NICE Road: ಭೂಮಿಕೊಟ್ಟ ಮಾಲೀಕರಿಗೆ ನಿವೇಶನ, 200ಕ್ಕೂ ಹೆಚ್ಚು ತಾಲ್ಲೂಕುಗಳು ಬರಪೀಡಿತ: ಜಿ.ಪರಮೇಶ್ವರ

ಬೆಂಗಳೂರು: ಬೆಂಗಳೂರು-ಮೈಸೂರು ಇನ್‌ಫ್ರಾಸ್ಟ್ರಕ್ಚರ್ ಕಾರಿಡಾರ್ (NICE) ಗೆ ಭೂಮಿ ನೀಡಿದವರಿಗೆ ನಿವೇ‍ಶನ ನೀಡಲು ರಾಜ್ಯ ಸಚಿವ ಸಂಪುಟವು ಮಾನವೀಯತೆ ದೃಷ್ಟಿಯಿಂದ ನಿರ್ಧರಿಸಿದೆ. ಭೂಮಿ ಕಳೆದುಕೊಳ್ಳುವವರಿಗಿಂತ ಸಚಿವ ಸಂಪುಟದಲ್ಲಿರುವಂತಹ ಅನೇಕ ಸಚಿವರು ಅದರ ಲಾಭ ಪಡೆಯುತ್ತಿದ್ದಾರೆ ಎಂದು ಆರೋಪ ಆಧಾರ ರಹಿತವಾಗಿದೆ ಎಂದರು. ರಾಜ್ಯ ಸರ್ಕಾರವು ಸುಪ್ರೀಂ ಕೋರ್ಟ್‌ನ ಆದೇಶಕ್ಕೆ ಅನುಗುಣವಾಗಿ ಮಾನವೀಯತೆ ದೃಷ್ಟಿಯಿಂದ ಈ ತೀರ್ಮಾನ ತೆಗೆದುಕೊಂಡಿದೆ ಎಂದು ಡಿಸಿಎಂ ಮತ್ತು ಕಂದಾಯ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದರು.

ಮಂಗಳವಾರ ಬೆಂಗಳೂರಿನಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ನೈಸ್ ರಸ್ತೆಗಾಗಿ ನೂರಾರು ಕೋಟಿ ಬೆಲೆಬಾಳುವ ಭೂಮಿಯನ್ನು ರೈತರು ಕೆಲವು ಲಕ್ಷಗಳಿಗೆ ಬಿಟ್ಟುಕೊಟ್ಟಿದ್ದಾರೆ. ಅವರಿಗೆಲ್ಲ ಅನ್ಯಾಯವಾಗದಿರಲು 1453 ನಿವೇಶಗಳನ್ನು ಹಂಚಿಕೆ ಮಾಡುವ ನಿರ್ಧಾರ ತೆಗೆದುಕೊಳ್ಳಲಾಗಿದೆ. ಈ ವಿಚಾರದಲ್ಲಿ ಯಾರಿಗೂ ವೈಯಕ್ತಿಕ ಲಾಭ ಮಾಡಿಕೊಡುವ ಉದ್ದೇಶವಿಲ್ಲ ಎಂದು ಸ್ಪಷ್ಟಪಡಿಸಿದರು.

NICE Road

200ಕ್ಕೂ ಹೆಚ್ಚು ತಾಲ್ಲೂಕುಗಳಲ್ಲಿ ಬರ ಸ್ಥಿತಿ

ರಾಜ್ಯದಲ್ಲಿ ಬರ ಪರಿಶೀಲನೆ ಮುಕ್ತಾಯವಾಗಿಲ್ಲ, ಹಂತ ಹಂತವಾಗಿ ನಡೆಯುತ್ತಿದೆ. ಮೊದಲ ಹಂತದಲ್ಲಿ 101 ತಾಲ್ಲೂಕುಗಳನ್ನು ಈಗಾಗಲೇ ಬರಪೀಡಿತ ಪ್ರದೇಶಗಳೆಂದು ಘೋಷಣೆ ಮಾಡಲಾಗಿದ್ದು, ಎರಡನೇ ಹಂತದ ಪರಿಶೀಲನೆ ನಡೆಯುತ್ತಿದೆ. 25 ತಾಲ್ಲೂಕುಗಳು ಬರ ಪೀಡಿತ ಪ್ರದೇಶಗಳೆಂದು ಘೋಷಣೆಗೆ ಅರ್ಹತೆ ಪಡೆದಿದ್ದು, ಶೀಘ್ರದಲ್ಲೇ ಘೋಷಣೆ ಮಾಡಲಾಗುವುದು ಎಂದು ಹೇಳಿದರು.

