Namma Metro; ಈ ನಿಲ್ದಾಣದಲ್ಲಿ platform screen door ವ್ಯವಸ್ಥೆ
ಬೆಂಗಳೂರು, ಆಗಸ್ಟ್ 02; ನಮ್ಮ ಮೆಟ್ರೋ ಬೆಂಗಳೂರು ನಗರದ ಜನರ ಜೀವನಾಡಿಯಾಗಿ ಬದಲಾಗುತ್ತಿದೆ. ಸುಮಾರು 70 ಕಿ. ಮೀ. ಮಾರ್ಗದಲ್ಲಿ ನಗರದಲ್ಲಿ ಮೆಟ್ರೋ ಸಂಪರ್ಕವಿದ್ದು, ಪ್ರತಿದಿನ 4 ಲಕ್ಷಕ್ಕೂ ಅಧಿಕ ಜನರು ಸಂಚಾರ ನಡೆಸುತ್ತಾರೆ. ಬಿಎಂಆರ್‌ಸಿಎಲ್ ಸಹ ಪ್ರಯಾಣಿಕರ ಸುರಕ್ಷತೆಗೆ ಹಲವು ಕ್ರಮ ಕೈಗೊಳ್ಳುತ್ತಿದೆ.
ಬಿಎಂಆರ್‌ಸಿಎಲ್ ನಮ್ಮ ಮೆಟ್ರೋ ನಿಲ್ದಾಣದಲ್ಲಿ platform screen door ವ್ಯವಸ್ಥೆ ಕಲ್ಪಿಸಲು ಮುಂದಾಗಿದೆ. ವಿದೇಶ, ಚೆನ್ನೈ ಮತ್ತು ದೆಹಲಿ ಮೆಟ್ರೋದಲ್ಲಿ ಈಗಾಗಲೇ ಈ ವ್ಯವಸ್ಥೆ ಇದೆ. ಇದರಿಂದಾಗಿ ಪ್ರಯಾಣಿಕರು ರೈಲಿಗಾಗಿ ಕಾಯುವಾಗ ಆಕಸ್ಮಿಕವಾಗಿಯೂ ವಿದ್ಯುತ್ ಸಂಪರ್ಕ ಇರುವ ಹಳಿಯ ಕಡೆ ಹೋಗುವುದು ತಡೆಯಲು ಸಹಾಯಕವಾಗಲಿದೆ.

ನಮ್ಮ ಮೆಟ್ರೋದ ಎಲೆಕ್ಟ್ರಾನಿಕ್ ಸಿಟಿ ಕೊನಪ್ಪನ ಅಗ್ರಹಾರ ಮೆಟ್ರೋ ನಿಲ್ದಾಣದಲ್ಲಿ ಬೆಂಗಳೂರು ನಗರದಲ್ಲಿಯೇ ಮೊದಲ ಬಾರಿಗೆ platform screen door ವ್ಯವಸ್ಥೆ ಜಾರಿಗೆ ಬರಲಿದೆ. ಈ ವರ್ಷದ ಡಿಸೆಂಬರ್ ವೇಳೆಗೆ ಈ ಮಾರ್ಗದಲ್ಲಿ ಮೆಟ್ರೋ ರೈಲುಗಳ ಸಂಚಾರ ಆರಂಭವಾಗುವ ನಿರೀಕ್ಷೆ ಇದೆ.
ಹೇಗಿರಲಿದೆ ಈ ವ್ಯವಸ್ಥೆ?; ನಮ್ಮ ಮೆಟ್ರೋ ನಿಲ್ದಾಣದ ಫ್ಲಾಟ್ ಫಾರಂ ಬಳಿ ಹೋಗದಂತೆ ಬಾಗಿಲುಗಳನ್ನು ಅಳವಡಿಕೆ ಮಾಡಲಾಗುತ್ತದೆ. ರೈಲು ಬಂದಾಗ ಸ್ವಯಂ ಚಾಲಿತವಾಗಿ ಈ ಬಾಗಿಲುಗಳು ತೆರೆಯಲಿದ್ದು, ಜನರು ರೈಲು ಹತ್ತಲು, ಇಳಿಯಲು ಸಹಾಯಕವಾಗಲಿದೆ. ದೆಹಲಿ, ಚೆನ್ನೈನ ಹಲವು ಮೆಟ್ರೋ ನಿಲ್ದಾಣಗಳಲ್ಲಿ ಈಗಾಗಲೇ platform screen door ವ್ಯವಸ್ಥೆ ಜಾರಿಗೊಳಿಸಲಾಗಿದೆ.
ಈಗ ನಮ್ಮ ಮೆಟ್ರೋ ನಿಲ್ದಾಣದ ಪ್ಲಾಟ್ ಫಾರಂನ ಹಳದಿ ಗೆರೆ ದಾಟದಂತೆ ನೋಡಿಕೊಳ್ಳಲು ಭದ್ರತಾ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. ಪ್ರಯಾಣಿಕರು ಹಳಿಯ ಬಳಿ ಹೋಗುವುದು, ಹಳಿಯ ಮೇಲೆ ಮೊಬೈಲ್ ಸೇರಿದಂತೆ ಇತರ ವಸ್ತುಗಳು ಬಿದ್ದರೆ ಅದನ್ನು ಎತ್ತಿಕೊಳ್ಳಲು ಪ್ರಯತ್ನ ಮಾಡುವುದನ್ನು ಇವರು ತಡೆಯುತ್ತಾರೆ.
