Bengaluru: ಬೆಂಗಳೂರಿನ ಈ ಭಾಗದಲ್ಲಿ ಹೊಸ ಮಾದರಿಯ ಜಂಕ್ಷನ್‌ಗಳ ಅಭಿವೃದ್ಧಿ: ಪೂರ್ವ ನಗರ ಪಾಲಿಕೆ ಅಪ್ಡೇಟ್ಸ್
ಬೆಂಗಳೂರು: ಬೆಂಗಳೂರಿನ ಕೃಷ್ಣರಾಜಪುರ ಭಾಗದಲ್ಲಿ ಹೊಸ ಮಾದರಿ ಮೇಲ್ಸೇತುವೆಯನ್ನು ಅಭಿವೃದ್ಧಿಪಡಿಸುವುದಕ್ಕೆ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಪಾಲಿಕೆ ಮುಂದಾಗಿದೆ. ಅಭಿವೃದ್ಧಿಯೊಂದಿಗೆ ಪರಿಸರ ರಕ್ಷಣೆಗೆ ಆದ್ಯತೆ ನೀಡಬೇಕು ಎಂದು ಹೇಳಿರುವ ಬೆಂಗಳೂರು ಪೂರ್ವ ನಗರ ಪಾಲಿಕೆ ಹೆಚ್ಚುವರಿ ಆಯುಕ್ತರಾದ ಲೋಖಂಡೆ ಸ್ನೇಹಲ್ ಸುಧಾಕರ್ ಅವರು, ಇದೇ ಸಂದರ್ಭದಲ್ಲಿ ವಿವಿಧ ಯೋಜನೆಗಳ ಬಗ್ಗೆ ಅಪ್ಡೇಟ್ಸ್ ಕೊಟ್ಟಿದ್ದಾರೆ.
ಬೆಂಗಳೂರು ಪೂರ್ವ ನಗರ ಪಾಲಿಕೆ ವ್ಯಾಪ್ತಿಯ ಕೃಷ್ಣರಾಜಪುರ ವಲಯದಲ್ಲಿ ವಿಭಿನ್ನ ರೀತಿಯಲ್ಲಿ ಜಂಕ್ಷನ್‌ಗಳನ್ನು ಅಭಿವೃದ್ಧಿಪಡಿಸುವ ಕುರಿತು ಕಾರ್ಯಸಾಧ್ಯತೆ ಬಗ್ಗೆ ಪರಿಶೀಲಿಸುವ ಸಲುವಾಗಿ ಹೆಚ್ಚುವರಿ ಆಯುಕ್ತರಾದ ಲೋಖಂಡೆ ಸ್ನೇಹಲ್ ಸುಧಾಕರ್ ಅವರು ಸೋಮವಾರ ಸ್ಥಳ ಪರಿಶೀಲನೆ ನಡೆಸಿದರು. ನಂತರ ಮಾತನಾಡಿದ ಅವರು, ಜಂಕ್ಷನ್‌ಗಳ ಅಭಿವೃದ್ಧಿಗೆಯ ಬಗ್ಗೆ ಮಾತನಾಡಿದ್ದಾರೆ.

ಪೂರ್ವ ನಗರ ಪಾಲಿಕೆ ವ್ಯಾಪ್ತಿಯಲ್ಲಿನ ಕೃಷ್ಣರಾಜಪುರ ಹಾಗೂ ವಿಜ್ಞಾನನಗರ ಜಂಕ್ಷನ್‌ಗಳನ್ನು ಪರಿಶೀಲನೆ ನಡೆಸಿದ ಹೆಚ್ಚುವರಿ ಆಯುಕ್ತರು ವಿಭಿನ್ನ ರೀತಿಯಲ್ಲಿ ಹಾಗೂ ಸಂಚಾರ ದಟ್ಟಣೆ ಉಂಟಾಗದಂತೆ ವೈಜ್ಞಾನಿಕವಾಗಿ ಜಂಕ್ಷನ್‌ಗಳ ಅಭಿವೃದ್ಧಿಪಡಿಸಲು ಸಂಚಾರಿ ಪೊಲೀಸ್ ಇಲಾಖೆಯೊಂದಿಗೆ ಸಮನ್ವಯ ಸಾಧಿಸಿ ಕಾರ್ಯ ಸಾಧ್ಯತೆ ಬಗ್ಗೆ ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ವೃಕ್ಷಗಳ ರಕ್ಷಣೆಗೆ ಗಮನ ನೀಡಿ
ರಸ್ತೆ ಬದಿಯಲ್ಲಿ ಮತ್ತು ಪಾದಚಾರಿ ಮಾರ್ಗದಲ್ಲಿ ನೆಡಲಾಗಿರುವ ವೃಕ್ಷಗಳ ಸುತ್ತಲೂ ಕಾಂಕ್ರೀಟ್, ಡಾಂಬರು ಹಾಗೂ ಇಂಟರ್‌ಲಾಕ್ ಪೇವರ್ ಅಳವಡಿಸುವುದರಿಂದ ಮರಗಳ ಬೇರು ಸದೃಢತೆ ಕಳೆದುಕೊಂಡು ಮಳೆ ಮತ್ತು ಗಾಳಿಯಿಂದಾಗಿ ಉರುಳಿ ಪ್ರಾಣಹಾನಿ ಮತ್ತು ಸಾರ್ವಜನಿಕ ಆಸ್ತಿಪಾಸ್ತಿ ಹಾನಿಯಾಗುವ ಘಟನೆಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮರಗಳ ಸಂರಕ್ಷಣೆಗಾಗಿ ಮಹತ್ವದ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಹೆಚ್ಚುವರಿ ಆಯುಕ್ತರು ಇದೇ ಸಂದರ್ಭದಲ್ಲಿ ನಿರ್ದೇಶನ ನೀಡಿದ್ದಾರೆ.