ಬರಪೀಡಿತ ಪ್ರದೇಶಗಳ ಘೋಷಣೆ ಪ್ರಕ್ರಿಯೆ ವಿಳಂಬವಾಗಿಲ್ಲ. ಮುಂಗಾರು ಹಾಗೂ ಹಿಂಗಾರು ಕಡಿಮೆ ಆಗುವವರೆಗೂ ಪರಿಶೀಲನೆ ಮುಂದುವರಿಯುತ್ತದೆ. ಕಳೆದ ಬಾರಿ ಸುಮಾರು 200 ತಾಲ್ಲೂಕುಗಳನ್ನು ಬರಪೀಡಿತ ಪ್ರದೇಶಗಳೆಂದು ಘೋಷಣೆ ಮಾಡಲಾಗಿತ್ತು. ಈ ಬಾರಿಯೂ 200ಕ್ಕೂ ಹೆಚ್ಚು ತಾಲ್ಲೂಕುಗಳು ಬರಪೀಡಿತ ಪ್ರದೇಶಗಳೆಂದು ಘೋಷಿಸಲ್ಪಡುವ ಪರಿಸ್ಥಿತಿ ಇದೆ. ಕರಾವಳಿ ಪ್ರದೇಶವನ್ನು ಹೊರತುಪಡಿಸಿ ಉಳಿದೆಲ್ಲೆಡೆ ಬರ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ವಿವರಿಸಿದರು.

ಬೇಕೆಂದೆ ಬರಪೀಡಿತ ತಾಲ್ಲೂಕುಗಳನ್ನು ಕೈಬಿಟ್ಟಿಲ್ಲ

ಕೆಲವು ಶಾಸಕರು ತಮ್ಮ ತಾಲ್ಲೂಕುಗಳನ್ನು ಬೇಕೆಂದೇ ಬರ ಪೀಡಿತ ಪ್ರದೇಶವೆಂದು ಘೋಷಣೆ ಮಾಡಿಲ್ಲ ಎಂದು ಆರೋಪಿಸಿ ಪ್ರತಿಭಟನೆ ನಡೆಸುತ್ತಿರುವ ವಿಚಾರವಾಗಿ ಪ್ರತಿಕ್ರಿಯಿಸಿದ ಪರಮೇಶ್ವರ ಅವರು, ತೀವ್ರ ಬರ ಇದ್ದರೂ ತಮ್ಮ ತಾಲ್ಲೂಕುಗಳನ್ನು ಬರಪೀಡಿತ ಪ್ರದೇಶವೆಂದು ಘೋಷಣೆ ಮಾಡಿಲ್ಲ ಎಂದು ಯಾರೂ ಆತಂಕಪಡುವ ಅಗತ್ಯವಿಲ್ಲ. ಇಡೀ ರಾಜ್ಯವೇ ಇಂದು ಬರಗಾಲವನ್ನು ಎದುರಿಸುತ್ತಿದೆ. ಬರಪೀಡಿತ ಪ್ರದೇಶಗಳೆಂದು ಘೋಷಿಸುವ ವಿಚಾರದಲ್ಲಿ ರಾಜ್ಯ ಸರ್ಕಾರದ ಯಾರೊಬ್ಬರ ಪಾತ್ರವೂ ಇಲ್ಲ. ಬೇಕೆಂದೇ ಕೆಲವು ತಾಲ್ಲೂಕುಗಳನ್ನು ಕೈಬಿಟ್ಟಿದ್ದಾರೆ ಎಂಬುದು ಆಧಾರ ರಹಿತ ಆರೋಪವಾಗಿದೆ. ಪಕ್ಷ ನೋಡಿಕೊಂಡು ಬರ ಸಂಭವಿಸಿಲ್ಲ. ಈಗಾಗಲೇ ಘೋಷಿತ ಪಟ್ಟಿಯಲ್ಲಿ ವಿರೋಧ ಪಕ್ಷದ ಶಾಸಕರಿರುವ ತಾಲ್ಲೂಕುಗಳೂ ಇವೆಯಲ್ಲವೇ? ಎಂದು ಪ್ರಶ್ನಿಸಿದರು.

