ವಾಹನ ನಿಲ್ಲಿಸುವ ಮುನ್ನ ಹುಷಾರ್! ಬೆಂಗಳೂರಿನಲ್ಲಿ ಮತ್ತೆ ಶುರುವಾಯ್ತು ಟೋಯಿಂಗ್
ಬೆಂಗಳೂರಿಗರ ಪಾಲಿಗೆ ಕಹಿಸುದ್ದಿಯೊಂದು ಹೊರಬಿದ್ದಿದೆ. ಈಗಾಗಲೇ ವಾಹನ ಪಾರ್ಕಿಂಗ್ ವಿಚಾರದಲ್ಲಿ ರಾಜ್ಯ ಸರ್ಕಾರ ಹಾಗೂ ಪೊಲೀಸರು ಟೈಟ್ ರೂಲ್ಸ್ ಜಾರಿ ಮಾಡುತ್ತಿದೆ. ಇದೂ ಸಾಲದು ಎಂಬಂತೆ ವಾಹನ ಮಾಲೀಕರಿಗೆ ಮತ್ತೆ ದೊಡ್ಡ ತಲೆನೋವು ನೀಡುವ ಕೆಲಸ ಶುರುವಾಗುತ್ತಿದೆ. ಸಿಲಿಕಾನ್ ಸಿಟಿಯಲ್ಲಿ ಹಲವು ವರ್ಷಗಳಿಂದ ಸೈಲೆಂಟಾಗಿದ್ದ ಟೋಯಿಂಗ್ ಇನ್ನು ಮುಂದೆ ಮತ್ತೆ ಸದ್ದು ಮಾಡಲಿದೆ. ಹೌದು ಬೆಂಗಳೂರಿನಲ್ಲಿ ಮತ್ತೆ ಟೋಯಿಂಗ್ ಶುರು ಮಾಡುವುದಾಗಿ ಗೃಹಸಚಿವ ಜಿ.ಪರಮೇಶ್ವರ್ ಅವರು ಮಹತ್ವದ ಮಾಹಿತಿ ಹಂಚಿಕೊಂಡಿದ್ದಾರೆ. ಇದು ಸಿಲಿಕಾನ್ ಸಿಟಿ ಮಂದಿಗೆ ಶಾಕ್ ನೀಡಿದಂತಾಗಿದೆ.
ಹೌದು ಬೆಂಗಳೂರಿಗರು ಹಲವು ವರ್ಷಗಳ ಹಿಂದೆ ಪೊಲೀಸರಿಗಿಂತ ಹೆಚ್ಚಾಗಿ ಈ ಟೋಯಿಂಗ್ ವಾಹನಗಳಿಗೆ ಹೆದರುತ್ತಿದ್ದರು. ಬೆಂಗಳೂರಿನಲ್ಲಿ ಪಾರ್ಕಿಂಗ್ ದೊಡ್ಡ ಸಮಸ್ಯೆಯಾಗಿದ್ದು, ಎಲ್ಲೆಂದರಲ್ಲಿ ವಾಹನ ನಿಲ್ಲಿಸುವಂತಿರಲಿಲ್ಲ. ಕ್ಷಣ ಮಾತ್ರದಲ್ಲಿ ಟೋಯಿಂಗ್ ವಾಹನ ಬಂದು ನೋ ಪಾರ್ಕಿಂಗ್ ಜಾಗದಲ್ಲಿ ನಿಲ್ಲಿಸುತ್ತಿದ್ದ ಬೈಕ್ ಅಥವಾ ಕಾರನ್ನು ಎತ್ತಾಕೊಂಡು ಹೋಗುತ್ತಿತ್ತು. ಈ ವೇಳೆ ಟೋಯಿಂಗ್ ಸಿಬ್ಬಂದಿ ಮೇಲೆ ವಾಹನ ಮಾಲೀಕರು ಗರಂ ಆಗುತ್ತಿದ್ದರು.