1. ರಸ್ತೆಬದಿಯ ಮರಗಳ ಸುತ್ತಲಿನ ಕನಿಷ್ಠ 1 ಮೀಟರ್ ಸುತ್ತಳತೆಯಲ್ಲಿ ಹಾಕಲಾದ ಕಾಂಕ್ರೀಟ್, ಸಿಮೆಂಟ್ ಬ್ಲಾಕ್, ಟಾರ್ ಅಥವಾ ಇಂಟರ್‌ಲಾಕ್ ಪೇವರ್‌ಗಳನ್ನು ತಕ್ಷಣವೇ ತೆರವುಗೊಳಿಸಲು ನಿರ್ದೇಶಿಸಿದ್ದಾರೆ.
2. ರಸ್ತೆ ಅಥವಾ ಪಾದಚಾರಿ ಮಾರ್ಗ ನಿರ್ಮಾಣ ಅಥವಾ ಅಭಿವೃದ್ಧಿಪಡಿಸುವ ಸಂದರ್ಭದಲ್ಲಿ ಮರಗಳ ಬುಡವನ್ನು ಸಂಪೂರ್ಣವಾಗಿ ಕಾಂಕ್ರೀಟ್‌ನಿಂದ ಮುಚ್ಚುವುದನ್ನು ತಡೆಯುವಂತೆ ಸೂಚಿಸಿದ್ದಾರೆ.
3. ಮರಗಳ ಬೇರುಗಳಿಗೆ ಗಾಳಿ ಮತ್ತು ನೀರು ಸರಾಗವಾಗಿ ಇಂಗುವಂತೆ ಮಾಡಲು ಕನಿಷ್ಠ 1 ಮೀಟರ್ ವ್ಯಾಪ್ತಿಯಲ್ಲಿ ಕಾಂಕ್ರೀಟ್ ತೆರವುಗೊಳಿಸಿ ಮಣ್ಣು ಸಮತಟ್ಟು ಮಾಡುವುದು, ಸಾಧ್ಯವಾದಲ್ಲಿ ಹುಲ್ಲು ನೆಡುವ ಮೂಲಕ ಹಸಿರೀಕರಣಕ್ಕೆ ಉತ್ತೇಜನ ನೀಡಲು ತಿಳಿಸಿದ್ದಾರೆ.
4. ಗುತ್ತಿಗೆದಾರರು ರಸ್ತೆ / ಮಾರ್ಗಗಳ ಮಧ್ಯದ ಅಂಚಿನಲ್ಲಿ ಅನಾವಶ್ಯಕವಾಗಿ ಕಾಂಕ್ರೀಟ್ ಅಥವಾ ಟೈಲ್ಸ್ ಅಳವಡಿಸುವುದನ್ನು ಪ್ರೋತ್ಸಾಹಿಸಬಾರದು ಎಂದಿದ್ದಾರೆ.
5. ಕಿರಿದಾದ ರಸ್ತೆಗಳು ಮತ್ತು ಮಾರ್ಗಗಳಲ್ಲಿ ಸಾಧ್ಯವಾದಷ್ಟು ಮರಗಳ ಸುತ್ತ ಕನಿಷ್ಠ 1 ಚದರ ಮೀಟರ್ ಡಾಂಬರು ಹಾಕದಂತೆ ಕ್ರಮವಹಿಸಲು ಸೂಚಿಸಿದ್ದಾರೆ.
ಈ ಎಲ್ಲಾ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಎಲ್ಲಾ ಅನುಷ್ಠಾನಾಧಿಕಾರಿಗಳಿಗೆ ಹೆಚ್ಚುವರಿ ಆಯುಕ್ತರು ಕಟ್ಟುನಿಟ್ಟಾಗಿ ಸೂಚನೆ ನೀಡಿದರು. ನಗರದಲ್ಲಿ ಹಸಿರೀಕರಣ, ಪರಿಸರ ಸಮತೋಲನ ಮತ್ತು ಸಾರ್ವಜನಿಕ ಸುರಕ್ಷತೆಯನ್ನು ಕಾಪಾಡುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳುವ ಮೂಲಕ ಅಭಿವೃದ್ಧಿಯೊಂದಿಗೆ ಪರಿಸರ ರಕ್ಷಣೆಗೆ ಆದ್ಯತೆ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.












Click it and Unblock the Notifications