ರಾಜ್ಯ ಸರ್ಕಾರವೇ ತನ್ನ ಪಾಡಿಗೆ ತಾನು ಬರಪೀಡಿತ ಪ್ರದೇಶಗಳನ್ನು ಘೋಷಣೆ ಮಾಡಿದರೆ ಕೇಂದ್ರದಿಂದ ನೆರವು ಪಡೆಯಲು ಸಾಧ್ಯವಾಗುವುದಿಲ್ಲ. ಕೇಂದ್ರದ ಬರಪರಿಹಾರ ಪಡೆಯಲು ನಾವು ಸಹನೆಯಿಂದ ವರ್ತಿಸಿದಷ್ಟೂ ಉತ್ತಮ. ಕೇಂದ್ರ ಸರ್ಕಾರದ ನಿಯಮಗಳಡಿ ಬರಪೀಡಿತ ಪ್ರದೇಶಗಳನ್ನು ಘೋಷಣೆ ಮಾಡಲಾಗುತ್ತದೆಯೇ ವಿನಃ ರಾಜ್ಯ ಸರ್ಕಾರವೇ ಸ್ವಂತ ನಿರ್ಧಾರಗಳನ್ನು ತೆಗೆದುಕೊಂಡು ಘೋಷಣೆ ಮಾಡಲು ಸಾಧ್ಯವಿಲ್ಲ. ಉಪಗ್ರಹ ಆಧಾರಿತ ಚಿತ್ರಗಳನ್ನು ಪರಿಶೀಲಿಸಿ, ಗ್ರೌಂಡ್‌ ಟ್ರುಥಿಂಗ್‌ ಮಾಡಿ, ವೈಜ್ಞಾನಿಕ ಅಧ್ಯಯನದ ಬಳಿಕ ಘೋಷಣೆ ಮಾಡುತ್ತಾರೆ. ಇದನ್ನು ನಾನು ಅಧಿವೇಶನದ ವೇಳೆಯೇ ಸ್ಪಷ್ಟವಾಗಿ ಹೇಳಿದ್ದೇನೆ ಎಂದು ಸ್ಪಷ್ಟಪಡಿಸಿದರು.

ಅಹಿಂದದಲ್ಲಿ ನಾಯಕರಲ್ಲಿ ಒಡಕಿಲ್ಲ

ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟ ಆಯೋಜಿಸಿದ್ದ ಸಿದ್ದರಾಮಯ್ಯನವರಿಗೆ ಅಭಿನಂದನೆ ಕಾರ್ಯಕ್ರಮಕ್ಕೆ ಸತೀಶ್‌ ಜಾರಕಿಹೊಳಿ, ಡಾ. ಎಚ್‌. ಸಿ. ಮಹದೇವಪ್ಪ ಅವರಿಗೆ ಆಹ್ವಾನ ಇಲ್ಲದಿರುವ ವಿಚಾರವನ್ನು ಪ್ರಸ್ತಾಪಿಸಿ, ಅಹಿಂದ ಸಂಘಟನೆಯಲ್ಲಿ ಒಡಕು ಮೂಡಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಪರಮೇಶ್ವರ ಅವರು, ಮೊನ್ನೆ ನಡೆದಿದ್ದು ಅಹಿಂದ ಸಮಾವೇಶವಲ್ಲ ಎಂದು ಸ್ಪಷ್ಟಪಡಿಸಿದರು. ನಮ್ಮಲ್ಲಿ ಯಾವುದೇ ಒಡಕಿಲ್ಲ, ಅಹಿಂದ ನಾಯಕತ್ವ ಕವಲು ದಾರಿ ಹಿಡಿದಿಲ್ಲ ಎಂದರು.

ಅಪೆಕ್ಸ್‌ ಬ್ಯಾಂಕ್‌ ಚುನಾವಣೆಗೆ ಸಂಬಂಧಿಸಿ, ಕೆ. ಎನ್‌. ರಾಜಣ್ಣ ಅವರು ಅಪೆಕ್ಸ್‌ ಬ್ಯಾಂಕ್‌ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿದ್ದಾರೆ. ಒಂದೇ ಜಿಲ್ಲೆಯವರಾದ ನಾವು ಈ ವಿಚಾರವಾಗಿ ಭೇಟಿಯಾಗಿ ಚರ್ಚಿಸಿದ್ದೇವೆ. ಮುಖ್ಯಮಂತ್ರಿ ನೇತೃತ್ವದಲ್ಲಿ ನಿರ್ದೇಶಕರನ್ನೆಲ್ಲ ಕರೆದು ಚರ್ಚಿಸಿ ಒಂದು ತೀರ್ಮಾನಕ್ಕೆ ಬರುತ್ತೇವೆ ಎಂದರು.

ಇಂದು ನಡೆಯಲಿರುವ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಸಭೆಯಲ್ಲಿ ರಾಜ್ಯ ಸರ್ಕಾರವು ತಮಿಳುನಾಡು ಕಾವೇರಿ ನೀರನ್ನು 4.8 ಹೆಕ್ಟೆರ್‌ ಪ್ರದೇಶದ ಕೃಷಿಗೆ ಬಳಕೆ ಮಾಡುತ್ತಿರುವ ವಿಚಾರವನ್ನು ಪ್ರಸ್ತಾವಿಸಲಿದೆ ಎಂದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+