ನಮ್ಮ ಮೆಟ್ರೋಗೆ ಹಾಯ್, ಮಾಲಿನ್ಯಕ್ಕೆ ಗುಡ್ ಬಾಯ್!
ಬೆಂಗಳೂರು, ಜು.28: ನಮ್ಮ ಮೆಟ್ರೋ ಆರಂಭವಾದಾಗಿನಿಂದ ನಗರದಲ್ಲಿ ವಾಯುಮಾಲಿನ್ಯ ಪ್ರಮಾಣ ತಗ್ಗಿದೆ. ಮೆಟ್ರೋ ಬಂದಾಗಿನಿಂದ ಸ್ವಂತ ವಾಹನಗಳನ್ನು ಬಿಟ್ಟು ಎಲ್ಲರೂ ಮೆಟ್ರೋದಲ್ಲಿ ಸಂಚರಿಸುವುದರಿಂದ ವಾಯು ಮಾಲಿನ್ಯ ಪ್ರಮಾಣ ಶೇ.13ರಷ್ಟು ಕಡಿಮೆಯಾಗಿದೆ.
ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಯನ ವರದಿ ಪ್ರಕಾರ ಮೆಟ್ರೋದಿಂದ ವಾಯುಮಾಲಿನ್ಯ ಕಡಿಮೆಯಾಗಿರುವುದು ತಿಳಿದುಬಂದಿದೆ. ತಿ ದಿನ ಮೆಟ್ರೊದಲ್ಲಿ ಸರಾಸರಿ 3.60 ಲಕ್ಷ ಮಂದಿ ಪ್ರಯಾಣಿಸುತ್ತಿದ್ದಾರೆ.
ಇವರಲ್ಲಿ ಬಹುತೇಕರು ಸ್ವಂತ ವಾಹನಗಳಲ್ಲಿ ಬಂದು, ಮೆಟ್ರೊ ನಿಲ್ದಾಣದಲ್ಲಿ ವಾಹನ ನಿಲ್ಲಿಸಿ ಪ್ರಯಾಣಿಸುತ್ತಿದ್ದಾರೆ. ಮತ್ತೆ ಕೆಲವರು ವಾಹನವನ್ನು ಮನೆಯಲ್ಲೇ ಬಿಟ್ಟು ಬಸ್ ಹತ್ತಿಕೊಂಡು ಮೆಟ್ರೊ ನಿಲ್ದಾಣ ತಲುಪಿ, ಅಲ್ಲಿಂದ ಮೆಟ್ರೊದಲ್ಲಿ ಹೋಗುತ್ತಿದ್ದಾರೆ.

ಹಿಂದೆ ಮೆಟ್ರೊ ಮಾರ್ಗದಲ್ಲೇ ಬೈಕ್, ಕಾರಿನಲ್ಲಿ ಸಂಚರಿಸುತ್ತಿದ್ದವರಲ್ಲಿ ಸಾಕಷ್ಟು ಮಂದಿ ಈಗ ಮೆಟ್ರೊ ಅವಲಂಬಿಸಿರುವುದರಿಂದ ವಾಯುಮಾಲಿನ್ಯ ಪ್ರಮಾಣವು ಇಳಿಕೆಯಾಗಿದೆ.
ವಾಹನಗಳು ಹೊರಸೂಸುವ ಎಸ್‌ಒ2 (ಗಂಧಕದ ಡೈ ಆಕ್ಸೈಡ್), ಎನ್‌ಒ2 (ಸಾರಜನಕದ ಡೈ ಆಕ್ಸೈಡ್) ರಾಸಾಯನಿಕಗಳು, ಪಿಎಂ-10 ಹಾಗೂ ಪಿಎಂ-2.5 ಧೂಳಿನ ಕಣಗಳು ಪ್ರಮುಖ ವಾಯುಮಾಲಿನ್ಯಕಾರಕಗಳಾಗಿವೆ. 1 ಸಾವಿರ ಲೀಟರ್ ಗಾಳಿಯಲ್ಲಿ ಎಸ್‌ಒ2 50 ಮೈಕ್ರೊ ಗ್ರಾಂ, ಎನ್‌ಒ2 40 ಮೈಕ್ರೊ ಗ್ರಾಂ, ಪಿಎಂ-10 100 ಮೈಕ್ರೊ ಗ್ರಾಂ ಹಾಗೂ ಪಿಎಂ-2.5 60 ಮೈಕ್ರೊ ಗ್ರಾಂ ಮಿತಿ ಮೀರಬಾರದು ರಾಷ್ಟ್ರೀಯ ಗುಣಮಟ್ಟ ನಿಗದಿಪಡಿಸಲಾಗಿದೆ.
