತ್ತಾಯಿಸಿದರು.
ಮಹದಾಯಿ ನದಿ ನೀರಿನ ಹಂಚಿಕೆ ಕುರಿತಂತೆ ಪ್ರಧಾನಿ ನರೇಂದ್ರಮೋದಿಯವರು ಮಧ್ಯಸ್ಥಿಕೆ ವಹಿಸಿ ಕರ್ನಾಟಕ ರಾಜ್ಯಕ್ಕೆ ನೀರು ಹರಿಸುವಂತೆ ಗೋವಾಗೆ ತಾಕೀತು ಮಾಡಬೇಕೆಂದು ಒತ್ತಾಯಿಸಿದರು.











Click it and Unblock the Notifications