ಬೆಂಗಳೂರಿನಲ್ಲಿ ನೀರಿನ ಅಭಾವ: 'ಒಬ್ಬರಿಗೆ ಒಂದೇ ಕ್ಯಾನ್ ನೀರು' ಹೊಸ ನಿಯಮ
ಬೆಂಗಳೂರು, ಮಾರ್ಚ್ 06: ಬೆಂಗಳೂರು ನಗರದಲ್ಲಿ ನೀರಿನ ಅಭಾವ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಕುಡಿಯುವ ನೀರಿಗೂ ಜನ ಕ್ಯಾನ್ ಹಿಡಿದು ಅಲೆಯುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ನಗರದ ವಿವಿಧ ಕಡೆಗಳಲ್ಲಿ ರಿವರ್ಸ್ ಆಸ್ಮೋಸಿಸ್ (ಆರ್‌ಒ) ಘಟಕಗಳು ಮುಚ್ಚುತ್ತಿದ್ದು, ಇನ್ನು ಕೆಲವು ಕಡೆಗಳಲ್ಲಿ ಒಬ್ಬರಿಗೆ ಒಂದೇ ಕ್ಯಾನ್ ನೀರು ಮಾತ್ರ ಎನ್ನುವ ನಿಮಯ ಅನ್ವಯವಾಗುತ್ತಿದೆ.
ಬೆಂಗಳೂರು ನಗರದಲ್ಲಿ ನೀರಿನ ಬಿಕ್ಕಟ್ಟು ಎದುರಾಗಿದೆ. ಈ ಬಾರಿ ಬೇಸಿಗೆ ಆರಂಭದಲ್ಲೇ ಕೊಳವೆ ಬಾವಿಗಳು ಬರಿದಾಗಿವೆ. ಕಾವೇರಿ ನೀರು ಸರಿಯಾಗಿ ಬರುತ್ತಿಲ್ಲ ಇದರಿಂದ ಜನರು ನೀರಿಗಾಗಿ ಪರದಾಡುತ್ತಿದ್ದು, ಖಾಸಗಿ ಟ್ಯಾಂಕರ್ ನೀರಿನ ಮೊರೆ ಹೋಗಿದ್ದಾರೆ. ಆದರೆ ಟ್ಯಾಂಕರ್ ನೀರಿನ ಬೆಲೆ ದಿನದಿಂದ ದಿನಕ್ಕೆ ಗಗನಕ್ಕೇರುತ್ತಿರುವ ಕಾರಣ ಕೊನೆಯ ಮಟ್ಟಿಗೆ ಕುಡಿಯುವ ನೀರಿಗಾಗಿ ಜನರು ಆರ್‌ಒ ಶುದ್ಧ ನೀರಿನ ಘಟಕದತ್ತ ಚಿತ್ತ ಹರಿಸಿದ್ದಾರೆ.

ಆರ್‌ಒ ಘಟಕಗಳಲ್ಲಿಯೂ ನೀರಿನ ಅಭಾವ ಉಂಟಾಗುತ್ತಿದ್ದು, ಎಲ್ಲರಿಗೂ ನೀರು ಕೊಡಬೇಕಾಗಿರುವುದರಿಂದ ಒಬ್ಬರಿಗೆ ಒಂದೇ ಕ್ಯಾನ್ ನೀರು ಮಾತ್ರ ಎನ್ನುವ ಹೊಸ ನಿಯಮ ಆರಂಭವಾಗಿದೆ. ನಗರದ ಹಲವೆಡೆ ಅದರಲ್ಲೂ ರಾಜರಾಜೇಶ್ವರಿ ನಗರದ ಆರ್‌ಓ ಪ್ಲಾಂಟ್‌ನಲ್ಲಿ ಈ ಬೋರ್ಡ್ ಹಾಕಿರುವುದು ಕಂಡು ಬರುತ್ತಿದೆ.
ನೀರಿನ ಕೊರತೆಯಿಂದ ಬೆಂಗಳೂರು ನಗರದಲ್ಲಿನ ಅನೇಕ ರಿವರ್ಸ್ ಆಸ್ಮೋಸಿಸ್ (ಆರ್‌ಒ) ಘಟಕಗಳು ಮುಚ್ಚಿದ್ದು, ಕೆಲವು ಮುಚ್ಚುವ ಹಂತದಲ್ಲಿದೆ. ಇನ್ನೂ ಕೆಲವು ಆರ್‌ಒ ಘಟಕಗಳಲ್ಲಿ ಹೆಚ್ಚುತ್ತಿರುವ ವಿದ್ಯುತ್ ಮತ್ತು ನೀರಿನ ವೆಚ್ಚವನ್ನು ನಿರ್ವಹಿಸಲು 20 ಲೀಟರ್ ಕುಡಿಯುವ ನೀರಿನ ಬೆಲೆಯನ್ನು ದುಪ್ಪಟ್ಟು ಮಾಡಲಾಗಿದೆ. ಯಶವಂತಪುರ, ಆರ್.ಆರ್.ನಗರ ಮತ್ತು ಕೆಂಗೇರಿ ಭಾಗದಲ್ಲಿ ಬೋರ್‌ವೆಲ್‌ನಲ್ಲಿ ನೀರಿನ ಮಟ್ಟ ತಗ್ಗಿದ್ದು, ಯಶವಂತಪುರದಲ್ಲಿ ಕಳೆದ ತಿಂಗಳಲ್ಲಿ 15ಕ್ಕೂ ಹೆಚ್ಚು ಆರ್‌ಒ ಘಟಕಗಳನ್ನು ಮುಚ್ಚಲಾಗಿದೆ.












Click it and Unblock the Notifications