ಮಾಡೋದು ಕಳ್ಳತನ ಮೈಮೇಲೆ ಕೆ.ಜಿ. ಗಟ್ಟಲೇ ಚಿನ್ನ!; ಶೋಕಿ ಸಲೀಂ ಬಂಧನ
ಬೆಂಗಳೂರು, ಆ. 30: ಅವನು ನೋಡೋಕೆ ಸಿನಿಮಾ ನಟನ ತರ ಇದ್ದಾನೆ. ಅವನ ಮೈತುಂಬಾ ಚಿನ್ನದ ಆಭರಣ. ಇನ್ನು ಅವನ ಚೋಟುದ್ದ ಮಗ ಕೂಡ ಹೊರಲಾರದಷ್ಟು ಚಿನ್ನದ ಆಭರಣ ಧರಿಸಿ. ಪತ್ನಿಗೂ ಹೊದ್ದು ಮಲಗುವಷ್ಟು ಚಿನ್ನಾಭರಣಗಳ ಉಡುಗೊರೆ. ಇದ್ಯಾವುದೋ ಉದ್ಯಮಿಯ ಜೀವನವಲ್ಲ. ಬದಲಿಗೆ ಕಳೆದ ನಾಲ್ಕು ವರ್ಷದಿಂದ ಪೊಲೀಸರ ಕೈಗೆ ಸಿಗದೇ ಮನೆಗಳ್ಳತನ ಮಾಡುತ್ತಿದ್ದ ಬೆಂಗಳೂರಿನ ನಂಬರ್ ಒನ್ ಮನೆಗಳ್ಳನ ಅಸಲಿ ಕಥೆ. ನಾಲ್ಕು ವರ್ಷದಿಂದ ಪೊಲೀಸರ ಕೈಗೆ ಸಿಗದೇ ಮನೆ ಕಳ್ಳತನ ಮಾಡುತ್ತಿದ್ದ ಸರಗಳ್ಳ ಮತ್ತು ಆತನ ಇಬ್ಬರು ಸಹಚರರನ್ನು ಬಸವನಗುಡಿ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಗಳಿಂದ ಮೂರು ಕೆ.ಜಿ ತೂಕದ ಚಿನ್ನದ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ.
ಯಾರೀ ಶೋಕಿ ಲಾಲ್ :
ಸಲೀಂ ಶೇಖ್ ಅಲಿಯಾಸ್ ಶೋಕಿ ಸಲೀಂ ಬೆಂಗಳೂರಿನ ನಂಬರ್ ಒನ್ ಮನೆಗಳ್ಳ. ಗೋಲ್ಡ್ ಮ್ಯಾನ್ ಅಂತಲೇ ಫೇಮಸ್. ಶೋಕಿ ಜೀವನಕ್ಕಾಗಿಯೇ ಮನೆಗಳ್ಳತನ ಆಯ್ಕೆ ಮಾಡಿಕೊಂಡಿದ್ದಾನೆ. ಕಳೆದ ನಾಲ್ಕು ವರ್ಷದಿಂದ ಈತ ಮಾಡಿದ್ದ ಸುಮಾರು ಹನ್ನೆರಡು ಮನೆಗಳ್ಳತನ ಪ್ರಕರಣಗಳು ಪತ್ತೆಯಾಗಿವೆ. ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬೆಂಗಳೂರು ನಗರ ಪೊಲೀಸ್ ಆಯುಕ್ತ ಶೋಕಿ ಸಲೀಂನ ಪೊಲೀಸರನ್ನೇ ಯಾಮಾರಿಸಿ ಕಳ್ಳತನ ಮಾಡುತ್ತಿದ್ದ. ಫಿಂಗರ್ ಫ್ರಿಂಟ್ ಸುಳಿವಿನ ಮೇಲೆ ಈತನನ್ನು ಬಂಧಿಸಿದ್ದು, ಮೂರು ಕೆ.ಜಿ. ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.

ಪ್ಲೈಟ್ ನಲ್ಲಿ ಹಾರಾಟ :
ಶೋಕಿ ಸಲೀಂ ಅಲಿಯಾಸ್ ಸಲೀಂ ಶೇಖ್ ಮೂಲತಃ ಮುಂಬಯಿನವ. ಐಷಾರಾಮಿ ಜೀವನ ಮೈಗೂಡಿಸಿಕೊಂಡಿರುವ ಈತ ಕಳ್ಳನಾಗಿ ಪರಿವರ್ತನೆಯಾಗಿದ್ದ. ಕದ್ದ ಆಭರಣದಲ್ಲಿ ತನಗಿಷ್ಟ ಬಂದ ಚಿನ್ನಾಭರಣ ಹಾಕಿಕೊಂಡು ಫೋಸ್ ಕೊಡೋದು ಈತನ ಖಯಾಲಿ.ಕಳ್ಳತನ ಪ್ರಕರಣದಲ್ಲಿ ಜೈಲಿಗೆ ಹೋಗುವ ಈತನ ಶ್ರೀಮಂತಿಕೆ ರೋಚಕ ಕಥೆ ಕೇಳಿ ಹಿಂಬಾಲಕು ಸೃಷ್ಟಿಯಾಗುತ್ತಾರಂತೆ. ಮಾತ್ರವಲ್ಲ, ಜೈಲಿನಲ್ಲಿ ಪರಿಚಯವಾಗುವ ಹುಡುಗರ ಸಂಪರ್ಕ ಬೆಳಿಸಿ ತನ್ನದೇ ಚೋರ್ ಗ್ಯಾಂಗ್ ಕಟ್ಟುತ್ತಿದ್ದ. ಮುಂಬಯಿನಿಂದ ಬೆಂಗಳೂರಿಗೆ ಫ್ಲೈಟ್ ನಲ್ಲಿಯೇ ಬಂದು ಇಲ್ಲಿ ಕಳ್ಳತನ ಕಾರ್ಯಾಚರಣೆಗೆ ಇಳಿಯುತ್ತಿದ್ದ.

