ನಾಳೆಯಿಂದ 18 ವರ್ಷ ಮೇಲ್ಪಟ್ಟವರಿಗೆ ಮುನ್ನೆಚ್ಚರಿಕೆ ಡೋಸ್: ಸಚಿವ ಸುಧಾಕರ್
ಬೆಂಗಳೂರು, ಏಪ್ರಿಲ್ 9: ಕೇಂದ್ರ ಸರಕಾರ 18 ವರ್ಷ ಮೇಲ್ಪಟ್ಟ ವಯಸ್ಸಿನ ಎಲ್ಲರಿಗೂ ಕೋವಿಡ್ ಸೋಂಕು ಹರಡದಂತೆ ಮುನ್ನೆಚ್ಚರಿಕೆಯಾಗಿ ಬೂಸ್ಟರ್ ಡೋಸ್ ಲಸಿಕೆ ನೀಡುವ ಅವಕಾಶ ಕಲ್ಪಿಸಿದೆ. ಏಪ್ರಿಲ್ 10, ನಾಳೆಯಿಂದಲೇ ಈ ವಯೋಮಾನದವರು ಲಸಿಕೆ ಪಡೆಯುವ ಅವಕಾಶ ಇದೆ. ಕೇಂದ್ರ ಸರಕಾರದ ಈ ಕ್ರಮವನ್ನು ಪ್ರಶಂಸಿರುವ ರಾಜ್ಯ ಆರೋಗ್ಯ ಸಚಿವ ಡಾ. ಕೆ ಸುಧಾಕರ್ ಅವರು ಕೋವಿಡ್ ವಿರುದ್ಧದದ ಹೋರಾಟಕ್ಕೆ ಇದರಿಂದ ಇನ್ನಷ್ಟು ವೇಗ ಸಿಕ್ಕಿದೆ ಎಂದಿದ್ದಾರೆ.
ರಾಜ್ಯದಲಿ 18 ವರ್ಷ ಮೇಲ್ಪಟ್ಟವರು ಏಪ್ರಿಲ್ 10 ರಿಂದ ಖಾಸಗಿ ಲಸಿಕಾ ಕೇಂದ್ರಗಳಲ್ಲಿ ಮುನ್ನೆಚ್ಚರಿಕೆ ಡೋಸ್ ಪಡೆಯಬಹುದು. ಎರಡನೇ ಡೋಸ್ ಪಡೆದು 9 ತಿಂಗಳು ಪೂರ್ಣವಾಗಿದ್ದಲ್ಲಿ, ಈ ಹೆಚ್ಚುವರಿ ಡೋಸ್ ಪಡೆಯಬಹುದು ಎಂದು ಸಚಿವರು ತಿಳಿಸಿದ್ದಾರೆ.
ದೇಶದಲ್ಲಿ ಈವರೆಗೆ 185 ಕೋಟಿ ಡೋಸ್ ಲಸಿಕೆ ನೀಡಲಾಗಿದೆ. ರಾಜ್ಯದಲ್ಲಿ ಈವರೆಗೆ 10.47 ಕೋಟಿ ಡೋಸ್ ಲಸಿಕೆ ನೀಡಲಾಗಿದೆ. ಇದರ ಜೊತೆಗೆ, ಆರೋಗ್ಯ ಕಾರ್ಯಕರ್ತರು, ಮುಂಚೂಣಿ ಕಾರ್ಯಕರ್ತರು, 60 ವರ್ಷ ಮೇಲ್ಪಟ್ಟ ವಯಸ್ಸಿನ ನಾಗರಿಕರಿಗೆ ಮುನ್ನೆಚ್ಚರಿಕೆ ಡೋಸ್ ನೀಡಲಾಗುತ್ತಿದೆ ಎಂದು ಸಚಿವರು ವಿವರಿಸಿದ್ದಾರೆ.

ರಾಜ್ಯದಲ್ಲಿ ಈವರೆಗೆ, 12-14 ವರ್ಷ ವಯೋಮಾನದವರಿಗೆ 13,27,985 ಮೊದಲ ಡೋಸ್ (65.6%), 15-17 ವಯೋಮಾನದವರಿಗೆ 25,09,276 ಮೊದಲ ಡೋಸ್ (79%) ಹಾಗೂ 20,48,576 ಎರಡನೇ ಡೋಸ್ (64.5%) ನೀಡಲಾಗಿದೆ. ಈವರೆಗೆ 15 ವರ್ಷ ಮೇಲ್ಪಟ್ಟ ವಯೋಮಾನದವರಿಗೆ 5,23,05,424 ಮೊದಲ ಡೋಸ್ (100.4%) ಹಾಗೂ 4,97,08,909 ಎರಡನೇ ಡೋಸ್ (95.4%) ನೀಡಲಾಗಿದೆ. 18+ ವಯೋಮಾನದವರಿಗೆ 4,97,96,148 ಮೊದಲ ಡೋಸ್ (101.8%) ಹಾಗೂ 4,76,60,333 ಎರಡನೇ ಡೋಸ್ (97.4%) ನೀಡಲಾಗಿದೆ. ಈವರೆಗೆ 14,24,433 (57.6%) ಮುನ್ನೆಚ್ಚರಿಕೆ ಲಸಿಕೆ ಡೋಸ್ ನೀಡಲಾಗಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ ಸುಧಾಕರ್ ಮಾಹಿತಿ ನೀಡಿದ್ದಾರೆ.
ಕೇಂದ್ರ ಸರ್ಕಾರ ಮಾಡಿಕೊಟ್ಟ ಈ ಅವಕಾಶವನ್ನು ಎಲ್ಲರೂ ತಪ್ಪದೇ ಬಳಸಿಕೊಂಡು ಮುನ್ನೆಚ್ಚರಿಕೆ ಲಸಿಕೆ ಪಡೆಯಬೇಕು. ಎರಡು ಡೋಸ್‍ಗಳಂತೆ ಮುನ್ನೆಚ್ಚರಿಕೆ ಡೋಸ್ ಕೂಡ ಅಗತ್ಯ ಎಂಬುದನ್ನು ಮನವರಿಕೆ ಮಾಡಿಕೊಳ್ಳಬೇಕು. ಜೊತೆಗೆ ಕೋವಿಡ್ ಸುರಕ್ಷತಾ ಕ್ರಮಗಳನ್ನೂ ಪಾಲಿಸಬೇಕು ಎಂದು ಸಚಿವರು ಕೋರಿದ್ದಾರೆ.

