ಬೆಂಗಳೂರಲ್ಲಿ ಅಕ್ರಮ ವಾಸ: ಬಂಧಿತ ಯುವತಿ ಪಾಕಿಸ್ತಾನದ ಸುಪರ್ದಿಗೆ
ಬೆಂಗಳೂರಿನಲ್ಲಿ ಅಕ್ರಮವಾಗಿ ವಾಸವಿದ್ದ ಪಾಕಿಸ್ತಾನ ದೇಶದ ಯುವತಿಯನ್ನು ಇತ್ತೀಚೆಗೆ ಬಂಧಿಸಲಾಗಿತ್ತು. ಆ ಯುವತಿ ಇಕ್ರಾ ಜೀವನಿ (19) ಯನ್ನು ಗಡಿಪಾರು ಮಾಡಿ ಇದೀಗ ಪಾಕಿಸ್ತಾನಕ್ಕೆ ವಾಪಾಸ್ ಕಳುಹಿಸಲಾಗಿದೆ.
ಬೆಂಗಳೂರು, ಫೆಬ್ರವರಿ 21: ಸಿಲಿಕಾನ್ ಸಿಟಿ ಬೆಂಗಳೂರು ಅನೇಕರಿಗೆ ಬದುಕು ಕಟ್ಟಿಕೊಡುವ ಬೃಹತ್ ನಗರವು ಆಗಿದೆ. ಹೀಗೆ ಉದ್ಯೋಗ ಅರಸಿ ಬರುವವರಂತೆ ತಲೆಮರೆಸಿಕೊಳ್ಳಲು ಬರುವವರ ತಾಣವಾಗಿಯೂ ನಗರ ಬದಲಾಗುತ್ತಿದೆ ಎಂಬ ಸಂಶಯ ಕಾಡುತ್ತಿದೆ. ಉಗ್ರರ ಜೊತೆ ನಂಟು ಹೊಂದಿದವರು, ಅಕ್ರಮ ನಿವಾಸಿಗಳು ಸಹ ಬೆಂಗಳೂರು ನೆಲೆಸಿ ನಂತರ ಬಂಧನವಾದ ಪ್ರಕರಣಗಳನ್ನು ಸಾಕಷ್ಟು ನೋಡಿದ್ದೇವೆ.
ಅದೇ ರೀತಿ ನಗರದಲ್ಲಿ ಭಾರತೀಯ ಪತಿಯೊಂದಿಗೆ ವಾಸವಿದ್ದ ಪಾಕಿಸ್ತಾನ ದೇಶದ ಯುವತಿಯನ್ನು ಇತ್ತೀಚೆಗೆ ಬಂಧಿಸಲಾಗಿತ್ತು. ಆ ಯುವತಿ ಇಕ್ರಾ ಜೀವನಿ (19) ಯನ್ನು ಗಡಿಪಾರು ಮಾಡಿ ಇದೀಗ ಪಾಕಿಸ್ತಾನದ ಸುಪರ್ದಿಗೆ ಒಪ್ಪಿಸಲಾಗಿದೆ.
ಭಾರತದ ಉತ್ತರ ಪ್ರದೇಶದ ಮುಲಾಯಂ ಸಿಂಗ್ ಜೊತೆಗೆ ಅಕ್ರಮವಾಗಿ ಊರೂರು ಸುತ್ತಿ ಬೆಂಗಳೂರಿನ ಬೆಳ್ಳಂದೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನೆಲೆಸಿದ್ದಳು. ಜುನ್ನಸಂದ್ರದ ಅಯ್ಯಪ್ಪಸ್ವಾಮಿ ದೇವಸ್ಥಾನದ ಬಳಿ ಮನೆಯೊಂದರಲ್ಲಿ ವಾಸವಿದ್ದಳು. ಈಕೆಯ ಬಗ್ಗೆ ನಿರಂತರ ಮಾಹಿತಿ ಸಂಗ್ರಹಿಸುತ್ತಿದ್ದ ಕೇಂದ್ರ ಗುಪ್ತಚರ ಇಲಾಖೆ ಅಧಿಕಾರಿಗಳು ಬೆಂಗಳೂರಿನಲ್ಲಿರುವುದಾಗಿ ತಿಳಿಸಿ ಅಗತ್ಯ ಕ್ರಮ ಕೈಗೊಳ್ಳಲು ಇಲ್ಲಿನ ಪೊಲೀಸರಿಗೆ ತಿಳಿಸಿದ್ದರು.

