ಬಿಡಿಎ ಭೂ ಒತ್ತುವರಿ ತೆರವು: 60 ಕೋಟಿ ರೂ.ಮೌಲ್ಯದ ಆಸ್ತಿ ವಶ
ಬೆಂಗಳೂರು, ಸೆ.30: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಆಸ್ತಿ ಕಬಳಿಸಿರುವ ಭೂ ಬಕಾಸುರರ ವಿರುದ್ಧ ಬಿಡಿಎ ಅಧಿಕಾರಿಗಳು ಆಪರೇಷನ್ ಆರಂಭಿಸಿದ್ದಾರೆ. ಬೆಂಗಳೂರಿನ ಎಚ್‌ಬಿಆರ್ ಬಡಾವಣೆಯಲ್ಲಿ ಒತ್ತುವರಿಗೆ ಒಳಗಾಗಿದ್ದ 60 ಕೋಟಿ ರೂ. ಮೌಲ್ಯದ ಬಿಡಿಎ ಆಸ್ತಿಯನ್ನು ಬಿಡಿಎ ಅಧಿಕಾರಿಗಳು ಗುರುವಾರ ಮರಳಿ ವಶಕ್ಕೆ ಪಡೆದಿದ್ದಾರೆ.
ಕಾರ್ಯಪಾಲಕ ಎಂಜಿನಿಯರ್ ಕುಮಾರ್ ನೇತೃತ್ವದ ಬಿಡಿಎ ಅಧಿಕಾರಿಗಳ ತಂಡವು ಈ ಒತ್ತುವರಿ ತೆರವು ಕಾರ್ಯಾಚರಣೆಯನ್ನು ನಡೆಸಿದ್ದು, ಎಚ್‌ಬಿಆರ್ ಬಡಾವಣೆಯ ಕಾಚರಕನಹಳ್ಳಿಯ ಸರ್ವೆ ಸಂಖ್ಯೆ 194 ರ 1 ಎಕರೆ 23 ಗುಂಟೆ ಜಮೀನನ್ನು ವಶಕ್ಕೆ ಪಡೆದುಕೊಂಡಿದೆ. ಒತ್ತುವರಿ ಮಾಡಿದ್ದ ಜಾಗದಲ್ಲಿ ನಿರ್ಮಿಸಿದ್ದ ಕಟ್ಟಡಗಳನ್ನು ತೆರವು ಮಾಡಿ ಬಿಡಿಎ ಅಧಿಕಾರಿಗಳು ಕಾಂಪೌಂಡ್ ಹಾಕಿದ್ದಾರೆ.
ಸದರಿ ಜಾಗವು ಬಿಡಿಎ ಬಡಾವಣೆ ನಿರ್ಮಾಣ ಮಾಡುವ ಸಲುವಾಗಿ 1978 ರಲ್ಲಿ ಪ್ರಾಥಮಿಕ ಅಧಿಸೂಚನೆ ಹೊರಡಿಸಿ ವಶಪಡಿಸಿಕೊಂಡಿತ್ತು. 1985 ರಲ್ಲಿ ಅಂತಿಮ ಅಧಿಸೂಚನೆಯನ್ನು ಹೊರಡಿಸಿತ್ತು. ಆದರೆ, ಭೂಮಾಲೀಕರು ಬಿಡಿಎ ವಿರುದ್ಧ ಹೈಕೋರ್ಟ್‌ನಲ್ಲಿ ಪ್ರಕರಣ ದಾಖಲಿಸಿದ್ದರು. ವಿಚಾರಣೆ ನಡೆಸಿದ ಹೈಕೋರ್ಟ್ ಬಿಡಿಎ ಪರ ತೀರ್ಪು ನೀಡಿತ್ತು. ಹೈಕೋರ್ಟ್ ತೀರ್ಪಿನ ವಿರುದ್ಧ ಸುಪ್ರೀಕೋರ್ಟಿನಲ್ಲಿ ದಾವೆ ಹೂಡಿದರಾದರೂ ಅರ್ಜಿಯನ್ನು ತಿರಸ್ಕರಿಸಿ ಸದರಿ ಜಮೀನನ್ನು ವಶಕ್ಕೆ ತೆಗೆದುಕೊಳ್ಳುವಂತೆ ಸುಪ್ರೀಂಕೋರ್ಟ್ ಆದೇಶ ನೀಡಿತ್ತು.

