Nelamangala-Tumakuru: ನೆಲಮಂಗಲ-ತುಮಕೂರು ಹೆದ್ದಾರಿಯಲ್ಲಿ ಸಂಚರಿಸುವ ವಾಹನ ಸವಾರರಿಗೆ ಮಹತ್ವದ ಮಾಹಿತಿ
Nelamangala-Tumakuru: ದೇಶದಲ್ಲಿ ಬಹುನಿರೀಕ್ಷಿತ ಹೆದ್ದಾರಿಗಳಲ್ಲಿ ಈಗಾಗಲೇ ಕೆಲವು ಉದ್ಘಾನೆಯಾಗಿ ವಾಹನಗಳು ಸಂಚಾರಕ್ಕೂ ಮುಕ್ತವಾಗಿವೆ. ಇನ್ನೂ ಕೆಲವು ಲೋಕಾರ್ಪಣೆ ಹಂತದಲ್ಲಿವೆ. ಈ ನಡುವೆಯೇ ಇದೀಗ ನೆಲಮಂಗಲ-ತುಮಕೂರು ಹೆದ್ದಾರಿಯಲ್ಲಿ ಸಂಚರಿಸುವ ವಾಹನ ಸವಾರರಿಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಗುಡ್ ನ್ಯೂಸ್‌ವೊಂದನ್ನು ನೀಡಿದೆ. ಹಾಗಾದ್ರೆ ಅದೇನು ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಈಗಾಗಲೇ ರಾಜ್ಯದಲ್ಲಿ ಬಹುನಿರೀಕ್ಷಿತ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇ ಉದ್ಘಾಟನೆಯಾಗಿ ವಾಹ ಸಂಚಾರಕ್ಕೂ ಮುಕ್ತವಾಗಿದೆ. ಇನ್ನು ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್ ವೇ ಕಾಮಗಾರಿ ಕರ್ನಾಟಕ ಭಾಗದಲ್ಲಿ ಪೂರ್ಣಗೊಂಡಿದ್ದು, ವಾಹನ ಸಂಚಾರ ಕೂಡ ಆರಂಭವಾಗಿದೆ. ಉಳಿದಂತೆ ಆಂಧ್ರಪ್ರದೇಶ ಹಾಗೂ ತಮಿಳುನಾಡು ಭಾಗದಲ್ಲಿ ಕಾಮಗಾರಿ ಪೂರ್ಣಗೊಂಡರೆ, ಇದೇ ವರ್ಷದ ಆಗಸ್ಟ್ ವೇಳೆಗೆ ಉದ್ಘಾಟನೆಯಾಗಲಿದೆ ಎನ್ನುವ ಮಾಹಿತಿಯಿದೆ.

ಈ ನಡುವೆಯೇ ನೆಲಮಂಗಲ-ತುಮಕೂರು ಹೆದ್ದಾರಿಯಲ್ಲಿ ಸಂಚಾರ ಮಾಡುವ ವಾಹನ ಸವಾರರಿಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ನೆಮ್ಮದಿಯ ಸುದ್ದಿಯನ್ನು ನೀಡಿದೆ. ಹೌದು.. ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI)ವು ಜೂನ್ 2026ರ ಒಳಗೆ ಈ ಹೆದ್ದಾರಿಯ ಸರ್ವೀಸ್ ರಸ್ತೆಯನ್ನು ತೆರೆಯಲು ಯೋಜನೆ ರೂಪಿಸಿದೆ. ಅಲ್ಲದೆ, ಸಂಪೂರ್ಣ ಈ ಹೆದ್ದಾರಿ ಅಗಲೀಕರಣ ಯೋಜನೆಯು ಮಾರ್ಚ್ 2027ರ ಒಳಗೆ ರೊಳಗೆ ಪೂರ್ಣ ಆಗುವ ನಿರೀಕ್ಷೆ ಇದೆ ಎಂದು ತಿಳಿಸಿದೆ.