ಕೇಂದ್ರ ಸರಕಾರ ಈ ಮುಂಚೆಯೇ 60 ವರ್ಷ ಮೇಲ್ಪಟ್ಟ ವಯೋಮಾನದವರಿಗೆ ಉಚಿತವಾಗಿ ಬೂಸ್ಟರ್ ಡೋಸ್ ಹಾಕಿಸುವ ಪ್ರಕ್ರಿಯೆ ಚಾಲನೆಗೊಳಿಸಿದೆ. ಅದು ನೀಡಿರುವ ಮಾಹಿತಿ ಪ್ರಕಾರ ದೇಶಾದ್ಯಂತ 2.4 ಕೋಟಿ ಜನರಿಗೆ ಈಗಾಗಲೇ ಮುನ್ನೆಚ್ಚರಿಕೆ ಕೋವಿಡ್ ಲಸಿಕೆ ನೀಡಲಾಗಿರುವುದು ತಿಳಿದುಬಂದಿದೆ. ಹಿರಿಯ ನಾಗರಿಕರಷ್ಟೇ ಅಲ್ಲ, ಆರೋಗ್ಯ ಕಾರ್ಯಕರ್ತರು, ಮುಂಚೂಣಿ ಕಾರ್ಯಕರ್ತರಿಗೆ ಆದ್ಯತೆಯ ಮೇರೆಗೆ ಬೂಸ್ಟರ್ ಡೋಸ್ ಲಸಿಕೆ ಕೊಡಲಾಗುತ್ತಿದೆ.
ಇದೀಗ 18 ವರ್ಷ ಮೇಲ್ಪಟ್ಟ ಜನರಿಗೂ ಹೆಚ್ಚುವರಿ ಲಸಿಕೆ ಹಾಕಿಸುವ ಅವಕಾಶ ಕಲ್ಪಿಸಲಾಗಿದೆ. ಗಮನಿಸಬೇಕಾದ ಅಂಶವೆಂದರೆ, ಈಗಾಗಲೇ ಎರಡು ಡೋಸ್ ಲಸಿಕೆ ಹಾಕಿಸಿಕೊಂಡವರಿಗೆ ಮುನ್ನೆಚ್ಚರಿಕೆ ಡೋಸ್ ಆಗಿ ಅದೇ ಲಸಿಕೆ ಹಾಕಿಸಿಕೊಳ್ಳಬೇಕು. ಕೋವಿಶೀಲ್ಡ್ ಹಾಕಿಸಿಕೊಂಡವರು ಬೂಸ್ಟರ್ ಡೋಸ್ ಆಗಿ ಅದೇ ಕೋವಿಶೀಲ್ಡ್ ಲಸಿಕೆಯನ್ನೇ ಹಾಕಿಸಿಕೊಳ್ಳಬೇಕು.

ಇದೇ ವೇಳೆ, ಕೋವಿಶೀಲ್ಡ್ ಲಸಿಕೆಯ ಒಂದು ಬೂಸ್ಟರ್ ಡೋಸ್‌ಗೆ 600 ರೂ. ಬೆಲೆ ನಿಗದಿ ಮಾಡಲಾಗಿದೆ. ಸೀರಂ ಇನ್ಸ್‌ಟಿಟ್ಯೂಟ್ ಸಂಸ್ಥೆ ನಿನ್ನೆ ಇದನ್ನು ಅಧಿಕೃತವಾಗಿ ಪ್ರಕಟಿಸಿದೆ.
ಭಾರತ್ ಬಯೋಟೆಕ್ ಸಂಸ್ಥೆಯ ಕೋವ್ಯಾಕ್ಸಿನ್ ಲಸಿಕೆಯ ಬೂಸ್ಟರ್ ಡೋಸ್‌ನ ಬೆಲೆ ಎಷ್ಟು ಎಂಬುದು ಇನ್ನೂ ನಿಗದಿಯಾಗಿಲ್ಲ. ಖಾಸಗಿ ಆಸ್ಪತ್ರೆಗಳಲ್ಲಿ ಕೋವ್ಯಾಕ್ಸಿನ್‌ನ ಒಂದು ಡೋಸ್‌ಗೆ 1,400 ರೂ ಬೆಲೆ ಇದೆ. ಈಗ ಮುನ್ನೆಚ್ಚರಿಕೆ ಡೋಸ್‌ನ ಬೆಲೆ ಒಂದು ಸಾವಿರ ರೂ ಗಿಂತ ಕಡಿಮೆ ಇರುವ ಸಾಧ್ಯತೆ ಇಲ್ಲ.
(ಒನ್ಇಂಡಿಯಾ ಸುದ್ದಿ)












Click it and Unblock the Notifications