ಮನ್ ಕೀ ಬಾತ್‌ನಲ್ಲಿ ಬೆಂಗಳೂರಿನ ನಿಂಗಮ್ಮಗೆ ಪ್ರಧಾನಿ ಮೋದಿ ಶಹಬ್ಬಾಸ್: ಯಾರಿವರು?

ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಜನಪ್ರಿಯ ಮನ್ ಕೀ ಬಾತ್ ರೇಡಿಯೋ ಕಾರ್ಯಕ್ರಮದ ಮೂಲಕ ದೇಶದ ವಿವಿಧ ಮೂಲೆಗಳಲ್ಲಿರುವ ಅಸಾಧಾರಣ ಸಾಧಕರನ್ನ ಪರಿಚಯಿಸುತ್ತಾರೆ. ಭಾನುವಾರ ಪ್ರಸಾರವಾದ ತಮ್ಮ ಮಾಸಿಕ ಸಂಚಿಕೆಯಲ್ಲಿ ಅವರು, ನಮ್ಮ ಬೆಂಗಳೂರಿನ ಬೀದಿಬದಿ ವ್ಯಾಪಾರಿಯೊಬ್ಬರ ಕಠಿಣ ಪರಿಶ್ರಮ ಹಾಗೂ ಸ್ವಾವಲಂಬನೆಯ ಕಥೆಯನ್ನು ದೇಶದ ಜನತೆಯ ಮುಂದೆ ತೆರೆದಿಟ್ಟಿದ್ದಾರೆ.

ಯಾವುದೇ ಭದ್ರತೆ ಇಲ್ಲದ ಸಾಲ ಸೌಲಭ್ಯವನ್ನು ಸದುಪಯೋಗಪಡಿಸಿಕೊಂಡು, ತಮ್ಮ ಸಣ್ಣ ವ್ಯಾಪಾರವನ್ನು ಯಶಸ್ವಿಯಾಗಿ ಮುನ್ನಡೆಸುತ್ತಿರುವ ಬೆಂಗಳೂರಿನ ಇಡ್ಲಿ ವ್ಯಾಪಾರಿ ಟಿ.ಎಸ್. ನಿಂಗಮ್ಮ ಅವರ ಸಾಧನೆಗೆ ಪ್ರಧಾನಿ ಮೋದಿ ಅವರು ಶಹಬ್ಬಾಸ್ ಗಿರಿ ನೀಡಿದ್ದಾರೆ.

PM Modi Praises Bengaluru Idli Seller TS Ningamma In Mann Ki Baat For PM SVANidhi Success Story

ಯಾರಿವರು ನಿಂಗಮ್ಮ?

ಮೂಲತಃ ಹಾಸನ ಜಿಲ್ಲೆಯವರಾದ ಟಿ.ಎಸ್. ನಿಂಗಮ್ಮ ಅವರು ಪ್ರಸ್ತುತ ಬೆಂಗಳೂರಿನ ವಿಜಯನಗರದಲ್ಲಿ ನೆಲೆಸಿದ್ದಾರೆ. ತಮ್ಮ ದಿನನಿತ್ಯದ ಬದುಕಿನ ಬಂಡಿ ಸಾಗಿಸಲು ಅವರು ತಮ್ಮ ಪತಿಯೊಂದಿಗೆ ಸೇರಿ ವಿಜಯನಗರದ ಹೊಸಹಳ್ಳಿ ಮೆಟ್ರೋ ನಿಲ್ದಾಣದ ಬಳಿ ಸಣ್ಣದೊಂದು ತಳ್ಳುಗಾಡಿಯಲ್ಲಿ ಇಡ್ಲಿ, ದೋಸೆ ಮತ್ತು ಸಾಂಬಾರ್ ಮಾರಾಟ ಮಾಡಲು ಶುರು ಮಾಡಿದರು. ತಮ್ಮ ರುಚಿಕರವಾದ ತಿಂಡಿಗಳಿಂದಲೇ ಸುತ್ತಮುತ್ತಲಿನ ಗ್ರಾಹಕರನ್ನು ಸೆಳೆದ ಈ ದಂಪತಿಗೆ, ವ್ಯಾಪಾರವನ್ನು ಇನ್ನಷ್ಟು ವಿಸ್ತರಿಸುವ ಹಂಬಲವಿತ್ತು.