ನೆಲಮಂಗಲ ಟೋಲ್ ಗೇಟ್‌ನಿಂದ ತುಮಕೂರುವರೆಗಿನ ರಾಷ್ಟ್ರೀಯ ಹೆದ್ದಾರಿ 48ರ 44.04 ಕಿಲೋ ಮೀಟರ್ ಅಗಲೀಕರಣ ಕಾರ್ಯ ನಡೆಯುತ್ತಿದೆ. ಭೂಸ್ವಾಧೀನಕ್ಕೆ ಅಡೆತಡೆಗಳು ಉಂಟಾದ ಹಿನ್ನೆಲೆ ಕಾಮಗಾರಿ ಅರ್ಧಕ್ಕೆ ಸ್ಥಗಿತಗೊಂಡಿತ್ತು. ಆರು ತಿಂಗಳ ನಂತರ ಈ ವರ್ಷದ ಏಪ್ರಿಲ್‌ನಲ್ಲಿ ಮತ್ತೆ ಕಾಮಗಾರಿಯನ್ನು ಆರಂಭಿಸಲಾಗಿದೆ.
ಈ ಹಿಂದೆ ಸರ್ವೀಸ್ ರಸ್ತೆಗಳು ಆಗಸ್ಟ್ 2025ರ ಒಳಗೆ ಪೂರ್ಣಗೊಳ್ಳಲಿವೆ ಎಂದು ಹೇಳಲಾಗಿತ್ತು. ಆದರೆ ಇದೀಗ ದಿನಾಂಕ ಮತ್ತೆ ಮುಂದೂಡಿಕೆ ಆಗಿದ್ದು, ಇದರಿಂದ ಈ ಭಾಗದಲ್ಲಿ ಸಂಚಾರ ಮಾಡುವ ಪ್ರಯಾಣಿಕರಿಗೆ ನಿರಾಶೆ ಮೂಡಿದಂತಾಗಿದೆ. ಮತ್ತೊಂದೆಡೆ ನೋಡೋದಾದ್ರೆ, ಕೊನೆಗೂ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಂಡಿ ಕಾಮಗಾರಿ ಆರಂಭವಾಗಿದೆ. ಅಲ್ಲದೆ, ಯಾವಾಗ ಓಪನ್ ಮಾಡಲಾಗುತ್ತದೆ ಅಂತಲೂ ಪ್ರಾಧಿಕಾರಿ ಮಾಹಿತಿಯನ್ನು ಬಹಿರಂಗಪಡಿಸಿದ್ದು, ಇದಿರಿಂದ ಪ್ರಯಾಣಿಕರು ಸಂತಸಗೊಂಡಿದ್ಧಾರೆ.
ಆಗಸ್ಟ್ 2022ರಲ್ಲಿ ಪ್ರಾರಂಭಿಸಲಾದ ಈ ಯೋಜನೆಯು ಇದೀಗ ಇರುವ ನಾಲ್ಕು ಪಥದ ಎಕ್ಸ್‌ಪ್ರೆಸ್ ವೇ ಅನ್ನು ಆರು ಪಥಗಳಿಗೆ ವಿಸ್ತರಿಸುವುದು ಮತ್ತು ಹೆದ್ದಾರಿಯನ್ನು ಪ್ರವೇಶ-ನಿಯಂತ್ರಿತ ರಸ್ತೆಯನ್ನಾಗಿ ಪರಿವರ್ತಿಸಲು ಎರಡೂ ಬದಿಗಳಲ್ಲಿ ಎರಡು ಪಥದ ಸರ್ವೀಸ್ ರಸ್ತೆಗಳನ್ನು ನಿರ್ಮಿಸುವುದನ್ನು ಒಳಗೊಂಡಿದೆ.
ಕಾಮಗಾರಿ ಸ್ಥಗಿತಕ್ಕೆ ಕಾರಣ ಏನು?: ಹೆದ್ದಾರಿ ಪ್ರಾಧಿಕಾರದ ಪ್ರಕಾರ, 35 ವಿಭಿನ್ನ ಹಂತಗಳಲ್ಲಿ ಭೂಸ್ವಾಧೀನ ಮಾಡಿಕೊಳ್ಳಲಾಯಿತು. ಈ ವೇಳೆ ಭೂ ಮಾಲೀಕರಿಗೆ ಪರಿಹಾರ ನೀಡದಿರುವುದು, ಕೆಲವು ಆಸ್ತಿಗಳನ್ನು ಅಧಿಕೃತ ಸ್ವಾಧೀನ ಅಧಿಸೂಚನೆಗಳಲ್ಲಿ ಸೇರಿಸದಿರುವುದು ಮತ್ತು ಭೂಮಾಲೀಕರ ಪ್ರತಿರೋಧಗಳಂತಹ ಸಮಸ್ಯೆಗಳು ಎದುರಾದವು. ಈ ಅಡೆತಡೆಗಳಿಂದ ಸ್ಥಗಿತಗೊಳಿಸಲಾಗಿತ್ತು.
