ರೋಗಿಗೆ ಕೊರೊನಾ ಸೋಂಕು; ಬೆಂಗಳೂರಿನ ಅಗಡಿ ಆಸ್ಪತ್ರೆ ಬಂದ್
ಬೆಂಗಳೂರು, ಏಪ್ರಿಲ್ 15 : ಬೆಂಗಳೂರಿನ ವಿಲ್ಸನ್ ಗಾರ್ಡನ್‌ನಲ್ಲಿನ ಅಗಡಿ ಆಸ್ಪತ್ರೆಯನ್ನು ಐದು ದಿನಗಳ ಕಾಲ ಮುಚ್ಚುವಂತೆ ಬಿಬಿಎಂಪಿ ಸೂಚನೆ ನೀಡಿದೆ. ಬೆಂಗಳೂರಿನಲ್ಲಿ ಬಾಗಿಲು ಮುಚ್ಚುತ್ತಿರುವ 2ನೇ ಆಸ್ಪತ್ರೆ ಇದಾಗಿದೆ.
ಅಗಡಿ ಆಸ್ಪತ್ರೆಯಲ್ಲಿದ್ದ ರೋಗಿಗೆ ಕೊರೊನಾ ಸೋಂಕು ತಗುಲಿರುವುದು ಖಚಿತವಾದ ಹಿನ್ನಲೆಯಲ್ಲಿ ಬಿಬಿಎಂಪಿ ಈ ಸೂಚನೆ ನೀಡಿದೆ. ಆಸ್ಪತ್ರೆಯಲ್ಲಿರುವ ಎಲ್ಲಾ ರೋಗಿಗಳು, ಸಿಬ್ಬಂದಿಗಳಿಗೆ ಕ್ವಾರಂಟೈನ್‌ನಲ್ಲಿರಲು ಸೂಚಿಸಲಾಗಿದೆ.
ಉಸಿರಾಟದ ತೊಂದರೆಯಿಂದಾಗಿ ವ್ಯಕ್ತಿಯೊಬ್ಬರು ಅಗಡಿ ಆಸ್ಪತ್ರೆಗೆ ದಾಖಲಾಗಿದ್ದರು. ಒಂದು ವಾರಗಳ ಕಾಲ ಚಿಕಿತ್ಸೆ ಪಡೆದು ಮನೆಗೆ ಮರಳಿದ್ದರು. ಈಗ ರೋಗಿ ಮತ್ತೊಂದು ಆಸ್ಪತ್ರೆಗೆ ಈಗ ದಾಖಲಾಗಿದ್ದು, ಕೊರೊನಾ ಸೋಂಕು ತಗುಲಿರುವುದು ಖಚಿತವಾಗಿದೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ರೋಗಿಯ ಕುರಿತ ವಿವರವನ್ನು ಇನ್ನೂ ಬಿಡುಗಡೆ ಮಾಡಿಲ್ಲ. ಐದು ದಿನಗಳ ಕಾಲ ಆಸ್ಪತ್ರೆಯನ್ನು ಬಂದ್ ಮಾಡಿ, ಸ್ವಚ್ಛಗೊಳಿಸಲು ಸೂಚನೆ ನೀಡಲಾಗಿದೆ.
ಬುಧವಾರ ರೋಗಿಗೆ ಕೊರೊನಾ ಇರುವುದು ಖಚಿತವಾಗಿದೆ. ಕಳೆದ ವಾರ ರೋಗಿ ಅಗಡಿ ಆಸ್ಪತ್ರೆಯಲ್ಲಿದ್ದ. ಆದ್ದರಿಂದ, ಆಸ್ಪತ್ರೆ ಬಂದ್ ಮಾಡಿ ರೋಗಿಗಳು, ಸಿಬ್ಬಂದಿಗೆ ಕ್ವಾರಂಟೈನ್‌ನಲ್ಲಿರಲು ನಿರ್ದೇಶನ ನೀಡಲು ತೀರ್ಮಾನಿಸಲಾಯಿತು.
ಬಿಬಿಎಂಪಿ ನಿರ್ದೇಶನ ನೀಡಿರುವುದನ್ನು ಅಗಡಿ ಆಸ್ಪತ್ರೆ ಖಚಿತಪಡಿಸಿದೆ. ಏಪ್ರಿಲ್ 20ರ ತನಕ ಆಸ್ಪತ್ರೆ ಬಂದ್ ಮಾಡಲಾಗುತ್ತದೆ. ರೋಗಿಗಳನ್ನು ಬೇರೆ ಕಡೆಗೆ ಸ್ಥಳಾಂತರ ಮಾಡಲಾಗುತ್ತದೆ.
ವೈದ್ಯರಿಗೆ ಕೊರೊನಾ ಸೋಂಕು ತಗುಲಿದ ಹಿನ್ನಲೆಯಲ್ಲಿ ಬಿಬಿಎಂಪಿ ಭಾನುವಾರ ಕ್ವೀನ್ಸ್ ರಸ್ತೆಯಲ್ಲಿರುವ ಷಿಫಾ ಆಸ್ಪತ್ರೆಯನ್ನು ಬಂದ್ ಮಾಡಲು ಸೂಚನೆ ನೀಡಿತ್ತು. ಈಗ ವಿಲ್ಸನ್ ಗಾರ್ಡನ್‌ನಲ್ಲಿರುವ ಅಗಡಿ ಆಸ್ಪತ್ರೆ ಬಂದ್ ಆಗಿದೆ.












Click it and Unblock the Notifications