platform screen door ಈ ಹಳದಿ ಗೆರೆಯ ಮೇಲೆ ನಿರ್ಮಾಣವಾಗಲಿದೆ. ಇದರ ಹೊರಗೆ ಜನರು ಮೆಟ್ರೋ ರೈಲಿಗಾಗಿ ಸರದಿಯಲ್ಲಿ ಕಾಯಬೇಕು. ಒಂದು ವೇಳೆ ಬಾಗಿಲುಗಳು ಮುಚ್ಚಿದರೆ ಮುಂದಿನ ರೈಲು ಬರುವ ತನಕ ಕಾಯುವುದು ಅನಿವಾರ್ಯವಾಗಲಿದೆ. ಎಲೆಕ್ಟ್ರಾನಿಕ್ ಸಿಟಿ ಕೊನಪ್ಪನ ಅಗ್ರಹಾರ ನಿಲ್ದಾಣದಲ್ಲಿ ಪ್ರಾಯೋಗಿಕವಾಗಿ ಇದನ್ನು ಜಾರಿಗೊಳಿಸಲು ಇನ್ಫೋಸಿಸ್ ಸಹ ಒಪ್ಪಿಗೆ ನೀಡಿದ್ದು, ಈ ವ್ಯವಸ್ಥೆಗಾಗಿಯೇ ಹೆಚ್ಚುವರಿ ಅನುದಾನವನ್ನು ಸಹ ನೀಡಲಿದೆ.
ಈ ನಿಲ್ದಾಣ ನಿರ್ಮಾಣಕ್ಕೆ ಇನ್ಫೋಸಿಸ್ ಸುಮಾರು 135 ಕೋಟಿ ರೂ. ಅನುದಾನ ನೀಡಲಿದೆ. platform screen door ನಿರ್ಮಾಣ ಮಾಡಲು ಬಿಎಂಆರ್‌ಸಿಎಲ್ ಟೆಂಡರ್ ಕರೆಯಲಿದೆ. ಮೆಟ್ರೋ ನಿಲ್ದಾಣದಿಂದ ನೇರವಾಗಿ ಇನ್ಫೋಸಿಸ್ ಕ್ಯಾಂಪಸ್‌ಗೆ ಸಂಪರ್ಕ ಕಲ್ಪಿಸಲು ವಾಕ್ ವೇ ಸಹ ನಿರ್ಮಾಣ ಮಾಡಲಾಗುತ್ತದೆ. ಇಲ್ಲಿ ವಾಣಿಜ್ಯ ಚಟುವಟಿಕೆಗಳಿಗಾಗಿ ಮಳಿಗೆಯನ್ನು ಸಹ ತೆರೆಯಲಾಗುತ್ತಿದೆ.
ದೆಹಲಿ ಮತ್ತು ಚೆನ್ನೈನ ಮೆಟ್ರೋ ನಿಲ್ದಾಣಗಳಲ್ಲಿ platform screen door ವ್ಯವಸ್ಥೆ ಯಶಸ್ವಿಯಾಗಿದೆ. ಪ್ರಯಾಣಿಕರ ಸುರಕ್ಷತೆಗೆ ಇದು ಸಹಕಾರಿಯಾಗಿದೆ. ಬೆಂಗಳೂರಿನಲ್ಲಿಯೂ ಪ್ರಾಯೋಗಿಕವಾಗಿ ಈ ವ್ಯವಸ್ಥೆ ಮಾಡಲಾಗುತ್ತದೆ ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ಹೇಳಿದ್ದಾರೆ.
ಈ ವರ್ಷದ ಫೆಬ್ರವರಿಯಲ್ಲಿ ಇಬ್ಬರು ಹಸಿರು ಮಾರ್ಗದ ಮಹಾಕವಿ ಕುವೆಂಪು ರಸ್ತೆ ನಿಲ್ದಾಣದಲ್ಲಿ ಎದುರಿನ ಪ್ಲಾಟ್‌ಫಾರಂಗೆ ಹೋಗಲು ಹಳಿ ದಾಟಲು ಪ್ರಯತ್ನ ನಡೆಸಿದ್ದರು. ಆದರೆ ನಿಲ್ದಾಣದ ಸಿಬ್ಬಂದಿಗಳ ಸಮಯ ಪ್ರಜ್ಞೆ ಭಾರೀ ಅನಾಹುತವನ್ನು ತಪ್ಪಿಸಿತ್ತು. platform screen door ಇಂತಹ ಅನಾಹುತ ತಡೆಗೆ ಸಹಾಯಕವಾಗಲಿದೆ.
ಮುಂದಿನ ಹಂತದಲ್ಲಿ ಗುಲಾಬಿ ಬಣ್ಣದ ಮಾರ್ಗದ 12 ಸುರಂಗ ಮೆಟ್ರೋ ನಿಲ್ದಾಣದಲ್ಲಿ platform screen door ವ್ಯವಸ್ಥೆ ಜಾರಿಗೊಳಿಸಲು ಬಿಎಂಆರ್‌ಸಿಎಲ್ ಮುಂದಾಗಿದೆ. 2025ಕ್ಕೆ ಈ ಮಾರ್ಗದಲ್ಲಿ ಮೆಟ್ರೋ ರೈಲಿನ ಸಂಚಾರ ನಿರೀಕ್ಷೆ ಮಾಡಲಾಗಿದೆ. ಹೊರ ವರ್ತುಲ ರಸ್ತೆಯಲ್ಲಿ ಸಾಗುವ ಮೆಟ್ರೋ ಮಾರ್ಗದಲ್ಲಿಯೂ ಈ ವ್ಯವಸ್ಥೆ ನಿರ್ಮಾಣ ಮಾಡಲು ಚಿಂತನೆ ನಡೆದಿದೆ.












Click it and Unblock the Notifications