ಮಲ್ಲೇಶ್ವರಂ-ಪೀಣ್ಯ ಮೆಟ್ರೋ ರೈಲು ಮತ್ತಷ್ಟು ವಿಳಂಬ
ಬೆಂಗಳೂರು, ಸೆ.17 : ಮಲ್ಲೇಶ್ವರಂ - ಪೀಣ್ಯ ನಡುವಿನ ಮೆಟ್ರೋ ರೈಲು ಸಂಚಾರ ಮತ್ತಷ್ಟು ವಿಳಂಬವಾಗುವ ಸಾಧ್ಯತೆ ಇದೆ. ನವೆಂಬರ್ ನಲ್ಲಿ ರೈಲು ಸಂಚಾರ ಪ್ರಾರಂಭವಾಗಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ, ವಿವಿಧ ತಾಂತ್ರಿಕ ಕಾರಣಗಳಿಂದಾಗಿ ಸಂಚಾರ ವಿಳಂಬವಾಗುತ್ತಿದೆ.
9.9 ಕಿ.ಮೀ ಉದ್ದದ ಮಲ್ಲೇಶ್ವರಂ ನಿಂದ ಪೀಣ್ಯ ರೀಚ್ 3 ಮತ್ತು 3ಎ ನಡುವಿನ ಕಾಮಗಾರಿಯೂ ಪೂರ್ಣಗೊಂಡಿದ್ದು, ಪ್ರಾಯೋಗಿಕ ಸಂಚಾರವೂ ನಡೆದಿದೆ. ಆದರೆ, ರೈಲ್ವೆ ಇಲಾಖೆಯ ಸುರಕ್ಷತಾ ಪ್ರಮಾಣ ಪ್ರತ ದೊರೆಯದೆ ವಿಳಂಬವಾಗುತ್ತಿದೆ.

ರೈಲ್ವೆ ಇಲಾಖೆಯ ಆರ್ಎಇಎಸ್ಓ ತಂಡ ಮೆಟ್ರೋ ರೈಲಿನ ಪರೀಕ್ಷಾರ್ಥ ಸಂಚಾರ ವಿಕ್ಷೀಸಿ ವರದಿ ನೀಡಬೇಕಿತ್ತು. ಆದರೆ, ತಂಡ ಇನ್ನೂ ಆಗಮಿಸಿಲ್ಲ. ಸಂಚಾರದಲ್ಲಿ ರೈಲಿನ ವೇಗಕ್ಕೆ ಸಂಬಂಧಿಸಿದ ಒಪ್ಪಿಗೆಯೂ ಇನ್ನೂ ದೊರಕಿಲ್ಲ.
ಆಗಸ್ಟ್ ಅಂತ್ಯ ಅಥವ ಸೆಪ್ಟೆಂಬರ್ ಮೊದಲ ವಾರದಲ್ಲಿ ಈ ಪ್ರಮಾಣ ಪತ್ರಗಳು ಬಿಎಂಆರ್ ಸಿಎಲ್ ಗೆ ದೊರಕಬೇಕಾಗಿತ್ತು. ಆದರೆ, ತಂಡ ಇನ್ನೂ ಮಾರ್ಗದ ಪರೀಕ್ಷಾರ್ಥ ಸಂಚಾರ ವೀಕ್ಷಿಸಲು ಬೆಂಗಳೂರಿಗೆ ಆಗಮಿಸಿಲ್ಲ.
ತಂಡದ ಒಪ್ಪಿಗೆ ಬಳಿಕ ಬಿಎಂಆರ್ ಸಿಎಲ್ ರೈಲ್ವೆ ಇಲಾಖೆ ಆಯುಕ್ತರನ್ನು ಪರಿಶೀಲನೆಗಾಗಿ ಆಹ್ವಾನಿಸುತ್ತದೆ. ಆಯುಕ್ತರು ರೈಲಿನ ವಾಣಿಜ್ಯ ಸಂಚಾರಕ್ಕೆ ಅನುಮತಿ ನೀಡಿದ ಬಳಿಕ, ರೈಲು ಸಂಚಾರದ ದಿನಾಂಕ ನಿಗದಿಯಾಗಲಿದೆ. ಆದ್ದರಿಂದ ಸಂಚಾರ ಡಿಸೆಂಬರ್ ಅಂತ್ಯದ ವೇಳೆಗೆ ಆರಂಭವಾಗುವ ನಿರೀಕ್ಷೆ ಇದೆ.
ಮಲ್ಲೇಶ್ವರಂ-ಪೀಣ್ಯ ಮೆಟ್ರೋ ರೈಲು ಪ್ರಯಾಣ ಆರಂಭವಾದರೆ, ತುಮಕೂರು ರಸ್ತೆಯ ಸಂಚಾರ ದಟ್ಟಣೆ ಸಮಸ್ಯೆ ಕಡಿಮೆಯಾಗಲಿದೆ ಎಂದು ಅಂದಾಜಿಸಲಾಗಿದೆ. ಆದರೆ, ರೈಲು ಸಂಚಾರ ಆರಂಭ ವಿಳಂಬವಾಗುತ್ತಲೇ ಇದೆ.












Click it and Unblock the Notifications