ತೀರ್ಪು ಬಂದು ಮೂವತ್ತು ವರ್ಷ ಕಳೆದರೂ ಜಮೀನನ್ನು ವಶಕ್ಕೆ ಪಡೆಯಲು ಸಾಧ್ಯವಾಗಿರಲಿಲ್ಲ. ಸುಮಾರು ಮೂವತ್ತು ವರ್ಷದಿಂದ ಸದರಿ ಜಮೀನಲ್ಲಿ ಅನಧಿಕೃತ ಕಟ್ಟಡ ನಿರ್ಮಾಣ ಮಾಡಿ ಭೂ ಮಾಲೀಕರು ಬಾಡಿಗೆ ಪಡೆಯುತ್ತಿದ್ದರು ಎನ್ನಲಾಗಿದೆ.
ಗುರುವಾರ ಜೆಸಿಬಿಗಳ ಸಮೇತ ಆಗಮಿಸಿದ ಬಿಡಿಎ ಅಧಿಕಾರಿಗಳು ಒಂದು ಕೈಗಾರಿಕಾ ಶೆಡ್, ಕಾರ್ಮಿಕರು ಉಳಿದುಕೊಳ್ಳಲು ನಿರ್ಮಾಣವಾಗಿದ್ದ 2 ಶೆಡ್ ಗಳನ್ನು ಹಾಗೂ ಕಾಂಪೌಂಡನ್ನು ನೆಲಸಮ ಮಾಡಿ ಸದರಿ ಜಾಗವನ್ನು ವಶಪಡಿಸಿಕೊಂಡಿದ್ದಾರೆ.ಈ ಜಾಗದ ಪ್ರಸ್ತುತ ಮಾರುಕಟ್ಟೆ ಮೌಲ್ಯ 60 ಕೋಟಿ ರೂಪಾಯಿ ಎಂದು ಬಿಡಿಎ ಅಧಿಕಾರಿಗಳು ತಿಳಿಸಿದ್ದಾರೆ.
ವಿವಾದಿತ ಪ್ರಕರಣಗಳ ತ್ವರಿತ ಇತ್ಯರ್ಥಕ್ಕೆ ಸಿದ್ಧತೆ: ಬಿಡಿಎಗೆ ಸೇರಬೇಕಿದ್ದ ಆಸ್ತಿಗಳನ್ನು ಮರು ಸ್ವಾಧೀನ ಪಡೆಯುವ ಸಂಬಂಧ ಹಲವಾರು ವ್ಯಾಜ್ಯಗಳು ನ್ಯಾಯಾಲಯಗಳಲ್ಲಿ ಬಾಕಿಯಿವೆ. ಈ ಪ್ರಕರಣಗಳನ್ನು ತ್ವರಿತವಾಗಿ ವಿಲೇವಾರಿ ಮಾಡಿ ಇತ್ಯರ್ಥ ಮಾಡುವಂತೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ ರಾಜೇಶ್ ಗೌಡ ಅವರು ಸೂಚಿಸಿದ್ದಾರೆ. ಈ ನಿಟ್ಟಿನಲ್ಲಿ ಬಿಡಿಎ ಭೂ ವ್ಯಾಜ್ಯಗಳ ಇತ್ಯರ್ಥಕ್ಕೆ ಶರವೇಗ ನೀಡಲಾಗಿದೆ ಎಂದು ಬಿಡಿಎ ಅಧಿಕಾರಿ ಮೂಲಗಳಿಂದ ತಿಳಿದು ಬಂದಿದೆ.

