ರಸ್ತೆಯಲ್ಲಿ ಗುಂಡಿ ನೋಡಿದ್ರೆ ಮಿಸ್ ಕಾಲ್ ಕೊಡಿ!
ಬೆಂಗಳೂರು, ಅ.5 : ಬೆಂಗಳೂರಿನ ರಸ್ತೆಗಳ ಗುಂಡಿಗಳನ್ನು ಮುಚ್ಚಲು ಬಿಬಿಎಂಪಿ ಕೆಲವು ದಿನಗಳ ಹಿಂದೆ ಲಕ್ಷಾಂತರ ರೂ.ಗಳನ್ನು ಬಿಡುಗಡೆ ಮಾಡಿ, ಕಾರ್ಯಾಚರಣೆ ಪ್ರಾರಂಭಿಸಿತ್ತು. ಆದರೂ ನಿಮಗೆ ರಸ್ತೆಯಲ್ಲಿ ಗುಂಡಿ ಕಾಣಿಸಿಕೊಂಡರೆ ಮಿಸ್ ಕಾಲ್ ಕೊಡಬಹುದು.
ಹೌದು, ಬೆಂಗಳೂರು ರಸ್ತೆಗಳಲ್ಲಿನ ಗುಂಡಿಗಳನ್ನು ಮುಚ್ಚಲು ನಗರದ ಸ್ವಯಂಸೇವಾ ಸಂಸ್ಥೆಯೊಂದು ಈ ಮಿಸ್ ಕಾಲ್ ಅಭಿಯಾನ ಪ್ರಾರಂಭಿಸಿದೆ. ಈ ಅಭಿಯಾನ ಪ್ರಾರಂಭವಾದ ಕೆಲವು ದಿನಗಳಲ್ಲೇ ಹಲವಾರು ಮಿಸ್ ಕಾಲ್ ಗಳು ಬಂದಿವೆ.

ನೀವು ಮಿಸ್ ಕಾಲ್ ನೀಡಿದ ನಂತರ ಆ ಗುಂಡಿಗಳನ್ನು ಬಿಬಿಎಂಪಿಯು ಮುಚ್ಚಿದರೆ ನಿಮಗೆ ಮಾಹಿತಿ ತಿಳಿಸಲಾಗುತ್ತದೆ. ಸಂಸ್ಥೆಯ ನೌಕರೊಬ್ಬರು ಹಳೆ ಮದ್ರಾಸ್ ರಸ್ತೆಯಲ್ಲಿ ಗುಂಡಿಗೆ ಬಿದ್ದು ಗಾಯಗೊಂಡ ನಂತರ ಈ ಅಭಿಯಾನ ಪ್ರಾರಂಭಿಸಲಾಗಿದೆ.
Jhatkaa.org ಈ ಅಭಿಯಾನ ಪ್ರಾರಂಭಿಸಿದ ಮೇಲೆ ನಾಲ್ಕು ಸಾವಿರಕ್ಕೂ ಅಧಿಕ ಕರೆಗಳನ್ನು ದಾಖಲಿಸಿಕೊಂಡಿದೆ. ಈ ಗುಂಡಿಗಳ ಸಮಸ್ಯೆ ಮುಂದಿಟ್ಟುಕೊಂಡು ಬಿಬಿಎಂಪಿ ಆಯುಕ್ತರೊಂದಿಗೆ ಸಭೆ ನಡೆಸುವ ಕುರಿತು ಸಂಸ್ಥೆ ಚಿಂತನೆ ನಡೆಸಿದೆ. (ಗುಂಡಿ ಮುಕ್ತವಾಗಲಿವೆ ಬೆಂಗಳೂರು ರಸ್ತೆಗಳು)
ಬಿಬಿಎಂಪಿ ಈ ವರ್ಷ ರಸ್ತೆಗಳ ಅಭಿವೃದ್ಧಿಗಾಗಿಯೇ 700 ಕೋಟಿ ರೂ. ಮೀಸಲಿಡಬೇಕು ಎಂದು ಚಿಂತಿಸುತ್ತಿದೆ. ಈ ಹಣ ರಸ್ತೆಗಳ ಅಭಿವೃದ್ಧಿಗಾಗಿಯೇ ಉಪಯೋಗವಾಗಬೇಕೆಂಬುದು ಸಂಸ್ಥೆಯ ಕಾಳಜಿ. ಆದ್ದರಿಂದ ಗುಂಡಿಗಳ ಕರೆಗಳನ್ನು ಸ್ವೀಕರಿಸಿ, ಬಿಬಿಎಂಪಿಗೆ ತಲುಪಿಸಲಿದೆ.
ನೀವು ಗುಂಡಿ ಕಂಡ ತಕ್ಷಣ 9243511888 ಮಿಸ್ ಕಾಲ್ ನೀಡಿದರೆ ನಿಮ್ಮ ಹೆಸರು ಸಂಸ್ಥಯಲ್ಲಿ ನೋಂದಾವಣೆಯಾಗುತ್ತದೆ. ನಂತರ ನೀವು ಕರೆ ಮಾಡಿದ ಗುಂಡಿಗಳನ್ನು ಮುಚ್ಚಿದರೆ, ಅದನ್ನು ನಿಮಗೆ ತಿಳಿಸಲಾಗುತ್ತದೆ.












Click it and Unblock the Notifications