New Year 2026: ಹೊಸ ವರ್ಷಾಚರಣೆ ಮೇಲೆ ನಿಗಾ ಇಡಲಿದೆ ಡ್ರೋನ್, ಬೆಂಗಳೂರು ಪೊಲೀಸರಿಂದ ಮಾಸ್ಟರ್‌ಪ್ಲ್ಯಾನ್
ನೋಡ ನೋಡುತ್ತಲೇ ಈ ವರ್ಷ ಮುಗಿಯುತ್ತಿದೆ. 2025ಕ್ಕೆ ಗುಡ್‌ಬೈ ಹೇಳಿ 2026ಕ್ಕೆ ಹಾಯ್ ಹೇಳಲು ಇನ್ನು ಎರಡೇ ವಾರ ಬಾಕಿ ಇದೆ. ಇನ್ನು ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಹೊಸ ವರ್ಷ ಅಂದ್ರೇನೇ ಒಂದು ದೊಡ್ಡ ಹಬ್ಬ, ಸಂಭ್ರಮ. ಡಿಸೆಂಬರ್ 31ರ ರಾತ್ರಿಯೇ ಕುಣಿದು ಕುಪ್ಪಳಿಸಿ ಹೊಸ ವರ್ಷದ ಸಂಭ್ರಮಾಚರಣೆಯನ್ನು ಎಂಜಾಯ್ ಮಾಡಲು ಈಗಿನಿಂದಲೇ ಸಕಲ ತಯಾರಿಗಳು ನಡೆದಿವೆ. ಹೊಸ ವರ್ಷಾಚರಣೆಯ ಹಾಟ್‌ಸ್ಪಾಟ್‌ಗಳಾಗಿರುವ ಎಂ.ಜಿ.ರೋಡ್, ಬ್ರಿಗೇಡ್ ರೋಡ್, ಚರ್ಚ್ ಸ್ಟ್ರೀಟ್ ಸೇರಿದಂತೆ ನಗರದ ಪ್ರಮುಖ ಜಾಗಗಳಲ್ಲಿ ಆ ದಿನ ಲಕ್ಷಾಂತರ ಜನ ಜಮಾಯಿಸಿ ಹೊಸ ವರುಷವನ್ನು ಹರುಷದಿಂದ ಬರಮಾಡಿಕೊಳ್ಳುತ್ತಾರೆ. ಹೀಗಾಗಿ ಹೆಚ್ಚು ಜ ಸೇರುವುದರಿಂದ ಜನಸಂದಣಿ ನಿಯಂತ್ರಿಸಲು ಹಾಗೂ ಎಲ್ಲೆಡೆ ನಿಗಾ ಇಡಲು ಬೆಂಗಳೂರು ಪೊಲೀಸರು ಹೊಸ ಮಾಸ್ಟರ್‌ಪ್ಯಾನ್ ಮಾಡಿದ್ದಾರೆ.
ಪ್ರತಿ ವರ್ಷವು ಹೊಸ ವರ್ಷಾಚರಣೆ ನಡೆಯುವ ಪ್ರಮುಖ ಸ್ಥಳಗಳಲ್ಲಿ ಪೊಲೀಸರ ಸರ್ಪಗಾವಲು ಇದ್ದೇ ಇರುತ್ತೆ. ಯುವಕರು, ಯುವತಿಯರು ಒಂದೆಡೆ ಸೇರುವುದರಿಂದ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸರು ಹದ್ದಿನಗಣ್ಣಿಡುತ್ತಾರೆ. ಜೊತೆಗೆ ಹೆಚ್ಚುವರಿ ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಿ ಪ್ರತಿಯೊಬ್ಬರ ಚಲನವಲನದ ಮೇಲೆ ನಿಗಾ ಇಡುತ್ತಾರೆ. ಆದರೂ ಬೆಂಗಳೂರಿಗೆ ಇದು ಸಾಕಾಗಲ್ಲ. ಇದನ್ನು ಮನಗಂಡ ಪೊಲೀಸರು ಈ ವರ್ಷಾಚರಣೆ ಮೇಲೆ ಕಣ್ಗಾವಲಿಗಾಗಿ ಡ್ರೋನ್‌ಗಳನ್ನು ಬಳಸಲು ಮುಂದಾಗಿದ್ದಾರೆ.
ಬೆಂಗಳೂರಿನ ನೂತನ ವರ್ಷದ ಆಚರಣೆಯ ರಾತ್ರಿಗೆ ಸಕಲ ದೃಷ್ಟಿಕೋನದಲ್ಲಿ ಭರದಿಂದ ಸಿದ್ಧತೆ!