ಬಿಡಿಎ ಅಧ್ಯಕ್ಷರ ಪ್ರತಿಕ್ರಿಯೆ: ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬಿಡಿಎ ಅಧ್ಯಕ್ಷ ಎಸ್.ಆರ್.ವಿಶ್ವನಾಥ್ ಅವರು, ಬಿಡಿಎಗೆ ಸೇರಬೇಕಾಗಿದ್ದ ಅಮೂಲ್ಯವಾದ ಆಸ್ತಿಗಳನ್ನು ಒತ್ತುವರಿದಾರರು ಮತ್ತು ಭೂಗಳ್ಳರು ಲಪಟಾಯಿಸುವ ಪ್ರಕರಣಗಳಿಗೆ ತಿಲಾಂಜಲಿ ಹಾಕಲು ಸಂಕಲ್ಪ ಮಾಡಿದ್ದೇವೆ. ಅದರಂತೆ, ನ್ಯಾಯಾಲಯದ ಸ್ಪಷ್ಟ ಆದೇಶಗಳನ್ನು ಪಡೆದುಕೊಂಡು ಪ್ರಾಧಿಕಾರ ತನ್ನ ವಶಕ್ಕೆ ತೆಗೆದುಕೊಳ್ಳುತ್ತದೆ. ಒತ್ತುವರಿದಾರರು ಎಷ್ಟೇ ಪ್ರಭಾವಿಗಳಾಗಿದ್ದರೂ ಅವರಿಂದ ಬಿಡಿಎ ಆಸ್ತಿಯನ್ನು ವಶಪಡಿಸಿಕೊಳ್ಳಲಾಗುತ್ತದೆ ಎಂದು ತಿಳಿಸಿದ್ದಾರೆ.
ರಿಯಾಯಿತಿ ದರದಲ್ಲಿ ನಿವೇಶನಕ್ಕೆ ಮನವಿ:
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಕೇಂದ್ರ ಸಂಘದ ಅಧ್ಯಕ್ಷರಾದ ಸಿ ಎಸ್ ಷಡಕ್ಷರಿಯವರು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಎಸ್.ಆರ್. ವಿಶ್ವನಾಥ್ ಅವರನ್ನು ಭೇಟಿ ಮಾಡಿ ಪ್ರಾಧಿಕಾರದ ವತಿಯಿಂದ ಬೆಂಗಳೂರರು ನಗರದಲ್ಲಿ ನಿರ್ಮಿಸಿರುವ ಫ್ಲಾಟ್ ಗಳನ್ನು ಸರ್ಕಾರಿ ನೌಕರರಿಗೆ ರಿಯಾಯಿತಿ ದರದಲ್ಲಿ ಒದಗಿಸಿಕೊಡಬೇಕೆಂದು ಮಾನ್ಯ ಅಧ್ಯಕ್ಷರಲ್ಲಿ ಮನವಿ ಮಾಡಿದರು.ಮುಂದಿನ ಬಿಡಿಎ ಯೋಜನೆಯಲ್ಲಿ ಸರ್ಕಾರಿ ನೌಕರರಿಗೆ ಇಂತಿಷ್ಟು ಫ್ಲಾಟ್ ಗಳನ್ನು ಮೀಸಲಿಡುವ ಸಂಬಂಧ ಬಿಡಿಎ ಅಧಿಕಾರಿಗಳ ಸಭೆ ನಡೆಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ ಎನ್ನಲಾಗಿದೆ. ಈ ಸಂದರ್ಭದಲ್ಲಿ ಕೇಂದ್ರ ಸಂಘದ ಪದಾಧಿಕಾರಿಗಳಾದ ರುದ್ರಪ್ಪ ಬಸವರಾಜ್, ಶ್ರೀನಿವಾಸ್, ಹರ್ಷ,ಮಾಲ್ತೇಶ್,ಚೇತನ್ ಕುಮಾರ್ ಹಾಗೂ ದಿನೇಶ್ ಉಪಸ್ಥಿತರಿದ್ದರು.












Click it and Unblock the Notifications