ಆದರೆ, ಹೊಸ ತಳ್ಳುಗಾಡಿ ಖರೀದಿಸಲು ಮತ್ತು ಹೆಚ್ಚಿನ ಪ್ರಮಾಣದಲ್ಲಿ ಕಚ್ಚಾ ವಸ್ತುಗಳನ್ನ ತರಲು ಅವರಿಗೆ ಬಂಡವಾಳದ ಕೊರತೆ ಎದುರಾಯಿತು. ಬ್ಯಾಂಕ್‌ಗಳಿಂದ ಸಾಲ ಪಡೆಯಲು ಯಾವುದೇ ರೀತಿಯ ಆಸ್ತಿಯ ಭದ್ರತೆ ಇವರ ಬಳಿ ಇರಲಿಲ್ಲ.

ಬಂಡವಾಳದ ಕೊರತೆಯಿಂದ ಕಂಗೆಟ್ಟಿದ್ದ ನಿಂಗಮ್ಮ ಅವರ ಕೈಹಿಡಿದದ್ದು ಕೇಂದ್ರ ಸರ್ಕಾರದ ಪಿಎಂ ಸ್ವನಿಧಿ (ಪ್ರಧಾನ ಮಂತ್ರಿ ಬೀದಿ ವ್ಯಾಪಾರಿಗಳ ಆತ್ಮನಿರ್ಭರ್ ನಿಧಿ) ಯೋಜನೆ. ನಗರ ಪ್ರದೇಶದ ಸಣ್ಣ ಮತ್ತು ಬೀದಿಬದಿ ವ್ಯಾಪಾರಿಗಳಿಗೆ ಯಾವುದೇ ಮೇಲಾಧಾರ ರಹಿತವಾಗಿ ಆರ್ಥಿಕ ನೆರವು ನೀಡುವ ಈ ಯೋಜನೆಯಡಿ, ನಿಂಗಮ್ಮ ಅವರು ಮೊದಲು 10,000 ರೂಪಾಯಿ ಸಾಲ ಪಡೆದರು. ಆ ಸಾಲವನ್ನು ಪ್ರಾಮಾಣಿಕವಾಗಿ ಮರುಪಾವತಿಸಿದ ನಂತರ 20,000 ರೂ. ಹಾಗೂ ಬಳಿಕ 50,000 ರೂಪಾಯಿಗಳ ಬೃಹತ್ ಸಾಲದ ನೆರವು ಪಡೆದುಕೊಂಡರು.

ಯಾವುದೇ ಮಧ್ಯವರ್ತಿಗಳ ಅಥವಾ ದಲ್ಲಾಳಿಗಳ ಕಿರಿಕಿರಿಯಿಲ್ಲದೆ ನೇರವಾಗಿ ಕೈಗೆ ಸಾಲ ಸಿಕ್ಕಿದ್ದರಿಂದ ಅವರು ತಮ್ಮ ತಳ್ಳುಗಾಡಿಯನ್ನ ಉನ್ನತೀಕರಿಸಿದರು. ಹೆಚ್ಚಿನ ಪ್ರಮಾಣದಲ್ಲಿ ದಿನಸಿ ವಸ್ತುಗಳನ್ನ ಖರೀದಿಸಿ, ಹೊಸ ಬಗೆಯ ತಿನಿಸುಗಳನ್ನು ಸಹ ಪರಿಚಯಿಸಿದರು.