ಕಾಮಗಾರಿ ಯಾವಾಗ ಪೂರ್ಣ?: ಇದೀಗ ಈ ಎಲ್ಲಾ ಸಮಸ್ಯೆಗಳು ಬಗೆಹರಿದಿದ್ದು, ಗುತ್ತಿಗೆದಾರರು ಕೆಲಸವನ್ನು ಪುನರಾರಂಭಿಸಿದ್ದಾರೆ ಎಂದು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇನ್ನು ಈ ಹೆದ್ದಾರಿಯ ಸರ್ವೀಸ್ ರಸ್ತೆಗಳ ಕಾಮಗಾರಿಯನ್ನು 2026ರ ಜೂನ್, ಜುಲೈ ವೇಳೆಗೆ ಪೂರ್ಣಗೊಳಿಸಲು ಮತ್ತು ಮಾರ್ಚ್ 2027ರ ವೇಳೆಗೆ ರಸ್ತೆ ಅಗಲೀಕರಣ ಕಾರ್ಯವನ್ನು ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ ಅಂತಲೂ ಅಧಿಕಾರಿಗಳು ತಿಳಿಸಿದ್ದಾರೆ ಅಂತಾ ವರದಿಯಾಗಿದೆ.
ಪ್ರಯಾಣಿಕರಿಗೆ ಆಗುವ ಸಮಸ್ಯೆಗಳು: ತುಮಕೂರು ರಸ್ತೆ ಬೆಂಗಳೂರನ್ನು ಕರ್ನಾಟಕದ ಮಧ್ಯ ಮತ್ತು ಉತ್ತರ ಭಾಗಗಳಿಗೆ ಸಂಪರ್ಕಿಸುವ ಪ್ರಮುಖ ಕಾರಿಡಾರ್ ಆಗಿದ್ದು, ಇದರಿಂದಾಗಿ ವಿಳಂಬ ಆಗುವುದರಿಂದ ಪ್ರತಿನಿತ್ಯ ಸಾವಿರಾರು ಪ್ರಯಾಣಿಕರು ತೊಂದರೆ ಅನುಭವಿಸುವಂತಾಗಿದೆ.
ಇದೀಗ ನಡೆಯುತ್ತಿರುವ ನಿರ್ಮಾಣ ಕಾಮಗಾರಿ ಕೂಡ ಪ್ರಯಾಣಿಕರಿಗೆ ತೀವ್ರ ಅನಾನುಕೂಲತೆಯನ್ನ ಉಂಟುಮಾಡಿದೆ. ರಸ್ತೆ ಕೆಲಸವು ಸಮಯ ತೆಗೆದುಕೊಳ್ಳುತ್ತದೆ ಎಂದು ನಾವು ಅರ್ಥಮಾಡಿಕೊಂಡಿದ್ದೇವೆ. ಆದರೆ, ಉತ್ತಮ ಯೋಜನೆ ಇರಬೇಕು. ಎರಡು ವರ್ಷಗಳಿಗಿಂತ ಹೆಚ್ಚು ಸಮಯ ಕಳೆದಿದೆ. ಇನ್ನೂ ತಡ ಮಾಡಿದರೆ, ಪ್ರಯಾಣಿಕರಿಗೆ ಹೆಚ್ಚಿನ ತೊಂದರೆ ಅನುಭವಿಸಲಿದ್ದಾರೆ ಎಂದು ತುಮಕೂರು ಮೂಲದ ಉದ್ಯಮಿಯೊಬ್ಬರು ಅಸಮಾಧಾನ ಹೊರಹಾಕಿದರು ಎಂದು ವರದಿಯಾಗಿದೆ. ಒಟ್ಟಿನಲ್ಲಿ ಈ ಹೆದ್ದಾರಿಯ ಅಗಲಿಕರಣ ಹಾಗೂ ಸರ್ವೀಸ್ ರಸ್ತೆಗಳು ಪೂರ್ಣ ಆದ್ರೆ, ಸಮಯ ಉಳಿತಾಯ ಆಗಲಿದೆ. ಇದರಿಂದ ಪ್ರಯಾಣಿಕರಿಗೆ ತುಂಬಾ ಅನುಕೂಲ ಆದಂತಾಗಲಿದೆ.












Click it and Unblock the Notifications