ಬೈಕ್ ಕೈಚಳಕ ಮಾಡ್ತಿದ್ದ ಸಲೀಂ:
ಮುಂಬಯಿನಿಂದ ಫ್ಲೈಟ್‌ನಲ್ಲಿ ಬರುವ ಈ ಶೋಕಿ ಲಾಲ ಬೆಂಗಳೂರಿನಲ್ಲಿ ಕೈಚಳಕ ತೋರುತ್ತಿದ್ದ. ಬಳಿಕ ಫ್ಲೈಟ್‌ನಲ್ಲಿ ಹೈದರಾಬಾದ್‌ಗೆ ಹೋಗಿ ಕದ್ದ ಮಾಲು ವಿಲೇವಾರಿ ಮಾಡುತ್ತಿದ್ದ. ಕದ್ದ ಮಾಲಲ್ಲಿ ಬಂದ ಆದಾಯದಲ್ಲಿ ಇಡೀ ಕುಟುಂಬವೇ ಮೋಜು ಮಸ್ತಿ ಮಾಡುತ್ತಿದ್ದ. ಈತ ಕೈಗೆ ಅರ್ಧ ಕೆ.ಜಿ ಚಿನ್ನ ಧರಿಸುತ್ತಾನೆ. ಕುತ್ತಿಗೆಗೆ ಹಾಕುವ ಚಿನ್ನದ ಸರ ಹಗ್ಗದಂತಿರಬೇಕು. ಹೀಗೆ ಬೆಂಗಳೂರಿನ ಮನೆಗಳ್ಳತನ ಪ್ರಕರಣ ಬೆನ್ನಟ್ಟಿದ ಬಸವನಗುಡಿ ಪೊಲೀಸರಿಗೆ ಯಾವುದೇ ಕ್ಲೂ ಸಿಕ್ಕಿರಲಿಲ್ಲ. ವೃತ್ತಿಪರ ಮನೆಗಳ್ಳರ ಮಾಹಿತಿ ಆಧರಿಸಿ ಕಾರ್ಯಾಚರಣೆಗೆ ಇಳಿದಿದ್ದರು. ಶೋಕಿ ಸಲೀಂನ ಫಿಂಗರ್ ಪ್ರಿಂಟ್ ಮಾಹಿತಿ ಆಧರಿಸಿ ಜಾಲಾಡಿದಾಗ ಅನೇಕ ಕಳ್ಳತನ ಪ್ರಕರಣಗಳು ಮಾಡಿರುವ ಅನುಮಾನ ಮೂಡಿದ ಸತತ ಹಲವು ದಿನ ಕಾರ್ಯಾಚರಣೆ ನಡೆಸಿ ಬಂಧಿಸಿದಾಗ ಬೆಂಗಳೂರಿನ ಸುಮಾರು ಹನ್ನೆರಡು ಕಳ್ಳತನ ಪ್ರಕರಣ ಪತ್ತೆಯಾಗಿವೆ.
ಈತನಿಂದ 1.60 ಕೋಟಿ ರೂ. ಮೌಲ್ಯದ ಚಿನ್ನಾಭರಣ, 18 ಕೆ.ಜಿ. ಬೆಳ್ಳಿ ವಸ್ತುಗಳನ್ನು ಬಸವನಗುಡಿ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಇನ್ನು ಈತ ಎಸಗಿರುವ ಕಳ್ಳತನ ಪ್ರಕರಣಗಳ ಹೆಚ್ಚಿನ ಮಾಹಿತಿಯನ್ನು ಪೊಲೀಸರು ಕಲೆ ಹಾಕುತ್ತಿದ್ದಾರೆ. ಕಳೆದ ನಾಲ್ಕು ವರ್ಷದಿಂದ ಪೊಲೀಸರ ಕೈಗೆ ಸಿಗದೇ ಚಳ್ಳೆ ಹಣ್ಣು ತಿನ್ನಿಸುತ್ತಿದ್ದ ಶೋಕಿ ಸಲಿಂ ನನ್ನು ಬಂಧಿಸಿದ ಪೊಲೀಸರ ಕಾರ್ಯಶೈಲಿಯನ್ನು ಪೊಲೀಸ್ ಆಯುಕ್ತರು ಶ್ಲಾಘಿಸಿದ್ದಾರೆ.












Click it and Unblock the Notifications