Wipro: "ವಿಪ್ರೊ"ಗೆ ನೂತನ ಸಿಇಒ ನೇಮಕ-ಯಾರು ಹಾಗೂ ಅವರ ಹಿನ್ನೆಲೆ ಏನು?
ಬೆಂಗಳೂರು, ಏಪ್ರಿಲ್, 07: ವಿಪ್ರೊ ಕಂಪನಿ ಬರೀ ಬೆಂಗಳೂರು ಅಲ್ಲದೆ, ಇಡೀ ದೇಶದಲ್ಲೇ ಪ್ರಖ್ಯಾತಿಗೆ ಪಾತ್ರವಾಗಿದೆ. ಇದೀಗ ಈ ಕಂಪನಿಗೆ ನೂತನ ಸಿಇಒ ಅನ್ನು ಆಯ್ಕೆ ಮಾಡಲಾಗಿದೆ.
ಮೂಲತಃ ಬೆಂಗಳೂರು ಮೂಲದ ದೇಶದ ಪ್ರಮುಖ ಮಾಹಿತಿ ತಂತ್ರಜ್ಞಾನ ಕಂಪನಿ ವಿಪ್ರೋದ ನೂತನ ಮುಖ್ಯ ಕಾರ್ಯಾನಿರ್ವಹಣಾಧಿಕಾರಿಯಾಗಿ ಶ್ರೀನಿವಾಸ್ ಅಲಿಯಾಸ್ ಶ್ರೀನಿ ಪಲ್ಲಿಯಾ ಅವರನ್ನು ನೇಮಕ ಮಾಡಲಾಗಿದೆ.

ಆಡಳಿತ ಮಂಡಳಿಯ ಸಭೆಯು ಶ್ರೀನಿವಾಸ್ ನೇಮಕಕ್ಕೆ ಒಪ್ಪಿಗೆ ನೀಡಿದ್ದು, ಇಂದಿನಿಂದಲೇ (ಏಪ್ರಿಲ್ 7) ಅವರು, ವಿಪ್ರೋ ನೂತನ ಸಿಇಒ ಹಾಗೂ ಎಂ.ಡಿ ಆಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಇನ್ನು 1992ರಲ್ಲಿ ವಿಪ್ರೊ ಕಂಪನಿಯನ್ನು ಸೇರಿಕೊಂಡಿರುವ ಶ್ರೀನಿವಾಸ ಪಲ್ಲಿಯಾ ಅವರು ಸುಮಾರು ಮೂರು ದಶಕಗಳಿಗೂ ಹೆಚ್ಚು ಕಾಲ ಕಂಪನಿ ಬೆಳವಣಿಗೆಗೆ ತಮ್ಮದೇ ಆದ ವಿಶೇಷ ಕೊಡುಗೆ ನೀಡಿದ್ದು, ವಿಪ್ರೊ ಒಡೆತನದ ಅಮೆರಿಕಾಸ್ 1 ಎಂಬ ಕಂಪನಿಗೂ ಮೊದಲು ಸಿಇಒ ಆಗಿ ಕಾರ್ಯನಿಹಿಸಿದ್ದಾರೆ ಎಂದು ತಿಳಿದುಬಂದಿದೆ.
ಶ್ರೀನಿವಾಸ ಅವರು ರಾಜ್ಯದ ರಾಜಧಾನಿ ಬೆಂಗಳೂರಿನ ಮೂಲದ ವಿಜ್ಞಾನ ಸಂಸ್ಥೆ (ಐಐಎಸ್ಸಿ)ಯಲ್ಲಿ ಇಂಜಿನಿಯರಿಂಗ್ ಪದವಿ ಮತ್ತು ಎಂಬಿಎ ಮಾಡಿದ್ದಾರೆ. ಅಲ್ಲದೆ, ಹಾರ್ವರ್ಡ್ ಬಿಜಿನಸ್ ಸ್ಕೂಲ್‌ನಲ್ಲಿಯೂ ಅಧ್ಯಯನ ಮಾಡಿದ್ದು, ಇದೀಗ ಅಮೆರಿಕದ ನ್ಯೂಜೆರ್ಸಿಯಲ್ಲಿ ನೆಲೆಸಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಇನ್ನು ಶ್ರೀನಿವಾಸ ಅವರು ಮುಂದಿನ ಐದು ವರ್ಷಗಳ ಕಾಲ ವಿಪ್ರೊ ಸಿಇಒ ಆಗಿ ಕಾರ್ಯನಿರ್ವಹಿಸಲಿದ್ದಾರೆ. ಕಳೆದ ಏಪ್ರಿಲ್ 5ರಂದು ಥಿಯರಿ ಡೆಲಾರ್ಪೋರ್ಟ್ ಅವರು, ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು ಎಂದು ತಿಳಿದುಬಂದಿದೆ.












Click it and Unblock the Notifications