ಗುಪ್ತಚರ ಅಧಿಕಾರಿಗಳ ನಿರ್ದೇಶನದಂತೆ ದಾಳಿ ನಡೆಸಿದ ಬೆಳ್ಳಂದೂರು ಪೊಲೀಸರು ಯುವತಿ ಇಕ್ರಾ ಮತ್ತು ಮುಲಾಯಂಸಿಂಗ್ ನನ್ನು ಬಂಧಿಸಿದ್ದಾರೆ. ಜೊತೆಗೆ ಇವರಿಗೆ ವಾಸವಿರಲು ಅವಕಾಶ ಮಾಡಿಕೊಟ್ಟ ಕಾರನಕ್ಕೆ ಮನೆ ಮಾಲೀಕರ ವಿರುದ್ಧವು ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ದೇಶದ ಗಡಿಯಾಚೆಗಿನ ಪ್ರೇಮಕಥೆ
ಪಾಕಿಸ್ತಾನದ ಮೊಹಮ್ಮದ್ ಸೊಹೈಲ್ ಜೀವಾನಿಯವರ ಪುತ್ರಿ ಇಕ್ರಾ ಪಾಕಿಸ್ತಾನದ ಹೈದರಾಬಾದ್‌ನ ಪಿಗ್ಗೊಟ್ ಮೆಮೋರಿಯಲ್ ಗರ್ಲ್ಸ್ ಹೈಯರ್ ಸೆಕೆಂಡರಿ ಶಾಲೆಯ ವಿದ್ಯಾರ್ಥಿನಿ. 2022ರ ಸೆಪ್ಟೆಂಬರ್‌ನಲ್ಲಿ 'ಪತಿ' ಭಾರತದ ಮುಲಾಯಂ ಸಿಂಗ್ ಜೊತೆ ವೀಸಾ ಇಲ್ಲದೇ ಭಾರತ ಪ್ರವೇಶಿಸಿದ್ದಳು. ಇವರಿಬ್ಬರು ಪ್ರೀತಿಯಲ್ಲಿ ಬಿದ್ದಿದ್ದರ ಬಗ್ಗೆ ಸಾಕಷ್ಟು ಸುದ್ದಿಯಾಗಿತ್ತು.
ಗೇಮಿಂಗ್ ಅಪ್ಲಿಕೇಶನ್‌ನಲ್ಲಿ ಇಕ್ರಾಳನ್ನು ಭೇಟಿಯಾಗಿದ್ದ ಪತಿ ಆಕೆಯನ್ನು ನೇಪಾಳದಲ್ಲಿ ವಿವಾದಹವಾಗಿದ್ದಾಗಿ ವರದಿ ಇದೆ.

ನಂತರ ದಂಪತಿಗಳು ಭಾರತದ ನೇಪಾಳದಿಂದ ಗಡಿದಾಟಿ ಬಸ್ಸಿನಲ್ಲೇ ಪಾಟ್ನಾ ತಲುಪಿದ್ದಾರೆ. ಅಲ್ಲಿಂದ ದಿನಗಳೆಯುತ್ತಾ ಅವರು ಕಳೆದ ವರ್ಷ ಸೆಪ್ಟೆಂಬರ್ 2022ರ ಹೊತ್ತಿಗೆ ಬೆಂಗಳೂರಿಗೆ ಬಂದು ಸೇರಿದ್ದಾರೆ. ಬೆಳ್ಳಂದೂರು ಪೊಲೀಸ್ ಠಾಣೆ ವ್ಯಾಪ್ತಿಯ ಮನೆ ಮಾಡಿದ್ದರು.
ಯುವತಿ ಭಾರತದಲ್ಲಿರಲು ಸಹಾಯವಾಗಲು ಪತಿ ತನ್ನ ಸಂಬಂಧಿಯ ಆಧಾರ್ ಕಾರ್ಡ್ ಎಡಿಟ್ ಮಾಡಿದ್ದ ಎನ್ನಲಾಗಿದೆ. ಇಷ್ಟೇಲ್ಲದರ ಮಧ್ಯೆ ಸೆಪ್ಟೆಂಬರ್ 19 ರಂದು ಇಕ್ರಾಳ ತಂದೆ ಹೈದರಾಬಾದ್ ನಗರ (ಪಾಕಿಸ್ತಾನ) ಪೊಲೀಸ್ ಠಾಣೆಯಲ್ಲಿ ಮಗಳು ಕಾಣೆಯಾದ ಬಗ್ಗೆ ದೂರು ದಾಖಲಿಸಿದ್ದರು ಎನ್ನಲಾಗಿದೆ. ಗುಪ್ತಚರ ಮಾಹಿತಿ ಮೇರೆಗೆ ಇಕ್ರಾಳನ್ನು ಬೆಂಗಳೂರು ಪೊಲೀಸರು ಕಳೆದ ಜನವರಿ 23 ರಂದು ಬಂಧಿಸಿದ್ದಾರೆ. ಅವಳು ಪಾಕಿಸ್ತಾನ ಎಂದು ಗೊತ್ತಾಗುತ್ತಿದ್ದಂತೆ ಗಡಿಪಾರು ಮಾಡಲಾಗಿದ್ದು, ಆಕೆಯನ್ನು ಇದೀಗ ಪಾಕಿಸ್ತಾನ ವಾಪಸ್ ಕಳುಹಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.












Click it and Unblock the Notifications