— ಬೆಂಗಳೂರು ನಗರ ಪೊಲೀಸ್ BengaluruCityPolice (@BlrCityPolice) December 15, 2025
ನೂತನ ವರ್ಷದ ಸಂಜೆಗೆ ಸಿದ್ಧರಾಗುತ್ತಿರುವಾಗ, ಜನಜಂಗುಳಿಯ ಸೂಕ್ಷ್ಮ ವರ್ಧನೆ ಮತ್ತು ನಿರ್ವಹಣೆ, ಸಂಚಾರ ಹರಿವು ಮತ್ತು ತ್ವರಿತ ತುರ್ತು ಪ್ರತಿಕ್ರಿಯೆಯನ್ನು ಹೆಚ್ಚಿಸಲು ಡ್ರೋನ್ ಆಧಾರಿತ ಕಣ್ಗಾವಲು ವ್ಯವಸ್ಥೆ (ವಿಷುಯಲ್ ಏರಿಯಲ್ ನೆಟ್‌ವರ್ಕ್ ಫಾರ್… pic.twitter.com/DbgYC9iIBl
ಹೊಸ ವರ್ಷಕ್ಕೆ ಇನ್ನು ಎರಡೇ ವಾರ ಬಾಕಿ ಇರುವುದರಿಂದ ಬೆಂಗಳೂರು ಪೊಲೀಸರಿಗೆ ಈಗಾಗಲೇ ಡ್ರೋನ್ ಬಳಸುವ ತರಬೇತಿ ನೀಡಲಾಗಿದೆ. ಹೆಚ್ಚು ಜನ ಸೇರುವ ಜಾಗಗಳಲ್ಲಿ ಈ ಡ್ರೋನ್‌ಗಳನ್ನು ಬಳಸುವ ಮೂಲಕ ಜನಸಂದಣಿ ನಿಯಂತ್ರಣ ಹಾಗೂ ನಿಗಾ ಇಡಲು ಪೊಲೀಸ್ ಇಲಾಖೆ ಮುಂದಾಗಿದೆ. ಈ ಬಗ್ಗೆ ವಿಡಿಯೋ ಹಂಚಿಕೊಂಡಿರುವ ಪೊಲೀಸರು, ಬೆಂಗಳೂರಿನ ನೂತನ ವರ್ಷದ ಆಚರಣೆಯ ರಾತ್ರಿಗೆ ಸಕಲ ದೃಷ್ಟಿಕೋನದಲ್ಲಿ ಭರದಿಂದ ಸಿದ್ಧತೆ ನಡೆದಿದೆ. ನೂತನ ವರ್ಷದ ಸಂಜೆಗೆ ಸಿದ್ಧರಾಗುತ್ತಿರುವಾಗ, ಜನಜಂಗುಳಿಯ ಸೂಕ್ಷ್ಮವರ್ಧನೆ ಮತ್ತು ನಿರ್ವಹಣೆ, ಸಂಚಾರ ಹರಿವು ಮತ್ತು ತ್ವರಿತ ತುರ್ತು ಪ್ರತಿಕ್ರಿಯೆಯನ್ನು ಹೆಚ್ಚಿಸಲು ಡ್ರೋನ್ ಆಧಾರಿತ ಕಣ್ಗಾವಲು ವ್ಯವಸ್ಥೆ (ವಿಷುಯಲ್ ಏರಿಯಲ್ ನೆಟ್‌ವರ್ಕ್ ಫಾರ್ ನಾಲೆಡ್ಜಬಲ್ ಇನ್‌ಸೈಟ್ಸ್-VANKi) ಅನ್ನು ಅಳವಡಿಸಿಕೊಳ್ಳಲಾಗುತ್ತಿದೆ. ಒಟ್ಟಿಗೆ 2026ರ ನೂತನ ವರ್ಷವನ್ನು ಜವಾಬ್ದಾರಿಯುತವಾಗಿ ಸ್ವಾಗತಿಸೋಣ ಎಂದು ಹೇಳಿದ್ದಾರೆ.

ಎಂಜಿ ರೋಡ್‌ನಲ್ಲಿ ಸಂಭ್ರಮಾಚರಣೆಗೆ ಬ್ರೇಕ್?
ಆರ್‌ಸಿಬಿ ಕಾಲ್ತುಳಿತ ದುರಂತದ ಬಳಿಕ ಹೊಸ ವರ್ಷಾಚರಣೆ ಮೇಲೆ ಹೆಚ್ಚಿನ ನಿಗಾ ಇಡಲಾಗಿದೆ. ಈ ಸಂಬಂಧ ಜಿಬಿಎ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಈಗಾಗಲೇ ಸರಣಿ ಸಭೆ ನಡೆಸಿದ್ದಾರೆ. ಜನರ ಭದ್ರತಾ ದೃಷ್ಟಿಯಿಂದ ಈ ಬಾರಿ ಎಂ.ಜಿ.ರಸ್ತೆಯಲ್ಲಿ ಹೊಸ ವರ್ಷಾಚರಣೆ ಬೇಡ ಎಂದು ಕೆಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆರ್‌ಸಿಬಿ ದುರಂತದ ಬಳಿಕ ಮತ್ತೆ ಅಂತಹ ಘಟನೆಗಳು ನಡೆಯದಂತೆ ಎಚ್ಚರಿಕೆ ವಹಿಸಲಾಗಿದೆ. ಹಾಗಾಗಿ ಈ ಬಾರಿ ಹೊಸ ವರ್ಷಾಚರಣೆಗೆ ಅನುಮತಿ ನೀಡುವುದು ಅನುಮಾನ ಎಂದು ಹೇಳಲಾಗುತ್ತಿದೆ.












Click it and Unblock the Notifications