ಟೋಯಿಂಗ್ ಮಾಡುತ್ತಿದ್ದ ವಾಹನಗಳಿಗೆ ಭಾರಿ ದಂಡ ವಿಧಿಸಿ, ಅದನ್ನು ಪಾವತಿಸಿದರೆ ಮಾತ್ರವೇ ವಾಹನಗಳನ್ನು ವಾಪಸ್ ಕೊಡಲಾಗುತ್ತಿತ್ತು. ಟೋಯಿಂಗ್ ಸಿಬ್ಬಂದಿ ಕೂಡ ಮನಬಂದಂತೆ ಬೈಕ್‌ಗಳನ್ನು ಎತ್ತಾಡುತ್ತಿದ್ದರು. ಈ ವೇಳೆ ವಾಹನಗಳಿಗೆ ಹಾನಿ ಕೂಡ ಆಗುತ್ತಿತ್ತು. ಇದರ ವಿರುದ್ಧ ನಡುರಸ್ತೆಗಳಲ್ಲೇ ಬಡಿದಾಟವು ಜೋರಾಗಿ ನಡೆಯುತ್ತಿದ್ದವು. ಕೊನೆಗೆ ಟೋಯಿಂಗ್ ವಿರುದ್ಧ ಜನ ರೊಚ್ಚಿಗೆದ್ದ ಕಾರಣ ಈ ಹಿಂದೆ ಬಿಜೆಪಿ ಸರ್ಕಾರ ಬಸವರಾಜ ಬೊಮ್ಮಾಯಿ ಸಿಎಂ ಆಗಿದ್ದಾಗ 2022ರಲ್ಲಿ ಈ ಟೋಯಿಂಗ್ ರದ್ದು ಮಾಡಲಾಗಿತ್ತು. ಇದರಿಂದ ಜನ ನಿಟ್ಟುಸಿರುಬಿಟ್ಟಿದ್ದರು. ಈಗ ಮತ್ತೆ ಟೋಯಿಂಗ್ ಶುರು ಮಾಡಲು ಸರ್ಕಾರ ನಿರ್ಧರಿಸಿದೆ.
ಟೋಯಿಂಗ್ ಆರಂಭಕ್ಕೆ ಕಾರಣವೇನು?
ಬೆಂಗಳೂರಿನಲ್ಲಿ ದಿನೇ ದಿನೇ ಟ್ರಾಫಿಕ್ ಸಮಸ್ಯೆ ಹೆಚ್ಚಾಗುತ್ತಿದೆ. ಇದಕ್ಕೆ ಕಡಿವಾಣ ಹಾಕುವ ಉದ್ದೇಶದೊಂದಿಗೆ ವಾಹನ ಮಾಲೀಕರ ಮೇಲೆ ಟೋಯಿಂಗ್ ಅಸ್ತ್ರ ಪ್ರಯೋಗಿಸಲು ಮುಂದಾಗಿದೆ. ಈ ಬಗ್ಗೆ ಮಾಹಿತಿ ನೀಡಿರುವ ಹೋಂ ಮಿನಿಸ್ಟರ್ ಪರಮೇಶ್ವರ್, ಪೊಲೀಸ್ ಸಿಬ್ಬಂದಿ ಮತ್ತು ಹೋಂ ಗಾರ್ಡ್ಸ್ಗಳನ್ನ ಬಳಸಿಕೊಂಡು ಟೋಯಿಂಗ್ ಮಾಡುವುದಾಗಿ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಪ್ರತಿನಿತ್ಯ ಟ್ರಾಫಿಕ್ ಸಮಸ್ಯೆ ಹೆಚ್ಚುತ್ತಿದ್ದು, ಈ ಬಗ್ಗೆ ಸಂಪೂರ್ಣ ಮಾಹಿತಿ ತೆಗೆದುಕೊಂಡಿದ್ದೇನೆ. ಬಿಬಿಎಂಪಿ ಹಾಗೂ ಪೊಲೀಸರು ಒಟ್ಟಾಗಿ ಕೆಲಸ ಮಾಡಿದರೆ ಟ್ರಾಫಿಕ್ ಸಮಸ್ಯೆ ನಿಜವಾಗಿ ಬಗೆಹರಿಯುತ್ತೆ. ಸದ್ಯ ಬೆಂಗಳೂರಿನ 19 ಕಡೆ ಹೆಚ್ಚು ಟ್ರಾಫಿಕ್ ಜಾಮ್ ಇದೆ ಎಂದು ಟ್ರಾಫಿಕ್ ಪೊಲೀಸರು ಮಾಹಿತಿ ನೀಡಿದ್ದಾರೆ. ಈ ಬಗ್ಗೆ ಒಂದು ವಾರದೊಳಗೆ ವರದಿ ನೀಡುವಂತೆ ಸೂಚನೆ ನೀಡಿದ್ದು, ನಗರದ ಟ್ರಾಫಿಕ್ ಸಮಸ್ಯೆಗೆ ಶಾಶ್ವತ ಪರಿಹಾರ ನೀಡಲು ಕೆಲಸ ಮಾಡುವುದಾಗಿ ಹೇಳಿದ್ದಾರೆ. ಸರ್ಕಾರದ ಈ ನಿರ್ಧಾರಕ್ಕೆ ಸಾರ್ವಜನಿಕರು ವಿರೋಧ ವ್ಯಕ್ತಪಡಿಸುವ ಸಾಧ್ಯತೆ ಇದೆ. ಇದು ಎಷ್ಟರಮಟ್ಟಿಗೆ ಕಾರ್ಯರೂಪಕ್ಕೆ ಬರಲಿದೆ ಎಂದು ಸದ್ಯದಲ್ಲೇ ತಿಳಿಯಲಿದೆ.












Click it and Unblock the Notifications