ಸ್ವಾವಲಂಬಿ ಮಹಿಳೆಯಿಂದ 4 ಕುಟುಂಬಗಳಿಗೆ ಆಸರೆ

ಮಹಿಳೆಯೊಬ್ಬಳು ಆರ್ಥಿಕವಾಗಿ ಸಬಲಳಾದರೆ, ಇಡೀ ಕುಟುಂಬವೇ ಆರ್ಥಿಕವಾಗಿ ಪ್ರಗತಿಯತ್ತ ಸಾಗುತ್ತದೆ ಎಂಬುದಕ್ಕೆ ನಿಂಗಮ್ಮ ಅವರೇ ಉದಾಹರಣೆ ಎಂದು ಮನ್ ಕೀ ಬಾತ್‌ನಲ್ಲಿ ಪ್ರಧಾನಿ ಮೋದಿ ಹೇಳಿದ್ದಾರೆ. ವ್ಯಾಪಾರ ವಿಸ್ತರಣೆಯಾದಂತೆ ನಿಂಗಮ್ಮ ಅವರ ನಿತ್ಯದ ಆದಾಯವೂ ಗಣನೀಯವಾಗಿ ಹೆಚ್ಚಾಯಿತು. ಇಂದು ಅವರು ತಮ್ಮ ಮೂವರು ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣವನ್ನು ಒದಗಿಸುತ್ತಿದ್ದಾರೆ.

ಅಷ್ಟೇ ಅಲ್ಲದೆ, ಈ ವ್ಯಾಪಾರದ ಮೂಲಕ ತಮ್ಮನ್ನು ಸೇರಿ ಒಟ್ಟು 4 ಕುಟುಂಬಗಳಿಗೆ ಆಸರೆಯಾಗಿ, ಅವರಿಗೂ ಜೀವನ ರೂಪಿಸಿಕೊಳ್ಳಲು ನೆರವಾಗಿದ್ದಾರೆ.

ತಮ್ಮ ಕಠಿಣ ಶ್ರಮವನ್ನು ಪ್ರಧಾನಿ ಮೋದಿ ಕೊಂಡಾಡಿರುವ ಬಗ್ಗೆ ಪ್ರತಿಕ್ರಿಯಿಸಿರುವ ನಿಂಗಮ್ಮ, "ನನ್ನಂತಹ ಅತಿ ಸಾಮಾನ್ಯ ಬೀದಿಬದಿ ವ್ಯಾಪಾರಿಯ ಶ್ರಮವನ್ನು ಗುರುತಿಸಿ, ಇಡೀ ದೇಶದ ಮುಂದೆ ಪ್ರಸ್ತಾಪಿಸಿದ ಪ್ರಧಾನಿ ಮೋದಿಯವರಿಗೆ ತುಂಬು ಹೃದಯದ ಧನ್ಯವಾದಗಳು. ದಲ್ಲಾಳಿಗಳ ಕಾಟವಿಲ್ಲದೆ ಪಿಎಂ ಸ್ವನಿಧಿ ಯೋಜನೆಯಿಂದ ಸಿಕ್ಕ ಆರ್ಥಿಕ ನೆರವು ನನ್ನ ಕುಟುಂಬದ ಭವಿಷ್ಯವನ್ನೇ ಬದಲಾಯಿಸಿತು" ಎಂದು ಹರ್ಷ ವ್ಯಕ್ತಪಡಿಸಿದ್ದಾರೆ ಎಂದು ಕನ್ನಡಪ್ರಭ ಪತ್ರಿಕೆಯಲ್ಲಿ ವರದಿ ಮಾಡಿದ.

ಈ ಉದಾಹರಣೆಯು ಸರ್ಕಾರಿ ಯೋಜನೆಗಳನ್ನು ಸರಿಯಾಗಿ ಬಳಸಿಕೊಂಡರೆ ಸಣ್ಣ ವ್ಯಾಪಾರಿಗಳು ಕೂಡ ಹೇಗೆ ಆರ್ಥಿಕವಾಗಿ ಸದೃಢರಾಗಬಹುದು ಎಂಬುದನ್ನು ತೋರಿಸಿಕೊಟ್ಟಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+