ಹಿಂದೆ ಮೆಟ್ರೊದ ಎತ್ತರಿಸಿದ ಮಾರ್ಗದ ಬಳಿ ಈ ಪ್ರಮಾಣ ಮಿತಿ ಮೀರುತ್ತಿತ್ತು. ಈಗ ಮಾಲಿನ್ಯ ಪ್ರಮಾಣ ಕೆಳಕ್ಕೆ ಇಳಿದಿದೆ. ಇತ್ತೀಚೆಗೆ ಒಟ್ಟು 9 ಮಾಪನ ಕೇಂದ್ರಗಳನ್ನು ಹೊಸದಾಗಿ ಆರಂಭಿಸಲಾಗಿದೆ. ಹೆಬ್ಬಾಳ, ಜಯನಗರ, ನಿಮ್ಹಾನ್ಸ್ ಮಾಪನ ಕೇಂದ್ರಗಳ ವ್ಯಾಪ್ತಿಯಲ್ಲಿ ವಾಯುಗುಣಮಟ್ಟವು ಉತ್ತಮವಾಗಿದೆ. ಮೈಸೂರು ರಸ್ತೆಯ ಕವಿಕಾ, ಸಿಲ್ಕ್‌ಬೋರ್ಡ್, ಸಾಣೆಗೊರವನಹಳ್ಳಿ ಭಾಗದಲ್ಲಿ ತೃಪ್ತಿದಾಯಕವಾಗಿದೆ ಎಂದು ಮಂಡಳಿ ತಿಳಿಸಿದೆ.
ಎಲ್ಲೆಲ್ಲಿ ಕಡಿಮೆ ವಾಯುಮಾಲಿನ್ಯ?:ನಾಯಂಡಹಳ್ಳಿಯ ಮೈಸೂರು ರಸ್ತೆ ನಿಲ್ದಾಣದಿಂದ ಮೆಜೆಸ್ಟಿಕ್ ಮೂಲಕ ಸಾಗಿ ಬೈಯ್ಯಪ್ಪನಹಳ್ಳಿಯವರೆಗಿನ ಹಾದಿಯಲ್ಲಿ ತಪಾಸಣೆ ನಡೆಸಲಾಗಿದೆ. ನೇರಳೆ ಮಾರ್ಗದ ನಿಲ್ದಾಣಗಳು ಹಾಗೂ ಮಾರ್ಗದಲ್ಲಿ ಅಲ್ಲಲ್ಲಿ ನಿಂತು ತಪಾಸಣೆ ಮಾಡಲಾಗಿದೆ.
ಇದೇ ರೀತಿ ನಾಗಸಂದ್ರದಿಂದ ಮಲ್ಲೇಶ್ವರ, ಕೆ.ಆರ್.ಮಾರುಕಟ್ಟೆ, ಜಯನಗರ, ಯಲಚೇನಹಳ್ಳಿವರೆಗೆ ಮಾರ್ಗದ ಬಳಿ ತಪಾಸಣೆ ನಡೆಸಲಾಗಿದೆ. ಹಿಂದೊಮ್ಮೆ ಈ ಭಾಗದಲ್ಲಿ ಇದೇ ರೀತಿ ತಪಾಸಣೆ ಮಾಡಲಾಗಿತ್ತು. ಆಗ ಇದ್ದ ವಾಯುಮಾಲಿನ್ಯ ಪ್ರಮಾಣವು ಶೇ.13 ರಷ್ಟು ಇಳಿಕೆಯಾಗಿದೆ.












Click it and Unblock the Notifications