ಬೆಂಗಳೂರಿನಲ್ಲಿ ಸ್ಮಾರ್ಟ್ ವಾಚ್ ಕಳ್ಳರನ್ನು ಹಿಡಿದ ಪೊಲೀಸರು ವಶಪಡಿಸಿಕೊಂಡ ವಾಚ್‌ಗಳೆಷ್ಟು ಗೊತ್ತಾ?
ಬೆಂಗಳೂರು ಪೊಲೀಸರು ಸ್ಮಾರ್ಟ್ ವಾಚ್ ದರೋಡೆ ಮಾಡುತ್ತಿದ್ದವರನ್ನು ಬಂಧಿಸಿದ್ದು, ಸಾವಿರಾರು ವಾಚ್‌ಗಳನ್ನು ವಶಪಡಿಸಿಕೊಂಡಿದ್ದಾರೆ.
ಬೆಂಗಳೂರು, ಜನವರಿ. 25: ಸಿಲಿಕಾನ್ ಸಿಟಿಯಲ್ಲಿ ಯಾರ ಕೈಯಲ್ಲಿ ನೋಡಿದರೂ ಈಗೆಲ್ಲಾ ಸ್ಮಾರ್ಟ್ ವಾಚುಗಳೇ ಕಾಣಿಸುವುದು. ಸಾವಿರಾರು ರೂಪಾಯಿಯ ಈ ಸ್ಮಾರ್ಟ್ ವಾಚುಗಳನ್ನು ಕದಿಯುವವರ ಮತ್ತು ಕದ್ದು ವಾಚ್ ಮಾರುವವರ ಸಂಖ್ಯೆ ಕೂಡ ಕಡಿಮೆಯಿಲ್ಲ. ಅಂತಹದ್ದೇ ಜಾಲವನ್ನು ಬೆಂಗಳೂರು ಪೊಲೀಸರು ಬೇಧಿಸಿದ್ದಾರೆ.
ನಗರದ ವಿವಿಧೆಡೆ ಸ್ಮಾರ್ಟ್ ವಾಚ್ ದರೋಡೆ ಪ್ರಕರಣದಲ್ಲಿ ಭಾಗಿಯಾಗಿದ್ದ ಇಬ್ಬರನ್ನು ಪೊಲೀಸರು ಬುಧವಾರ ಬಂಧಿಸಿದ್ದಾರೆ. ಆರೋಪಿಗಳಿಂದ 1282 ಟೈಟಾನ್ ಸ್ಮಾರ್ಟ್ ವಾಚ್‌ಗಳು, ಒಂದು ಸರಕು ವಾಹನ ಮತ್ತು ಎರಡು ಬೈಕ್‌ಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಬೆಂಗಳೂರು (ಪಶ್ಚಿಮ) ಉಪ ಪೊಲೀಸ್ ಆಯುಕ್ತ ಲಕ್ಷ್ಮಣ್ ಬಿ ನಿಂಬರಗಿ ಈ ಬಗ್ಗೆ ಟ್ವೀಟ್ ಮಾಡಿದ್ದಾರೆ. ಆರೋಪಿಗಳಿಂದ 57 ಲಕ್ಷ ಮೌಲ್ಯದ 1282 ಟೈಟಾನ್ ಸ್ಮಾರ್ಟ್ ವಾಚ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.

57 ಲಕ್ಷ ಮೌಲ್ಯದ 1282 ಟೈಟಾನ್ ಸ್ಮಾರ್ಟ್ ವಾಚ್‌ಗಳನ್ನು ಕದ್ದು ವಾಹನದೊಂದಿಗೆ ಪರಾರಿಯಾಗಿದ್ದ ಇಬ್ಬರು ಆರೋಪಿಗಳನ್ನು ರಾಜರಾಜೇಶ್ವರಿನಗರ ಪೊಲೀಸರು ಪತ್ತೆ ಮಾಡಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪೊಲೀಸರು ಕಾರ್ಯಾಚರಣೆ ನಡೆಸಿ, ಅಪರಾಧಕ್ಕೆ ಬಳಸಲಾಗಿದ್ದ ವಾಚ್‌ಗಳು, ಸರಕು ವಾಹನ ಮತ್ತು 2 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.
ಪೊಲೀಸರು ವಶಪಡಿಸಿಕೊಂಡಿರುವ ಎಲ್ಲಾ ಸ್ಮಾರ್ಟ್ ವಾಚ್‌ಗಳು ಹೊಸ ವಾಚ್‌ಗಳು ಎಂದು ಹೇಳಲಾಗಿದೆ. ಪೊಲೀಸರ ಬಾಕ್ಸ್‌ಗಳ ಚಿತ್ರಗಳನ್ನು ಸಹ ಬಿಡುಗಡೆ ಮಾಡಿದ್ದಾರೆ.
ಇತ್ತೀಚೆಗಷ್ಟೇ ಬೆಂಗಳೂರಿನ ತಲಘಟ್ಟಪುರ ಪೊಲೀಸ್ ವ್ಯಾಪ್ತಿಯಲ್ಲಿ ಮನೆಯೊಂದರಲ್ಲಿ ದರೋಡೆ ಮಾಡುತ್ತಿದ್ದ ಏಳು ಆರೋಪಿಗಳ ಅಂತಾರಾಜ್ಯ ದರೋಡೆಕೋರ ತಂಡವನ್ನು ಪೊಲೀಸರು ಬಂಧಿಸಿದ್ದರು. ಸ್ಥಳದಲ್ಲಿನ ಸಿಸಿಟಿವಿ ಕ್ಯಾಮೆರಾ ರಾಜ್ಯದ ಮೋಸ್ಟ್ ವಾಂಟೆಡ್ ಗ್ಯಾಂಗ್‌ಗಳಲ್ಲಿ ಒಂದನ್ನು ಬಂಧಿಸಲು ಸಹಾಯ ಮಾಡಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಬಂಧಿತ ಏಳು ಆರೋಪಿಗಳ ಪೈಕಿ ಇಬ್ಬರು ಸ್ಥಳದಿಂದ ಪರಾರಿಯಾಗಿದ್ದರು, ಆದರೆ ನಂತರ ಅವರನ್ನು ಬಂಧಿಸಲಾಯಿತು. ಪೊಲೀಸರು ರೆಡ್ ಹ್ಯಾಂಡ್ ಆಗಿ ಆರೋಪಿಗಳನ್ನು ಹಿಡಿದಾಗ ಮಾರಕಾಸ್ತ್ರಗಳು ಪತ್ತೆಯಾಗಿದ್ದರಿಂದ ಎಲ್ಲಾ ಆರೋಪಿಗಳ ವಿರುದ್ಧ ಶಸ್ತ್ರಾಸ್ತ್ರ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಈ ಬಗ್ಗೆ ಬೆಂಗಳೂರು ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.












Click it and Unblock the Notifications